ಇಂದಿನಿಂದ ಕೃಷಿ ಕೂಲಿಕಾರರಿಂದ ದೇಶವ್ಯಾಪಿ ಪ್ರತಿಭಟನೆಗೆ ಕರೆ

ದಾವಣಗೆರೆ, ಜು.25 – ದೇಶದಾದ್ಯಂತ ಹಾಗೂ ದೆಹಲಿ ಗಡಿಗಳಲ್ಲಿ ಕಳೆದ ಎಂಟು ತಿಂಗಳಿಂದಲೂ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳ ವಿರುದ್ಧ ರೈತ ಕಾರ್ಮಿಕರು ಹೋರಾಡುತ್ತಿದ್ದರೂ ನಿರ್ಲಕ್ಷ್ಯ ಮಾಡುತ್ತಿರುವ ಮೋದಿ ಸರ್ಕಾರದ ವಿರುದ್ಧ ಹಾಗೂ ಬೆಲೆ ಏರಿಕೆ ಖಂಡಿಸಿ ದೇಶದಾದ್ಯಂತ ರೈತ-ಕೂಲಿಕಾರ, ಕಾರ್ಮಿಕರ ಮನೆ ಮನೆಗಳಿಗೆ ಹೋಗಿ ಪ್ರಚಾರಾಂದೋಲನ ನಡೆಸಿ ಬರುವ ಆಗಸ್ಟ್ 9 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಪ್ರಾಂತ್ಯ ರೈತ ಸಂಘದ ರಾಜ್ಯ ಮುಖಂಡ ಟಿ. ಯಶವಂತ ತಿಳಿಸಿದ್ದಾರೆ.

ನಗರದ ವಿಮಾ ಪ್ರತಿನಿಧಿಗಳ ಸಭಾಂಗಣದಲ್ಲಿ ನಿನ್ನೆ ನಡೆದ ಸಿಐಟಿಯು, ಕೆಪಿಆರ್ಎಸ್, ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಕೃಷಿ ಭೂಮಿ  ಕಾರ್ಪೊರೇಟ್ ಕಂಪನಿಗಳ ಕೈ ವಶವಾದರೆ ಆಹಾರ ಭದ್ರತೆ ಸಂಪೂರ್ಣ ನಾಶವಾಗಿ ಹಸಿವು, ನಿರುದ್ಯೋಗ ತಾಂಡವವಾಡಲಿದೆ. ಮೋದಿ ಸರ್ಕಾರದ ತಪ್ಪು ನೀತಿಗಳಿಂದ ಕೃಷಿ ರಂಗ ದಿವಾಳಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸಿಐಟಿಯು ರಾಜ್ಯ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿ, ದೇಶದ ಕಾರ್ಮಿಕ ಕಾನೂನುಗಳ ಸುಧಾರಣೆ ಹೆಸರಿನಲ್ಲಿ ರದ್ದುಗೊಳಿಸಿ ಕೇವಲ ನಾಲ್ಕು ಸಂಹಿತೆಗಳನ್ನಾಗಿಸಿದೆ. ಕಾರ್ಮಿಕರನ್ನು ಮಾನವ ಹಕ್ಕುಗಳೇ ಇಲ್ಲದ ಪರಿಸ್ಥಿತಿಗೆ ನೂಕಲಿದೆ. ಒಂದು ಕಡೆ ಕನಿಷ್ಠ ವೇತನ ಹಾಗೂ ಜೀವನ ಭದ್ರತೆ ಕಿತ್ತುಕೊಂಡು ಇನ್ನೊಂದು ಕಡೆ ಅಗತ್ಯ ವಸ್ತುಗಳ ವಿಪರೀತ ಬೆಲೆ ಏರಿಸಿ ದುಡಿಯುವ ಜನರನ್ನು ಸುಲಿಗೆ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ಜನ ವಿರೋಧಿ ನೀತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ ಕ್ವಿಟ್ ಇಂಡಿಯಾ ಚಳುವಳಿ ಸ್ಮರಣಾ ದಿನವಾದ ಆಗಸ್ಟ್ 9 ರಂದು ಜಿಲ್ಲೆಯ ಎಲ್ಲಾ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ಯಶಸ್ವಿ ಮಾಡಲು ಅವರು ಕರೆ ನೀಡಿದರು.

ಸಭೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಆನಂದರಾಜು ಕೆ.ಹೆಚ್. , ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾ ಸಂಚಾಲಕ ಉಮೇಶ್, ಕಟ್ಟಡ ಕಾರ್ಮಿಕರ ಸಂಘದ ಮುಖಂಡ ತಿಮ್ಮಣ್ಣ, ಹರಿಹರ ಬಿರ್ಲಾ ಗ್ರಾಸಿಂ ಕಾರ್ಮಿಕರ ಸಂಘದ ಮುಖಂಡ ಮಲ್ಲನಗೌಡ, ರೈತ ಮುಖಂಡರಾದ ಶ್ರೀನಿವಾಸ್, ಭರಮಪ್ಪ, ಎಸ್.ಎಫ್.ಐ ಮುಖಂಡ ಅನಂತ್ ರಾಜ್ ಇದ್ದರು

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ಹೊನ್ನೂರು ತಿಮ್ಮಣ್ಣ, ಎಸ್.ಎಫ್.ಐ ಮುಖಂಡ ಅನಂತರಾಜ್ ಹರಪನಹಳ್ಳಿ, ರೈತ ಮುಖಂಡ ರಾಜಪ್ಪ, ದಾವಣಗೆರೆ ರೈತ ಮುಖಂಡ ಹಾಲೇಶನಾಯ್ಕ, ಹರಿಹರ ಪಾಲಿಫೈಬರ್ ಕಾರ್ಮಿಕ ಸಂಘದ ಮುಖಂಡ ಮಲ್ಲನಗೌಡ, ಗ್ರಾಮ ಪಂಚಾಯತ್ ನೌಕರರ ಮುಖಂಡ ಹೊನ್ನಾಳಿ ಚಂದ್ರಪ್ಪ, ಬೀದಿಬದಿ ವ್ಯಾಪಾರಿಗ ಸಂಘದ ನಾಗರಾಜ್ ಮೊದಲಾದವರು ಸಭೆಯಲ್ಲಿ ಮಾತನಾಡಿದರು.

error: Content is protected !!