ದಾವಣಗೆರೆ, ಮಾ.8- ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಆಲ್ ಇಂಡಿಯಾ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ ಎಸ್) ಯಿಂದ ನಗರದ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗ ಇಂದು ಬೆಲೆ ಏರಿಕೆಯ ಪ್ರತಿಕೃತಿ ದಹನ ಮಾಡುವುದರ ಮೂಲಕ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಎಐಎಂಎಸ್ ಎಸ್ ನ ಜಿಲ್ಲಾಧ್ಯಕ್ಷೆ ಜ್ಯೋತಿ ಕುಕ್ಕುವಾಡ ಮಾತನಾಡಿ, 110 ವರ್ಷಗಳ ಹಿಂದೆ ಅಮೇರಿಕಾದಲ್ಲಿ 1908 ರಲ್ಲಿ ಗಾರ್ಮೆಂಟ್ ಗಳಲ್ಲಿ ದುಡಿಯುತ್ತಿದ್ದ 30 ಸಾವಿರ ಮಹಿಳಾ ಕಾರ್ಮಿಕರು ತಮ್ಮ ಸಂಕಷ್ಟಗಳ ವಿರುದ್ಧ ಸಿಡಿದೆದ್ದು ತ್ಯಾಗ, ಬಲಿದಾನಗಳಂತಹ ರಕ್ತದೋಕುಳಿ ಹರಿಸಿ ಹೆರಿಗೆ ರಜೆ, ದಿನಕ್ಕೆ 8 ಗಂಟೆಗಳ ದುಡಿತದ ಅವಧಿ, ಮತ ಚಲಾವಣೆ ಇತರೆ ನ್ಯಾಯಯುತ ಹಕ್ಕುಗಳನ್ನು ಗಳಿಸಿಕೊಂಡ ದಿನ. ಈ ಮಹತ್ವದ ದಿನವನ್ನು ವಿಶ್ವದಾದ್ಯಂತ ಅಂದಿನಿಂದ ಇಂದಿನವರೆಗೂ ದುಡಿಯುವ ವರ್ಗ ತಮ್ಮ ಶೋಷಣೆಯ ವಿಮುಕ್ತಿಗಾಗಿ ಸಂಕಲ್ಪ ತೊಡುವ ಹೋರಾಟದ ದಿನ ಎಂದು ತಿಳಿಸಿದರು.
ಆವಿಷ್ಕಾರ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಸುಮಾ ವಿ. ಮಠದ್ ಮಾತನಾಡಿ, ಆಹಾರ ಪದಾರ್ಥ , ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲ ಗಳ ಬೆಲೆ ಗಗನಕ್ಕೇರಿದೆ. ಪ್ರಧಾನಿ ಮೋದಿಯವರು ಉಜ್ವಲ ಯೋಜನೆಯಡಿಯಲ್ಲಿ ಉಚಿತ ಅಡುಗೆ ಅನಿಲ ವಿತರಿಸುವ ನೆಪವೊಡ್ಡಿ ನಂತರದ ದಿನಗಳಲ್ಲಿ ನಿಧಾನವಾಗಿ ಅಡುಗೆ ಅನಿಲದ ಮೇಲಿನ ಸಬ್ಸಿಡಿ ರದ್ದುಗೊಳಿಸಿ ಮಹಿಳೆಯರನ್ನು ಸಂಕಷ್ಟಕ್ಕೆ ನೂಕಿ ದ್ದಾರೆ. ಮಹಿಳೆಯರ ಮತಗಳಿಂದ ರಾಜಕೀಯ ಲಾಭ ಪಡೆದು ವೋಟ್ ಬ್ಯಾಂಕ್ ಲಾಭಿ ಮಾಡು ತ್ತಿದ್ದಾರೆ. ಮಹಿಳಾ ಸಬಲೀಕರಣದ ಹೆಸರಿನಲ್ಲಿ ಹೆಣ್ಣು ಮಕ್ಕಳ ಶೋಷಣೆ ನಡೆಸುತ್ತಿದ್ದಾರೆ. ಈ ಹುನ್ನಾರವನ್ನು ಅರ್ಥ ಮಾಡಿಕೊಂಡು ಶೋಷಣೆ ಯನ್ನು ಮೆಟ್ಟಿ ನಿಲ್ಲಬೇಕು ಎಂದು ಹೇಳಿದರು.
ಎಐಎಂಎಸ್ ಎಸ್ ರಾಜ್ಯಾಧ್ಯಕ್ಷೆ ಬಿ.ಆರ್. ಅಪರ್ಣಾ ಮಾತನಾಡುತ್ತಾ, ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ 3 ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಲಕ್ಷಾಂತರ ರೈತ ಮಹಿಳೆಯರು, ಪುರುಷರಿಗೆ ಸರಿ ಸಮಾನವಾಗಿ ಹೆಗಲು ಕೊಟ್ಟು ಹಗಲಿರುಳು ಎನ್ನದೆ ಹೋರಾಟ ದಲ್ಲಿ ಭಾಗಿಯಾಗಿದ್ದಾರೆ. ನಾವು ಕೂಡ ಇಂತಹ ಹೋರಾಟದ ಭಾಗವಾಗಬೇಕು. ನಮ್ಮ ದೇಶದಲ್ಲಿ ಮಹಿಳೆಯರು ಅಪೌಷ್ಟಿಕತೆಯಿಂದ ಸಾವಿಗೀಡಾಗು ತ್ತಿದ್ದಾರೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂ ದಾಗಿ ಪೌಷ್ಟಿಕ ಆಹಾರಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ ಬೆಲೆ ಏರಿಕೆಯ ವಿರುದ್ಧದ ಹೋರಾಟಕ್ಕೆ ದೇಶದಾದ್ಯಂತ ಮಹಿಳೆಯರು ಸಜ್ಜಾಗಬೇಕು. ಕಾರ್ಮಿಕ ವಿರೋಧಿ , ರೈತ ವಿರೋಧಿ , ಮಹಿಳಾ ವಿರೋಧಿ ಒಟ್ಟಾರೆ ದುಡಿಯು ವರ್ಗದ ಜನತೆಯ ವಿರೋಧಿಯಾಗಿರುವ ಈ ಬಂಡವಾಳ ವ್ಯವಸ್ಥೆಯನ್ನು ಕಿತ್ತೆಸೆದು ಕಾರ್ಮಿಕರ ರಾಜ್ಯವನ್ನು ನಿರ್ಮಾಣ ಮಾಡಲು ಪ್ರಜ್ಞಾವಂತ ರಾಜಕೀಯ ಹೋರಾಟವನ್ನು ಬೆಳೆಸಬೇಕೆಂದು ಕರೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಭಾರತಿ, ಸಂಘಟನಾಕಾರರಾದ ಮಮತಾ, ಹೇಮ, ಸವಿತ , ಸಾಕಮ್ಮ , ಉಚ್ಚೆಂಗಮ್ಮ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.