ಹಣ್ಣು, ತರಕಾರಿ ವ್ಯಾಪಾರಿಗಳಿಗೆ ತಳ್ಳು ಗಾಡಿ ವಿತರಣಾ ಸಮಾರಂಭದಲ್ಲಿ ತಹಶೀಲ್ದಾರ್ ಬಿ.ಎನ್. ಗಿರೀಶ್
ದಾವಣಗೆರೆ, ಮೇ 6- ಲಾಕ್ಡೌನ್ನಂತಹ ಪರಿಸ್ಥಿತಿಯಲ್ಲಿ ಪುಟ್ಪಾತ್ ಸೇರಿದಂತೆ ಬೀದಿ ಬದಿಯಲ್ಲಿ ಕುಳಿತು ತರಕಾರಿ, ಹಣ್ಣು-ಹಂಪಲು ವ್ಯಾಪಾರ ಮಾಡುವ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡದಂತೆ ತಾಲ್ಲೂಕು ಆಡಳಿತ ತಾಕೀತು ಮಾಡಿತ್ತು.
ಆದರೆ ಇವರ ಸ್ಥಿತಿಯನ್ನು ಮನಗಂಡು ಅವರ ಜೀವನ ನಿರ್ವಹಣೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ್ ಬಿ.ಎನ್.ಗಿರೀಶ್ ಹೇಳಿದರು.
ನಗರದ ತ್ರಿಶೂಲ್ ಕಲಾಭವನದಲ್ಲಿ ಜೈನ್ ಫ್ರೆಂಡ್ಸ್ ಗ್ರೂಪ್ ವತಿಯಿಂದ ಆಯೋಜಿಸಲಾಗಿದ್ದ ಹಣ್ಣು ಮತ್ತು ತರಕಾರಿ ವ್ಯಾಪಾರಿಗಳಿಗೆ ತಳ್ಳು ಗಾಡಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಿಗಳ ಮೇಲೆ ಕೈಗೊಂಡ ಕ್ರಮ ಸಮಂಜಸ ಎಂದು ಕಾಣಲಿಲ್ಲ. ಕಾರಣ ಈ ನಿಟ್ಟಿನಲ್ಲಿ ನಾವುಗಳು ಬೀದಿ ಬದಿ ವ್ಯಾಪಾರಿಗಳ ಬಗ್ಗೆ ಚಿಂತನೆ ನಡೆಸಿ ದಾನಿಗಳನ್ನು ಹುಡುಕುಲಾಯಿತು.
ಅದರಂತೆ ನಮ್ಮ ಯೋಚನೆಗೆ ಮೊದಲು ಬಂದಿದ್ದೇ ಜೈನ್ ಸಮಾಜ. ಅದರಂತೆ ಜೈನ್ ಫ್ರೆಂಡ್ಸ್ ಗ್ರೂಪ್ನಿಂದ 15 ತಳ್ಳುಗಾಡಿಗಳನ್ನು ಅತಿ ಕಡುಬಡವರಾದ ಬೀದಿ ಬದಿ ವ್ಯಾಪಾರಿಗಳಿಗೆ 10 ರಿಂದ 12 ಸಾವಿರ ರೂ ವೆಚ್ಚದಲ್ಲಿ ತಯಾರಿಸಿ ಎಲ್ಲಾ ವರ್ಗದ ಅಸಂಘಟಿತ ವ್ಯಾಪಾರಿಗಳಿಗೆ ನೀಡಲಾಗಿದೆ ಎಂದರು.
2ನೇ ಅಲೆಯ ಸಂದರ್ಭದಲ್ಲಿ ಪುಟ್ಪಾತ್ ವ್ಯಾಪಾರಿಗಳಿಗೆ ಕೊರೊನಾ ಬಗ್ಗೆ ತಿಳುವಳಿಕೆ ನೀಡಿ, ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಲ್ಲದೇ ಸೋಂಕು ನಿವಾರಕ ದ್ರಾವಣ ಬಳಸುವಂತೆ ಸೂಚನೆ ನೀಡಲಾಗಿತ್ತು. ಅಲ್ಲದೇ ಸರ್ಕಾರದ ನಿರ್ದೇಶನದಂತೆ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಬೇಕಾದ ಸಂದರ್ಭ ಬಂದೊದಗಿತು. ಇಂತಹ ವೇಳೆ ನಮಗೂ ವ್ಯಥೆ ಆಯಿತು. ಈ ರೀತಿ ಆದರೆ ಅವರ ಜೀವನ ನಿರ್ವಹಣೆ ಹೇಗೆ ಸಾಧ್ಯ ಎಂದು ಚಿಂತಿಸಿ ಜೈನ್ ಸಮಾಜದ ವಿವೇಕ್ ಸಂಘವಿ ಅವರನ್ನು ಸಂಪರ್ಕಿಸಿ ಕೋರಿಕೊಂಡಾಗ ಅವರಿಗೆ ತಳ್ಳುಗಾಡಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ವಿಕಾಸ್ ಜೈನ್ ಮಾತನಾಡಿ, ಸಮಾಜದ ಎಲ್ಲಾ ಆರ್ಥಿಕತೆ ಇದ್ದವರ ಬಗ್ಗೆ ಚರ್ಚಿಸಿ, ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮುಂದಾದೆವು. ಅದರಂತೆ ತಹಶೀಲ್ದಾರ್ ಬಿ.ಎನ್.ಗಿರೀಶ್ ಜೊತೆಗೂಡಿ ಬಡವರಿಗೆ ಸಹಾಯ ಹಸ್ತ ಚಾಚುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ರಮಣಲಾಲ್ ಸಂಘವಿ, ಕೆಟಿಜೆ ನಗರ ಪೊಲೀಸ್ ಠಾಣೆಯ ಪಿಎಸ್ಐ ವೀರೇಶ್, ತ್ರಿಶೂಲ್ ಕಲಾಭವನದ ಮಾಲೀಕ ಪ್ರಕಾಶ್ ಕಂದನಕೋವಿ, ಕಾರ್ಮಿಕ ಮುಖಂಡ ಆವರಗೆರೆ ಹೆಚ್.ಜಿ.ಉಮೇಶ್, ಕೇವಲಚಂದ್ಜೀ, ಧನಪಾಲ್, ಜಸವಂತ್, ಪಿ.ಬಿ.ಪ್ರಕಾಶ್, ವಿಕಾಸ್ ಸಂಘವಿ, ಲಕ್ಷ್ಮಣ್ ಕೊಠಾರಿ, ಜೀತು ವೇಲಚಂದ್ ನಾಹಟಾ, ವಿಶಾಲ್ ಸಂಘವಿ, ರಮೇಶ್ ನಾಹಟಾ, ವಿನೀತ ಗಣೇಶ್ಮಲ್, ಧನ್ಪತ್, ಶಿವಕುಮಾರ್, ಭರತ್, ಚಂಪಾಲಾಲ್ ನಾಕೋಡ, ಅಮ್ಜದ್ ಪಾಷಾ, ನಿರಂಜನ್ ಜಾಲಿ, ರುಷಲ ಸಂಘವಿ, ರಿಷಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ವೇಳೆ ಸಾಂಕೇತಿಕವಾಗಿ ತಳ್ಳುಗಾಡಿ ವ್ಯಾಪಾರಸ್ಥರಾದ ಗೋಶಾಲೆ ಶಿವಮ್ಮ, ನಿರ್ಮಲಮ್ಮ, ರತ್ನಿಬಾಯಿ, ಸೀನಪ್ಪ ಅವರಿಗೆ ತಳ್ಳುಗಾಡಿಗಳನ್ನು ಹಸ್ತಾಂತರಿಸಲಾಯಿತು.