ಹೊಸ ತೆರಿಗೆ ಹೇರದ ಸಾಲದ ಬಜೆಟ್‌

ಬೆಂಗಳೂರು, ಮಾ. 8- ಕೊರೊನಾ ಸಾಂಕ್ರಾಮಿಕ ದಿಂದ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿಯ ಪುನಶ್ಚೇತನಕ್ಕೆ ಹೊಸ ತೆರಿಗೆಯ ಹೊರೆ ಹೇರದೆ, ಹೊಸ ಕಾರ್ಯಕ್ರಮಗಳನ್ನೂ ಪ್ರಕಟಿಸದೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂಗಡ ಪತ್ರದಲ್ಲಿ ಅಭಿವೃದ್ಧಿ ಮಂತ್ರವನ್ನು ಜಪಿಸಿದ್ದಾರೆ. 

ವಿಧಾನಸಭೆಯಲ್ಲಿಂದು 2021-22 ನೇ ಸಾಲಿನ ಮುಂಗಡ ಪತ್ರ ಮಂಡಿಸಿದ ಅವರು, ಕೊರೊನಾ ತಲ್ಲಣಗಳ ನಡುವೆಯೂ, ಇಷ್ಟರ ನಡುವೆಯೂ ಕಳೆದ ಬಾರಿಗಿಂತ ಈ ಬಾರಿಯ ವಿತ್ತೀಯ ಗಾತ್ರವನ್ನು ಸ್ವಲ್ಪಮಟ್ಟಿಗೆ ಹೆಚ್ಚಿಸಿದ್ದಾರೆ.

ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳೆಯರ ಶಿಕ್ಷಣ, ನಗರಾಭಿವೃದ್ಧಿ, ನೀರಾವರಿಗೆ ಹೆಚ್ಚಿನ ಒತ್ತು ನೀಡಿರುವ ಮುಖ್ಯಮಂತ್ರಿ, 2.46 ಲಕ್ಷ ಕೋಟಿ ರೂ. ಗಾತ್ರದ 2021-22 ನೇ ಸಾಲಿನ ಬಜೆಟ್ ಮಂಡಿಸಿದ್ದಲ್ಲದೆ, ಮಾರ್ಚ್ 31, 2022 ರವರೆಗಿನ ವೆಚ್ಚ ನಿರ್ವಹಣೆಗೆ ಪೂರ್ಣ ಆಯವ್ಯಯಕ್ಕೆ ಅಂಗೀಕಾರ ಕೋರಿದ್ದಾರೆ.

ಪ್ರತ್ಯಕ್ಷ ಇಲ್ಲವೇ ಪರೋಕ್ಷವಾಗಿ ಹೊಸ ತೆರಿಗೆ ಪ್ರಸ್ತಾಪ ಮಾಡದಿದ್ದರೂ, ಮಠ-ಮಾನ್ಯ, ಸಂಘ- ಸಂಸ್ಥೆಗಳಿಗೆ ಅನುದಾನ ಇಲ್ಲವೇ ಕಾರ್ಯಕ್ರಮ ಘೋಷಿ ಸುವ ಮೂಲಕ ವಿವಿಧ ಸಮಾಜಗಳನ್ನು ತೃಪ್ತಿಪಡಿಸುವ ಪ್ರಯತ್ನ ಮಾಡಿದ್ದಾರೆ. 

ಕೊರೊನಾದಿಂದ 10 ತಿಂಗಳ ಅವಧಿಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು, ರಾಜಸ್ವ ಸಂಗ್ರಹಣೆ ಆಯವ್ಯಯದ ಅಂದಾಜು ತಲುಪುವ ನಿರೀಕ್ಷೆ ಇರಲಿಲ್ಲ, ಈಗ ಮಂದಗತಿಯಲ್ಲಿ ಏರಿಕೆ ಕಾಣುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

ಆದಾಯದ ಸಂಗ್ರಹದ ಕೊರತೆ ಕಾರಣ ವಾರ್ಷಿಕ ಆದಾಯ ಮತ್ತು ವೆಚ್ಚಗಳಲ್ಲಿ ಅಸಮತೋಲನ ಉಂಟಾಗಿದೆ ಎಂದು ಒಪ್ಪಿಕೊಂಡಿರುವ ಯಡಿಯೂರಪ್ಪ, ಕಳೆದ ಸಾಲಿನಲ್ಲಿ ವಿವಿಧ ಇಲಾಖೆಗಳಿಗೆ ನಿಗದಿಪಡಿಸಿದ ಹಣದಲ್ಲಿ ಕೊರತೆ ಮಾಡದಿದ್ದರೂ, ಅಲ್ಲಿಯೇ ಕೆಲವು ಬದಲಾವಣೆ ಮಾಡಿ, ಇರುವ ಆದಾಯದಲ್ಲೇ ಹೊಸ ಕಾರ್ಯಕ್ರಮ ನೀಡುವ ಪ್ರಯತ್ನ ಮಾಡಿದ್ದಾರೆ. 

ಈ ಬಾರಿ 71,332 ಕೋಟಿ ರೂ.ಗಳನ್ನು ಸಾಲವಾಗಿ ಪಡೆಯ ಲಾಗುವುದು ಎಂದು ಘೋಷಿಸಿರುವ ಯಡಿಯೂರಪ್ಪ, ವಿತ್ತೀಯ ನಿರ್ವಹಣಾ ಕಾಯ್ದೆಯ ನಿಯಮ ಸಡಿಲಿಸಿ ಶೇ. 5ರಷ್ಟು ಸಾಲ ಪಡೆಯಲು ಕೇಂದ್ರ ಸರ್ಕಾರ ಅನುವು ಮಾಡಿಕೊಟ್ಟಿದೆ. ಆದರೆ, ಶೇ. 4ಕ್ಕೂ ಹೆಚ್ಚಿನ ಸಾಲ ಪಡೆಯದಿರಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.

ರಾಜ್ಯದ ಸಾಲದ ಮೇಲಿನ ಮರುಪಾವತಿ ಪ್ರಮಾಣ ಏರಿಕೆಯಾಗಿರುವುದನ್ನು ಪ್ರಸ್ತಾಪಿಸಿದ ಅವರು, ಸಾಲದ ಮೇಲಿನ ಅಸಲು, ಬಡ್ಡಿ ಹಾಗೂ ಚಕ್ರಬಡ್ಡಿಗಾಗಿ ಈ ವರ್ಷ 14,565 ಕೋಟಿ ರೂ. ಪಾವತಿಸಬೇಕಿದೆ ಎಂದರು.

ಬಜೆಟ್‍ಗೆ ಅಗತ್ಯವಾದ ಹಣದ ಪೈಕಿ ಶೇ. 29 ರಷ್ಟನ್ನು ಸಾಲಗಳ ಮೂಲಕ, ಶೇ. 50 ರಷ್ಟನ್ನು ರಾಜ್ಯ ತೆರಿಗೆಗಳ ಮೂಲಕ, ಶೇ. 10 ರಷ್ಟನ್ನು ಕೇಂದ್ರ ತೆರಿಗೆ ಪಾಲಿನಿಂದ, ಶೇ. 6 ರಷ್ಟು ಹಣವನ್ನು ಕೇಂದ್ರದ ಸಹಾಯ ಅನುದಾನದಿಂದ, ಶೇ. 3ರಷ್ಟು ರಾಜ್ಯ ತೆರಿಗೆಯೇತರ ರಾಜಸ್ವದಿಂದ ಸಂಗ್ರಹಿಸಲಾಗುವುದು. ಸಾರ್ವಜನಿಕ ಲೆಕ್ಕಗಳ ಮೂಲಕ ಶೇ. 2ರಷ್ಟು ಹಣವನ್ನು ಸಂಗ್ರಹಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಈ ರೀತಿ ಸಂಗ್ರಹವಾಗುವ ಹಣದ ಪೈಕಿ ಶೇ. 31 ರಷ್ಟು ಸರ್ಕಾರಿ ನೌಕರರ ವೇತನ, ಭತ್ಯೆ ಮತ್ತು ಪಿಂಚಣಿಗಳಿಗೆ ಪಾವತಿಯಾಗಲಿದೆ. ಉಳಿದಂತೆ ಸಾಲದ ಮೇಲಿನ ಅಸಲು, ಬಡ್ಡಿಗೆ ಶೇ. 18 ರಷ್ಟು ಹಣ ಒದಗಿಸಲಾಗುತ್ತದೆ, ಬಂಡವಾಳ ವೆಚ್ಚಕ್ಕೆ ಶೇ. 17 ರಷ್ಟು ಹಣ ಒದಗಿಸಲಾಗುವುದು. ವೃದ್ಧಾಪ್ಯ ವೇತನ ಸೇರಿದಂತೆ, ಸಾಮಾಜಿಕ ಭದ್ರತಾ ಪಿಂಚಣಿಗಳಿಗೆ ಬಜೆಟ್ ಆದಾಯದ ಶೇ. 3 ರಷ್ಟು ಹಣ ಒದಗಿಸಲಾಗುತ್ತದೆ. 

ರಾಜ್ಯದ ಸ್ವಂತ ತೆರಿಗೆಗಳ ಸಂಗ್ರಹದ ವಿವರ ನೀಡಿದ ಅವರು, ವಾಣಿಜ್ಯ ತೆರಿಗೆಗಳ ಮೂಲಕವೇ ಹೆಚ್ಚು ಆದಾಯ ಬರಲಿದ್ದು, ಒಟ್ಟು 76,473 ಕೋಟಿ ರೂ. ಈ ಬಾಬ್ತಿನಲ್ಲಿ ಲಭ್ಯವಾಗಲಿದೆ, ಅಬಕಾರಿ ಮೂಲದಿಂದ ಈ ಬಾರಿ 24,580 ಕೋಟಿ ರೂ. ನಿರೀಕ್ಷಿಸಲಾಗಿದೆ ಎಂದರು.

ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಬಾಬ್ತಿನಡಿ 12,655 ಕೋಟಿ ರೂ. ಲಭ್ಯವಾಗಲಿದ್ದು, ಮೋಟಾರು ವಾಹನ ತೆರಿಗೆಗಳ ಮೂಲಕ 7,515 ಕೋಟಿ ರೂ. ದೊರೆಯಲಿದೆ ಎಂದು ವಿವರಿಸಿದರು.

ಉಳಿದಂತೆ ಇತರೆ ಮೂಲಗಳಿಂದ 2,979 ಕೋಟಿ ರೂ. ರಾಜ್ಯದ ಸ್ವಂತ ತೆರಿಗೆ ಮೂಲದಿಂದ ಲಭ್ಯವಾಗಲಿದೆ. ರಾಜ್ಯದ ಒಟ್ಟಾರೆ ಬಜೆಟ್ ಗಾತ್ರದ ಪೈಕಿ ಹೆಚ್ಚಿನ ಹಣ ಶಿಕ್ಷಣ, ನಗರಾಭಿವೃದ್ಧಿ, ಜಲಸಂಪನ್ಮೂಲ ಕ್ಷೇತ್ರಗಳಿಗೆ ಬಳಕೆಯಾಗಲಿದೆ ಎಂದರು.

ವೇತನ, ಭತ್ಯೆ, ಪಿಂಚಣಿ ಮತ್ತು ಸಾಲ ಮರುಪಾವತಿ ಬಾಬ್ತಿಗೆ ಶೇ.34 ರಷ್ಟು ಹಣ ಒದಗಿಸಲಾಗುತ್ತದೆ. ಉಳಿದಂತೆ ಶಿಕ್ಷಣಕ್ಕೆ ಶೇ. 11, ನಗರಾಭಿವೃದ್ಧಿಗೆ ಶೇ. 10, ಜಲ ಸಂಪನ್ಮೂಲಕ್ಕೆ ಶೇಕಡ 8 ರಷ್ಟು ಹಣ ಬಳಕೆಯಾಗಲಿದೆ. 

ಇಂಧನ ಕ್ಷೇತ್ರಕ್ಕೆ ಶೇ. 6, ಗ್ರಾಮೀಣಾಭಿವೃದ್ಧಿಗೆ ಶೇ. 6, ಕಂದಾಯ, ಲೋಕೋಪಯೋಗಿ, ಆರೋಗ್ಯ ಮತ್ತು ಒಳನಾಡು ಸಾರಿಗೆಗೆ ತಲಾ 4ರಷ್ಟು ಹಣ ಒದಗಿಸಲಾಗುವುದು.

ಸಮಾಜ ಕಲ್ಯಾಣ, ಕೃಷಿ, ತೋಟಗಾರಿಕೆಗೆ ತಲಾ ಶೇ. 3 ರಷ್ಟು, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಸತಿ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆಗೆ ಶೇ. 1 ರಷ್ಟು ಹಣ ಬಳಕೆಯಾಗಲಿದೆ ಎಂದು ವಿವರ ನೀಡಿದರು.

ಬಜೆಟ್ ಸಿದ್ಧಪಡಿಸಲು ಎದುರಾಗಿದ್ದ ಅಡೆ-ತಡೆಗಳ ವಿವರ ನೀಡಿದ ಮುಖ್ಯಮಂತ್ರಿ, ಇಂತಹ ಕಠಿಣ ಪರಿಸ್ಥಿತಿಯಲ್ಲೂ ರಾಜ್ಯದ ಆಯವ್ಯಯ ರೂಪಿಸುವ ಸಂದರ್ಭ ಹಿಂದೆಂದೂ ಬಂದಿರಲಿಲ್ಲ, ಇಷ್ಟಾದರೂ ಸಕಾರಾತ್ಮಕ ಧೋರಣೆಯಿಂದ ಬಜೆಟ್ ಮಂಡಿಸುತ್ತಿರುವುದಾಗಿ ಯಡಿಯೂರಪ್ಪ ತಿಳಿಸಿದರು.

error: Content is protected !!