ದೂಡಾ ಕಚೇರಿ ಗಣಕೀಕರಣ ಸಭೆ

ದೂಡಾ ಕಚೇರಿ ಗಣಕೀಕರಣ ಸಭೆ - Janathavaniದಾವಣಗೆರೆ, ಮಾ. 9-  ದೂಡಾದ ಪ್ರತಿಯೊಂದು ಸೇವೆಯು ಹಾಗೂ ವಿನ್ಯಾಸಗಳು (ಪ್ಲ್ಯಾನ್) ಸಾರ್ವಜನಿಕರಿಗೆ ಸುಲಭವಾಗಿ ಸಿಗು ವಂತೆ ಮಾಡಲು ಹಾಗೂ ದೂಡಾ ಕಛೇರಿಯನ್ನು ಸಂಪೂರ್ಣ ಗಣಕೀಕರಣ ಮಾಡುವ ಕುರಿತು ಮಂಗಳವಾರ ಬೆಂಗಳೂರಿನ ಸಾಫ್ಟ್‍ವೇರ್ ಕಂಪನಿ ಯೊಂದಿಗೆ ದೂಡಾ ಕಚೇರಿಯಲ್ಲಿ ಸಭೆ ನಡೆಯಿತು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮತ್ತು ಆಯುಕ್ತ ಬಿ.ಟಿ.ಕುಮಾರಸ್ವಾಮಿ ಇವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಪ್ರಾಧಿಕಾರದ ಎಲ್ಲಾ ಶಾಖೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳು ಹಾಗೂ ಬೆಂಗಳೂರಿನಿಂದ ಆಗಮಿಸಿದ ಸಾಫ್ಟ್‍ವೇರ್ ಕಂಪನಿಯ ಪ್ರತಿನಿಧಿಗಳು ಹಾಜರಿದ್ದರು. 

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಪ್ರತಿನಿತ್ಯ ನೂರಾರು ಜನ ದಾಖಲೆಗಳನ್ನು ಅರಸಿ ಬರುತ್ತಿರುತ್ತಾರೆ ಹಾಗೂ ಸಾರ್ವಜನಿಕರಿಗೆ ದಾವಣಗೆರೆ ನಗರದ ಅಥವಾ ದೂಡಾ ವ್ಯಾಪ್ತಿಯಲ್ಲಿರುವ ನಿವೇಶನಗಳಲ್ಲಿ ಯಾವುದು ಅನುಮೋದಿತ, ಯಾವುದು ಅನುಮೋದಿತ ವಲ್ಲ ಎಂಬುದು ತಿಳಿಯುವುದು ಕಷ್ಟಕರವಾಗಿರುತ್ತದೆ. 

ಅನೇಕ ಮುಗ್ದ, ಬಡವ, ಮಧ್ಯಮ ವರ್ಗದವರಿಗೆ ಸಾಕಷ್ಟು ಅನಾನುಕೂಲಗಳು ಆಗುತ್ತಿರುವುದು ಮತ್ತು ಎಷ್ಟೋ ಕಡೆ ಪಾರ್ಕ್, ರಸ್ತೆ, ಸಿ.ಎ. ನಿವೇಶನಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಗಮನಿಸಲಾಗಿದೆ. ಈ ಬಗ್ಗೆ ಹಾಗೂ ಹಾಲಿ ಇರುವ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಿ, ಪರಿ ಶೀಲಿಸಿ ಅವುಗಳ ನೈಜತೆ ಖಚಿತಪಡಿಸಿಕೊಂಡು ವೆಬ್‍ ಸೈಟ್ ಮೂಲಕ ಪ್ರತಿಯೊಂದು ನಕ್ಷೆಯು ಸಾರ್ವಜನಿಕ ವೀಕ್ಷಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಇಂದು ಸಾಫ್ಟ್‍ವೇರ್ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು.

ಮುಂಬರುವ ದಿನಗಳಲ್ಲಿ ದೂಡಾ ಕಛೇರಿಯನ್ನು ಸಂಪೂರ್ಣವಾಗಿ ಪೇಪರ್‍ಲೆಸ್ ಆಫೀಸ್ (Paperless Office) ಮಾಡುವ ನಿಟ್ಟಿನಲ್ಲಿ ಅಧಿಕಾರಿ ಮತ್ತು ನೌಕರರಿಗೆ ಈ ಬಗ್ಗೆ ಹೆಚ್ಚಿನ ತರಬೇತಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಪೂರಕ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿಯೂ ಸಾಫ್ಟ್‍ವೇರ್ ತಂತ್ರಜ್ಞರೊಂದಿಗೆ ಚರ್ಚಿಸಲಾಯಿತು ಹಾಗೂ ಆದಷ್ಟು ಬೇಗ ಇದನ್ನು ದೂಡಾ ಕಛೇರಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಮತ್ತು ಇದಕ್ಕೆ ಬೇಕಾಗುವ ಆರ್ಥಿಕ ವೆಚ್ಚವನ್ನು ಈ ಬಾರಿಯ ಆಯ-ವ್ಯಯದಲ್ಲಿ ಮೀಸಲಿಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. 

ಸಭೆಯಲ್ಲಿ ಪ್ರಾಧಿಕಾರದ ಸದಸ್ಯ ಜಯರುದ್ರೇಶ್, ಜಂಟಿ ನಿರ್ದೇಶಕ ಎಂ.ಅಣ್ಣಪ್ಪ, ಸಹಾಯಕ ನಿರ್ದೇಶಕ ಬಿ.ರೇಣುಕಾಪ್ರಸಾದ್, ಸಹಾಯಕ ಕಾರ್ಯಪಾಲಕ ಅಭಿಯಂತರ  ಕೆ.ಹೆಚ್. ಶ್ರೀಕರ್, ಸಹಾಯಕ ಇಂಜಿನಿಯರಾದ ಎನ್.ಸುಜಯ್‍ಕುಮಾರ್ ಮತ್ತು ನಗರ ಯೋಜಕರಾದ ಭರತಕುಮಾರ್.ಟಿ.ಪಿ  ಸಭೆಯಲ್ಲಿ ಉಪಸ್ಥಿತರಿದ್ದರು.

error: Content is protected !!