ಕೊರೊನಾ ಸೋಂಕಿನಿಂದಾಗಿ ಬಂದ್ ಆಗಿದ್ದ ಪದವಿ ಕಾಲೇಜುಗಳು ಪುನರಾರಂಭ
ದಾವಣಗೆರೆ, ಜು. 26 – ಕೊರೊನಾದಿಂದಾಗಿ ಬಂದ್ ಆಗಿದ್ದ ಪದವಿ ಹಾಗೂ ಸ್ನಾತಕೋತ್ತರ ನೇರ ತರಗತಿಗಳು ಸೋಮವಾರದಿಂದ ಪುನರಾರಂಭವಾಗಿವೆ. ಲಸಿಕೆ ಪಡೆದುಕೊಂಡಿರುವ ವಿದ್ಯಾರ್ಥಿಗಳು ಹೊಸ ಉತ್ಸಾಹದಿಂದ ಕಾಲೇಜಿನ ಕಡೆ ಹೆಜ್ಜೆ ಹಾಕಿದ್ದಾರೆ.
ಏಪ್ರಿಲ್ 27ರಿಂದ ಹೇರಲಾಗಿದ್ದ ಲಾಕ್ಡೌನ್ನಿಂದಾಗಿ ಶಾಲಾ – ಕಾಲೇಜುಗಳು ಬಂದ್ ಆಗಿದ್ದವು. ಮೂರು ತಿಂಗಳ ನಂತರ ಕಾಲೇಜಿನ ಬಾಗಿಲು ವಿದ್ಯಾರ್ಥಿಗಳಿಗೆ ತೆರೆದಿದೆ. ನಗರದ 23 ಪದವಿ ಕಾಲೇಜುಗಳೂ ಸೇರಿದಂತೆ ಜಿಲ್ಲೆಯ 40 ಕಾಲೇಜುಗಳು ಆರಂಭ ಕಂಡಿವೆ.
ಇದೇ ವೇಳೆ ಪಿಯುಸಿ ಮುಗಿಸಿರುವ ವಿದ್ಯಾ ರ್ಥಿಗಳು ಪ್ರವೇಶಕ್ಕಾಗಿ ಅರ್ಜಿಗಳನ್ನು ಪಡೆಯಲು ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಪ್ರವೇಶಕ್ಕಾಗಿ ಅರ್ಜಿಗಳನ್ನು ಪಡೆಯಲು ವಿದ್ಯಾರ್ಥಿಗಳು ಸಾಲುಗಟ್ಟಿ ನಿಂತಿದ್ದು ಕಂಡು ಬಂತು.
ಸರ್ಕಾರದ ಮಾರ್ಗಸೂಚಿಯ ಅನ್ವಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಲಸಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಸ್ಯಾನಿಟೈಜೇಷನ್ ನಂತರ ಕಾಲೇಜುಗಳನ್ನು ತೆರೆಯಲಾಗಿದೆ.
ಈ ಬಗ್ಗೆ ವಿವರ ನೀಡಿರುವ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಶಂಕರ್ ಆರ್. ಶೀಲಿ, ಕಾಲೇಜಿಗೆ ಬರಲು ಲಸಿಕೆ ಪಡೆಯುವುದು ಕಡ್ಡಾಯವಾಗಿದೆ. ಕಾಲೇಜಿನಲ್ಲಿ ಪ್ರಸಕ್ತ 3,800 ವಿದ್ಯಾರ್ಥಿಗಳಿದ್ದು, ಇವರಲ್ಲಿ 3,300 ವಿದ್ಯಾರ್ಥಿಗಳು ಲಸಿಕೆ ಪಡೆದಿದ್ದಾರೆ. ಉಳಿದ ಹಲವರು ಬೇರೆ ಬೇರೆ ಊರು ಹಾಗೂ ಜಿಲ್ಲೆಯವರಾಗಿದ್ದು, ಅಲ್ಲಿ ಲಸಿಕೆ ಪಡೆದಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಮೊದಲ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಈಗಾಗಲೇ ಟ್ಯಾಬ್ ನೀಡಲಾಗಿದೆ. ಅವರು ಆನ್ಲೈನ್ – ಇಲ್ಲವೇ ಆಫ್ಲೈನ್ ಯಾವುದರಲ್ಲಾದರೂ ಹಾಜರಾಗಲು ಸದ್ಯಕ್ಕೆ ಅನುಮತಿ ನೀಡಲಾಗಿದೆ ಎಂದರು.
ಈ ಬಾರಿ ಆನ್ಲೈನ್ನಲ್ಲಿ ಪದವಿ ಪ್ರವೇಶಕ್ಕೆ ರಾಜ್ಯ ಸರ್ಕಾರ ಆನ್ಲೈನ್ ತಂತ್ರಾಂಶ ರೂಪಿಸಿದೆ. ಶುಲ್ಕ ಯಾವ ರೀತಿ ಇರಲಿದೆ ಎಂಬುದೂ ಇತ್ಯರ್ಥವಾಗಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ಪಡೆಯಬಹುದೇ – ಬೇಡವೇ ಎಂಬುದು ಅಸ್ಪಷ್ಟವಾಗಿದೆ. ಹೀಗಾಗಿ ಸದ್ಯಕ್ಕೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿಲ್ಲ. ಪ್ರವೇಶದ ಅರ್ಜಿಗಳನ್ನು ಮಾತ್ರ ವಿತರಿಸುತ್ತಿದ್ದೇವೆ.
– ಡಾ.ಬಿ.ಪಿ. ಕುಮಾರ್, ಎ.ವಿ.ಕೆ. ಕಾಲೇಜು ಪ್ರಾಂಶುಪಾಲ
ವಿದ್ಯಾರ್ಥಿಗಳ ಹೆಚ್ಚಳ, ಮೂಲಭೂತ ಸೌಲಭ್ಯಗಳ ಕೊರತೆ
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಗಾಗಲೇ 3,800 ವಿದ್ಯಾರ್ಥಿಗಳಿದ್ದಾರೆ. ಈ ವರ್ಷ ಪಿ.ಯು.ಸಿ.ಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಈ ವರ್ಷ ವಿದ್ಯಾರ್ಥಿಗಳ ಸಂಖ್ಯೆ 5 ಸಾವಿರ ದಾಟುವ ನಿರೀಕ್ಷೆ ಇದೆ ಎಂದು ಕಾಲೇಜಿನ ಪ್ರಾಂಶುಪಾಲ ಶಂಕರ್ ಆರ್. ಶೀಲಿ ಹೇಳಿದ್ದಾರೆ.
ಕಾಲೇಜಿನಲ್ಲಿ ಕೊಠಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಪ್ರಸಕ್ತ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಎರಡು ಪಾಳೆಯಲ್ಲಿ ತರಗತಿಗಳು ನಡೆಯುತ್ತಿವೆ. ಹೆಚ್ಚಿನ ವಿದ್ಯಾರ್ಥಿಗಳು ಸೇರ್ಪಡೆಯಾದರೆ, ಇನ್ನೂ ಹೆಚ್ಚಿನ ಕೊಠಡಿಗಳು ಬೇಕಾಗಲಿವೆ ಎಂದವರು ತಿಳಿಸಿದ್ದಾರೆ.
ಕಾಲೇಜಿಗೆ ಬರುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬದವರು. ಸಾಕಷ್ಟು ಜನರು ಕೆಲಸ ಮಾಡಿಕೊಳ್ಳುತ್ತಲೇ ಕಲಿಕೆಯಲ್ಲಿದ್ದಾರೆ ಎಂದವರು ಹೇಳಿದ್ದಾರೆ.
ಕಾಲೇಜಿಗೆ ದಾಖಲಾದ ವಾರದ ವೇಳೆಗೆ ಹಾಸ್ಟೆಲ್ಗೆ ಪ್ರವೇಶ ಸಿಗಲಿದೆ. ನಂತರದಲ್ಲಿ ವಿದ್ಯಾರ್ಥಿಗಳ ಹಾಜರಾತಿ ಇನ್ನಷ್ಟು ಹೆಚ್ಚಾಗಲಿದೆ ಎಂದವರು ಹೇಳಿದ್ದಾರೆ.
ಎ.ವಿ.ಕೆ. ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಪಿ. ಕುಮಾರ್ ಮಾತನಾಡಿದ್ದು, ಕಾಲೇಜಿನಲ್ಲಿ 1,604 ಪದವಿ ವಿದ್ಯಾರ್ಥಿನಿಯರಿದ್ದಾರೆ. ಅವರಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳು ಬಂದಿದ್ದಾರೆ.
ಈ ಬಾರಿ ಆನ್ಲೈನ್ನಲ್ಲಿ ಪದವಿ ಪ್ರವೇಶಕ್ಕೆ ತಂತ್ರಾಂಶ ರೂಪಿಸಲಾಗಿದೆ. ಶುಲ್ಕ ಯಾವ ರೀತಿ ಇರಲಿದೆ ಎಂಬುದೂ ಇತ್ಯರ್ಥವಾಗಿಲ್ಲ. ಪಠ್ಯೇತರ ಚಟುವಟಿಕೆಗಳಿಗೆ ಶುಲ್ಕ ಪಡೆಯಬಹುದೇ – ಬೇಡವೇ ಎಂಬುದು ಅಸ್ಪಷ್ಟವಾಗಿದೆ. ಹೀಗಾಗಿ ಸದ್ಯಕ್ಕೆ ಪ್ರವೇಶ ಪ್ರಕ್ರಿಯೆ ನಡೆಯುತ್ತಿಲ್ಲ. ಪ್ರವೇಶದ ಅರ್ಜಿಗಳನ್ನು ಮಾತ್ರ ವಿತರಿಸುತ್ತಿದ್ದೇವೆ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಹಳೇ ಕುಂದುವಾಡದ ಪ್ರಥಮ ವರ್ಷದ ಬಿ.ಎ. ವಿದ್ಯಾರ್ಥಿ ಸೋಮಲಿಂಗಪ್ಪ, ಸರ್ಕಾರ ಟ್ಯಾಬ್ ಕೊಟ್ಟಿದ್ದರೂ ಸಹ ನೆಟ್ವರ್ಕ್ ಸಮಸ್ಯೆ ಎದುರಾಗಿತ್ತು. ಹೀಗಾಗಿ ಆನ್ಲೈನ್ ತರಗತಿ ಅಸಮರ್ಪಕವಾಗಿತ್ತು. ನೇರ ತರಗತಿಗಳು ಆರಂಭವಾಗಿದ್ದು ಸಂತೋಷ ತಂದಿದೆ ಎಂದಿದ್ದಾರೆ.
ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ಕೆ.ಪಿ. ಸುಷ್ಮ ಮಾತನಾಡಿದ್ದು, ಆನ್ಲೈನ್ನಲ್ಲಿ ಕಲಿಕೆ ಮುಂದುವರೆದಿತ್ತಾದರೂ ಪಠ್ಯೇತರ ಚಟುವಟಿಕೆ ಸಾಧ್ಯವಾಗಿರಲಿಲ್ಲ. ಇನ್ನೊಂದು ತಿಂಗಳು ಮಾತ್ರ ಕಾಲೇಜು ಅವಧಿ ಇದೆ. ಇಷ್ಟರಲ್ಲಾದರೂ ಸ್ನೇಹಿತೆಯರ ಜೊತೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದಿದ್ದಾರೆ.
ಒಟ್ಟಾರೆ ಭವಿಷ್ಯದ ಹಲವು ಕನಸುಗಳನ್ನು ಹೊತ್ತ ವಿದ್ಯಾರ್ಥಿಗಳಿಗೆ ಕಾಲೇಜು ಕಲಿಕೆಯ ಮಾರ್ಗ ತೆರವಾಗಿದೆ. ಕೊರೊನಾದ ಕರಿನೆರಳಿನಿಂದ ಮುಕ್ತವಾಗಿ ಮುಂದಿನ ಕಲಿಕೆ ಸುಸೂತ್ರವಾಗಲಿ ಎಂದು ಹಾರೈಸಬೇಕಿದೆ.