ಕಲ್ಯಾಣ ಮಂಡಳಿಯಲ್ಲಿ ಲೋಪ : ಸರಿಪಡಿಸಲು ಆಗ್ರಹ

ದಾವಣಗೆರೆ, ಮಾ.9- ಕಾರ್ಮಿಕ ಇಲಾಖೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುವಂತೆ ಹಾಗೂ ನಿಂತಿರುವ ಕೋವಿಡ್ ನ 5 ಸಾವಿರ ರೂ. ಪರಿಹಾರವನ್ನು ಕೂಡಲೇ ಮಂಜೂರು ಮಾಡುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನಗರದಲ್ಲಿಂದು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿ ಮುಖೇನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರದ ಮಂತ್ರಿಗಳು ಅತ್ಯಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡು ಇಡೀ ಮಹಿಳಾ ಸಮುದಾಯಕ್ಕೆ ಕಳಂಕ ತಂದಿದ್ದಾರೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ದಿಕ್ಕು ತಪ್ಪಿದೆ. ತಮ್ಮ ಆಡಳಿತ ವೈಫಲ್ಯ ಮರೆಮಾಚಲು ಸರ್ಕಾರಗಳು ಇಲ್ಲಸಲ್ಲದ ಕಾನೂನು ಜಾರಿಗೆ ತರಲು ಮುಂದಾಗುತ್ತಿವೆ. ಕಾರಣ ಸರ್ಕಾರ ಈ ಕೂಡಲೇ ಜನ ವಿರೋಧಿ ನೀತಿ ಕೈಬಿಟ್ಟು ಅಭಿವೃದ್ಧಿ ಯೋಜನೆ ಜಾರಿಗೊಳಿಸಲು ಮುಂದಾಗಲಿ ಎಂದು ಕಾರ್ಮಿಕ ಮುಖಂಡ ಸಾತಿ ಸುಂದರೇಶ್ ಆಗ್ರಹಿಸಿದರು.

ಗುರುತಿನ ಚೀಟಿ ಹೊಂದಿದ ಎಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಾಲ್ಲೂಕು ಮತ್ತು ಹೋಬಳಿ ಮಟ್ಟದಲ್ಲಿ ಸರ್ಕಾರಿ ಮತ್ತು ಅರೆ ಸರ್ಕಾರಿ ಜಮೀನನ್ನು ಖರೀದಿ ಮಾಡಿ ಖಾಲಿ ನಿವೇಶನ ನೀಡಿ ಮನೆ ನಿರ್ಮಾಣ ಮಾಡಿಕೊಡಬೇಕು. ಕಟ್ಟಡ ನಿರ್ಮಾಣ ಕಾರ್ಮಿಕರು ಅಪಘಾತದಿಂದಾಗಲೀ ಮತ್ತು ಸ್ವಾಭಾವಿಕವಾಗಿ ಸಾವು ಸಂಭವಿಸಿದ್ದಲ್ಲಿ ಅವರ ಅವಲಂಬಿತ ಕುಟುಂಬಕ್ಕೆ 10 ಲಕ್ಷ ಪರಿಹಾರ ಸಹಾಯಧನ ನೀಡಬೇಕು. 60 ವರ್ಷ ಪೂರೈಸಿದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಪ್ರತಿ ತಿಂಗಳು 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕೆಂದು ಕಾರ್ಮಿಕ ಮುಖಂಡರ ಹೆಚ್.ಜಿ. ಉಮೇಶ್ ಒತ್ತಾಯಿಸಿದರು.

ಕಾರ್ಮಿಕರ ಕುಟುಂಬವನ್ನು ಒಳಗೊಂಡಂತೆ ಇಎಸ್‍ಐ ಮತ್ತು ಪಿಎಫ್ ಜಾರಿಮಾಡಬೇಕು. ಫಲಾನುಭವಿ ಮತ್ತು ಅವರ ಇಬ್ಬರು ಮಕ್ಕಳಿಗೆ ಮದುವೆ ಸಹಾಯ ಧನದ ಹಣವನ್ನು ಗುರುತಿನ ಚೀಟಿ ಹೊಂದಿದ ಫಲಾ ನುಭವಿಗಳಿಗೆ ನೀಡಬೇಕು. ಇಡೀ ರಾಜ್ಯಾದ್ಯಂತ ಸೇವಾಸಿಂಧು  ಕೇಂದ್ರಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಗುರುತಿಸುವಿಕೆಯ ವ್ಯವಸ್ಥೆಯನ್ನು ಕಲ್ಪಿಸಬೇಕು. ತದನಂತರ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದ ವ್ಯಕ್ತಿಗಳಿಗೆ ಗುರುತಿನ ಚೀಟಿ ನೀಡಲಾಗಿದೆ. ಇಂತಹ ಅನರ್ಹ ಗುರುತಿನ ಚೀಟಿ  ಹೊಂದಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾರ್ಡನ್ನು ರದ್ದು ಮಾಡಬೇಕು. ಅಲ್ಲದೆ ಈ ಕೂಡಲೇ ಸೇವಾ ಸಿಂಧು ಕೇಂದ್ರದಲ್ಲಿ ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ನವೀಕರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡಿದರು.

ಈ ಹಿಂದೆ ಕಲ್ಯಾಣ ಮಂಡಳಿಯಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕೈ ಬರಹದ ಗುರುತಿನ ಚೀಟಿಯನ್ನು ಪಡೆದಂತಹ ನಿಜವಾದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ರಾಜ್ಯಾದ್ಯಂತ 10 ಲಕ್ಷದ 152 ಕಾರ್ಮಿಕರಿಗೆ ಕೋಡ್ 19 ಪರಿಹಾರ ಮೊತ್ತ ಮಂಜೂರು ಆಗಿರುವುದಿಲ್ಲ. ಈ ಕೂಡಲೇ ಮಂಜೂರು ಮಾಡಬೇಕು.  ಫಲಾನುಭವಿಗಳು ಮತ್ತು ಅವರ ಅವಲಂಬಿತರು ಯಾವುದೇ ಸಹಾಯ ಧನದ ಅರ್ಜಿ ಸಲ್ಲಿಸಿದ 3 ತಿಂಗಳೊಳಗೆ ಸಹಾಯ ಧನದ ಹಣವನ್ನು ಮಂಜೂರು ಮಾಡಬೇಕು. ಹೆರಿಗೆಯಾದ ಮಹಿಳೆಯರಿಗೆ  ಎರಡು ಮಕ್ಕಳಿಗೆ ತಲಾ ಒಬ್ಬರಿಗೆ 50 ಸಾವಿರ ರೂ. ಸಹಾಯಧನ , ಹೆರಿಗೆ ಭತ್ಯೆ ಸಹಾಯಧನ ನೀಡಬೇಕು ಹಾಗೂ ಕನಿಷ್ಟ 6 ತಿಂಗಳು ಬಾಣಂತನದ ಹಾರೈಕೆ ಮಾಡಿಕೊಳ್ಳಲು ತಿಂಗಳಿಗೆ 10,000 ರೂ.ಗಳಂತೆ 60 ಸಾವಿರ ರೂ.ಗಳ ಸಹಾಯಧನ ನೀಡಬೇಕು. ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಮರಳು ಮತ್ತು ಎಂ. ಸ್ಯಾಂಡ್ ಹಾಗೂ ಕಬ್ಬಿಣದ ಡಿಪೋಗಳನ್ನು ಸರ್ಕಾರದ ಅಧೀನದಲ್ಲಿ ಮಾಡಬೇಕೆಂದರು.

ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ವಿ. ಲಕ್ಷ್ಮಣ, ಭೀಮಾರೆಡ್ಡಿ, ಮುರುಗೇಶ್, ಜಿ.ಆರ್. ನಾಗರಾಜ, ಯರಗುಂಟೆ ಸುರೇಶ್, ಮಹಮದ್ ರಫೀಕ್, ಎಸ್.ಎಂ. ಸಿದ್ದಲಿಂಗಪ್ಪ, ಆವರಗೆರೆ ಸಿದ್ದಲಿಂಗಪ್ಪ, ಶಿವಕುಮಾರ್ ಡಿ. ಶೆಟ್ಟರ್, ಡಿ. ಷಣ್ಮುಗಂ, ಬಿ. ದುಗ್ಗಪ್ಪ, ನಾಗಮ್ಮ, ನೇತ್ರಾವತಿ, ದಾದಾಪೀರ್, ಸುರೇಶ್ ಸೇರಿದಂತೆ ಹಲವಾರು ಕಾರ್ಮಿಕರು ಪಾಲ್ಗೊಂಡಿದ್ದರು.

error: Content is protected !!