ದಾವಣಗೆರೆ, ಮಾ. 9- ತಾಯಿ ಇಲ್ಲದೆ ಜನ್ಮವಿಲ್ಲ, ಮಹಿಳೆ ಇಲ್ಲದ ಮನೆಯಿಲ್ಲ, ಸ್ತ್ರೀ ಇಲ್ಲದ ಜಗವನ್ನು ಊಹಿಸಲೂ ಸಾಧ್ಯವಿಲ್ಲ. ಮನೆಯ ಸಂಸತ್ತನ್ನು ನಿಭಾಯಿಸುವ ಮುಖ್ಯಮಂತ್ರಿಯಾಗಿ ಜವಾಬ್ದಾರಿಯನ್ನು ಹೊರುವವಳು ಹೆಣ್ಣು ಎಂದು ಹೇಳುವ ಮೂಲಕ ಹೆಣ್ಣಿನ ಮಹತ್ವ ಮತ್ತು ಪ್ರಾಮುಖ್ಯತೆಯನ್ನು ಸಮರೇಂದ್ರ ಪಾಣಿಗ್ರಹಿ ಹೊಗಳಿದರು.
ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ (ಸಿಬಿಎಸ್ಇ) ಶಾಲೆಯಲ್ಲಿ ನಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಯ ಶೈಕ್ಷಣಿಕ ಮಾರ್ಗದರ್ಶಕ ಸಿ. ಮಂಜಪ್ಪ ಮಾತನಾಡಿ, 12ನೇ ಶತಮಾನದಲ್ಲಿ ಸ್ತ್ರೀಗೆ ಮಹತ್ವವನ್ನು ಮತ್ತು ಸ್ವಾತಂತ್ರ್ಯವನ್ನು ನೀಡುವಲ್ಲಿ ಸಮಾಜ ಮಾಡಿದ ಅನ್ಯಾಯವನ್ನು ವಿರೋಧಿಸಿ ಹಲವು ನಾಯಕರು, ಸಮಾಜ ಸುಧಾರಕರು ಹೋರಾಟ ನಡೆಸಿದ್ದರು. ಆದರೆ, ಇಂದು ಎಲ್ಲ ರಂಗಗಳಲ್ಲೂ ಹೆಣ್ಣು ಸ್ವತಂತ್ರಳಾಗಿ ತನ್ನ ಜೀವನವನ್ನು ಕಟ್ಟಿಕೊಳ್ಳುವಲ್ಲಿ ಸಮರ್ಥವಾದ ದಾರಿಯನ್ನು ಕಂಡುಕೊಂಡಿದ್ದಾಳೆ ಎಂದು ಹೇಳಿದರು.
ಹಿಂದಿ ಭಾಷಾ ವಿಭಾಗದ ಮುಖ್ಯಸ್ಥ ಪ್ರಭು, ಶಾಲೆಯ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಎನ್.ಎ.ಸುಮಂಗಲ, ಶಾಲೆಯ ಪ್ರಾಥಮಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಸುಮಾ ಕುಲಕರ್ಣಿ, ಪ್ರಾಥಮಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ರಾದ ಶ್ರೀಮತಿ ಎಲ್ಸಿ ಲೂಯಿಸ್ ಮಾತನಾಡಿದರು.
ಕನ್ನಡ ಶಿಕ್ಷಕರಾದ ಎನ್.ವೈ. ಲಿಂಗರಾಜ್ ಸ್ವಾಗತಿಸಿದರು. ಸಮಾಜ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಸೈಯದ್ ಆರೀಫ್ ವಂದಿಸಿದರು.