ದಾವಣಗೆರೆ, ಮಾ.8 – ಮಹಿಳೆ ದೈಹಿಕವಾಗಿ ಅಬಲೆಯಾಗಿದ್ದರೂ, ಮಾನಸಿಕವಾಗಿ ಸಬಲೆಯಾಗಿದ್ದಾಳೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಕೆ.ಬಿ.ಗೀತಾ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಏರ್ಪಡಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಹಾಗೂ ಕಾನೂನು ಮಹಿಳೆಯರಿಗಾಗಿ ಅನೇಕ ಸವಲತ್ತು ನೀಡಿವೆ. ಕಾರಣ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗಿಂತ ಕಡಿಮೆ ಇಲ್ಲ ಎಂದು ಸಾಬೀತುಪಡಿಸಿದ್ದಾಳೆ. ಮಾನಸಿಕವಾಗಿ ಹಾಗೂ ದೈಹಿಕವಾಗಿ ಪುರುಷನೊಂದಿಗೆ ಪೈಪೋಟಿ ನಡೆಸುತ್ತಿದ್ದಾಳೆ. ಇಡೀ ಕುಟುಂಬದ ಜವಾಬ್ಧಾರಿಯನ್ನು ವಹಿಸಿಕೊಳ್ಳುತ್ತಿದ್ದಾಳೆ ಎಂದರು.
ಮಹಿಳಾ ದಿನಾಚರಣೆಯ ಹಿನ್ನೆಲೆಯನ್ನು ವಿವರಿಸಿದ ನ್ಯಾಯಾಧೀಶರು, ಅಂದಿನ ದಿನಗಳಲ್ಲಿ ಮಹಿಳೆಯರಿಂದ ಪುರುಷರಿಗಿಂತ ಹೆಚ್ಚಾಗಿ ದುಡಿಸಿಕೊಂಡು ಕಡಿಮೆ ವೇತನ ನೀಡಿ, ಕೀಳಾಗಿ ಕಾಣಲಾಗುತ್ತಿತ್ತು. ಶೋಷಣೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಮಹಿಳೆಯರು ಪ್ರಪಂಚದಲ್ಲಿ ಮಹಿಳೆಯರ ಅಸ್ತಿತ್ವ ಉಳಿಯಬೇಕಾದರೆ ಸಂಘಟಿತರಾಗ ಬೇಕು. ಸ್ತ್ರೀ ಅಬಲೆ ಅಲ್ಲ ಸಬಲೆ. ಹೆಣ್ಣಿನ ಅಸ್ತಿತ್ವವನ್ನು ಮಹಿಳೆಯರೇ ಉಳಿಸಬೇಕು ಎಂದು ಮಹಿಳೆಯರ ಮತದಾನಕ್ಕೆ, ಸಮಾನ ಕೆಲಸಕ್ಕೆ, ಸಮಾನ ವೇತನಕ್ಕಾಗಿ ರಾಷ್ಟ್ರ ದಾದ್ಯಂತ ಪ್ರತಿಭಟನೆ ನಡೆಸಿದ್ದಾಗಿ ಹೇಳಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಮುಖ್ಯನ್ಯಾಯಿಕ ದಂಡಾಧಿಕಾರಿಗಳಾದ ಪ್ರೀತಿ ಎಸ್. ಜೋಶಿ ಮಾತನಾಡಿ, ಮಹಿಳೆಯರು ಕಾನೂನುಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಉದ್ಯೋಗಸ್ಥ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಅನೇಕ ಕಾಯ್ದೆ ಕಾನೂನುಗಳು ಜಾರಿಯಾಗಿದ್ದು ಮಹಿಳೆಯರು ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ತೂ.ಕ.ಶಂಕರಯ್ಯ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗುತ್ತಿದ್ದು, ಆಕೆಯನ್ನು ಕೇವಲ ಗೌರವಿಸುವುದಲ್ಲದೇ ಸರಿಸಮಾನವಾಗಿ ಕಾಣುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದರು.
ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಹೆಚ್. ಅರುಣ್ ಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಳಾದ ಪ್ರವೀಣ್ ನಾಯಕ್, ನ್ಯಾಯಾಧೀಶರಾದ ರಶ್ಮಿ ಎಂ.ಮರಡಿ, ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳಾದ ನಂದಿನಿ, ಕಾಲೇಜಿನ ಐ.ಕ್ಯೂ.ಎಸ್.ಸಿ. ಸಂಚಾಲಕ ಪ್ರೊ.ಟಿ.ವೀರೇಶ್, ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಎಂ.ಎಲ್.ತ್ರಿವೇಣಿ, ಪ್ರೋ.ಭೀಮಣ್ಣ ಸುಣಗಾರ್, ಡಾ.ಮಹೇಶ್.ಎನ್.ಪಾಟೀಲ್, ಡಾ.ದಾದಾಪೀರ್ ನವಿಲೇಹಾಳ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.