ಉಕ್ಕಡಗಾತ್ರಿ ರಸ್ತೆಗಳು ಸಂಚಾರಕ್ಕೆ ಮುಕ್ತ
ಮಲೇಬೆನ್ನೂರು, ಜು.26- ರಾಜ್ಯದಲ್ಲಿ ಕಳೆದ ವಾರ ಅಬ್ಬರಿಸಿದ ವರುಣನ ಆರ್ಭಟ ಕಡಿಮೆಯಾಗಿದ್ದು, ಉಕ್ಕಿ ಹರಿದ ಹಳ್ಳ – ಕೊಳ್ಳ, ನದಿಗಳಲ್ಲೂ ನೀರಿನ ಮಟ್ಟ ಗಣನೀಯವಾಗಿ ಇಳಿಮುಖವಾಗಿದೆ. ಇದರಿಂದಾಗಿ ಜನ ನಿಟ್ಟುಸಿರು ಬಿಡುವಂತಾಗಿದೆ.
ತುಂಗಭದ್ರಾ ನದಿಯ ಹಿನ್ನೀರಿನಲ್ಲಿ ಮುಳುಗಡೆ ಯಾಗಿದ್ದ ಉಕ್ಕಡಗಾತ್ರಿ – ತುಮ್ಮಿನಕಟ್ಟೆ ರಸ್ತೆ ಮತ್ತು ಉಕ್ಕಡಗಾತ್ರಿ – ಪತ್ತೇಪುರ ರಸ್ತೆಗಳ ಸಂಪರ್ಕ ಸೇತುವೆಗಳು ಸೋಮವಾರ ನದಿಯಲ್ಲಿ ನೀರಿನ ಹರಿವು ಇಳಿಕೆ ಆಗಿದ್ದರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಿದ್ದವು.
ಗಾಜನೂರಿನ ತುಂಗಾ ಜಲಾಶಯಕ್ಕೆ ಒಳಹರಿವು ಕಡಿಮೆ ಆಗಿರುವುದರಿಂದ ನದಿಗೆ ಹರಿಯುವ ನೀರಿನ ಪ್ರಮಾಣವು 30 ಸಾವಿರ ಕ್ಯೂಸೆಕ್ಸ್‌ಗೆ ಇಳಿದಿದೆ.
ಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಇಳಿಕೆ ಆಗಿದ್ದು, ಸೋಮವಾರ ಬೆಳಿಗ್ಗೆ 24,770 ಕ್ಯೂಸೆಕ್ಸ್ ಒಳಹರಿವು ಇತ್ತು. ಸಂಜೆ ವೇಳೆಗೆ ಮತ್ತಷ್ಟು ಕಡಿಮೆ ಆಗಿತ್ತು ಎನ್ನಲಾಗಿದೆ.
ಜಲಾಶಯದ ನೀರಿನ ಮಟ್ಟ 180 ಅಡಿ ಆಗಿದ್ದು, ಜಲಾಶಯ ಭರ್ತಿಗೆ 6 ಅಡಿ ಮಾತ್ರ ಬಾಕಿ ಇದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 154 ಅಡಿ ನೀರಿತ್ತು.
ನಾಲೆಗೆ ನೀರು : ಭದ್ರಾ ಜಲಾಶಯದಿಂದ ಬಲದಂಡೆ ಕಾಲುವೆಗೆ ಭಾನುವಾರದಿಂದ 1 ಸಾವಿರ ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದ್ದು, ಹಂತ – ಹಂತವಾಗಿ ನೀರಿನ ಪ್ರಮಾಣವನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಮುನ್ಸೂಚನೆ : ಮತ್ತೆ ಮಳೆ ಬರುವ ಮುನ್ಸೂಚನೆ ಇದ್ದು, ಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಾದರೆ ಯಾವುದೇ ಕ್ಷಣದಲ್ಲಿ ಜಲಾಶಯದ ಕ್ರೇಸ್ಟ್ ಗೇಟ್‌ಗಳ ಮೂಲಕ ನದಿಗೆ ಹೆಚ್ಚುವರಿ ನೀರನ್ನು ಬಿಡಲಾಗುವುದು. ಆದ್ದರಿಂದ ನದಿ ಪಾತ್ರದ ಜನರು ಎಚ್ಚರಿಕೆ ವಹಿಸುವಂತೆ ಭದ್ರಾ ಅಧೀಕ್ಷಕ ಅಭಯಂತರ ಎಂ.ಚಂದ್ರಹಾಸ ಅವರು ತಿಳಿಸಿದ್ದಾರೆ.
ಹೊಸಪೇಟೆ ಡ್ಯಾಂನಿಂದ ನದಿಗೆ ನೀರು : ಹೊಸಪೇಟೆ ಸಮೀಪ ಇರುವ ತುಂಗಭದ್ರಾ ಜಲಾಶಯಕ್ಕೆ ಭಾನುವಾರ ಒಂದು ಲಕ್ಷದ ಅರವತ್ತೆಂಟು ಸಾವಿರ ಕ್ಯೂಸೆಕ್ಸ್ ಒಳಹರಿವು ಇದ್ದ ಕಾರಣ ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಕ್ರೇಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. 1633 ಅಡಿ ಪೂರ್ಣ ಮಟ್ಟದ ತುಂಗಭದ್ರಾ ಜಲಾಶಯದಲ್ಲೀಗ 1630 ಅಡಿ ನೀರು ದಾಖಲಾಗಿದೆ.
ಮಳೆ ಸಾಧ್ಯತೆ : ರಾಜ್ಯದಲ್ಲಿ ಇನ್ನೂ ಕೆಲವು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.