ಬಡವರ ಸಮಸ್ಯೆಗೆ ಸ್ಪಂದಿಸದೇ ಲೆಕ್ಕಪತ್ರ ನೀಡಿದ ಸಿಎಂ
ದಾವಣಗೆರೆ: ಬಜೆಟ್ ಮೇಲೆ ರಾಜ್ಯದ ಜನರು ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ ಜನರ ನಿರೀಕ್ಷೆಗಳನ್ನು ಮುಖ್ಯಮಂತ್ರಿಗಳು ಹುಸಿಗೊಳಿಸಿದ್ದಾರೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೊನೆಪಕ್ಷ ಮುಖ್ಯಮಂತ್ರಿಗಳು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನಾದರೂ ಕಡಿಮೆಗೊಳಿಸಿದ್ದರೆ ದಿನನಿತ್ಯ ವಸ್ತುಗಳ ಬೆಲೆ ಕಡಿಮೆ ಆಗುತ್ತಿತ್ತು. ದಿನನಿತ್ಯ ವಸ್ತುಗಳ ಬೆಲೆಯೇರಿಕೆಗೆ ಕಡಿವಾಣ ಹಾಕಬಹುದೆಂಬ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಕೇವಲ ಲೆಕ್ಕ-ಪತ್ರ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.
ರಾಜ್ಯ ಬಜೆಟ್ ಸ್ವಾಗತಾರ್ಹ
ದಾವಣಗೆರೆಗೆ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಆಸ್ಪತ್ರೆಯ ಉಪ ಕೇಂದ್ರವನ್ನು ಸ್ಥಾಪಿಸಲು ರೂ 20.00 ಕೋಟಿ ಅನುದಾನ ನೀಡಿರುವ ಮಾನ್ಯ ಮುಖ್ಯಮಂತ್ರಿ ಕಾರ್ಯ ಮೆಚ್ಚುವಂತದ್ದಾಗಿದೆ.
ವಿಶೇಷವಾಗಿ ಅಂತರರಾಷ್ಟ್ರೀಯ ಮಹಿಳಾ ದಿನವಾದ ಇಂದು ಬಜೆಟ್ನಲ್ಲಿ ಮಹಿಳಾ ಅಭಿವೃದ್ಧಿಗೆ ಒಟ್ಟಾರೆ 37 ಸಾವಿರ ಕೋಟಿ ರೂ ಮೀಸಲಿರಿಸಿದ್ಧಾರೆ. ಇದರಲ್ಲಿ ಕಡಿಮೆ ಬಡ್ಡಿ ದರದಲ್ಲಿ ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ.ವರೆಗೆ ಸಾಲ ನೀಡುವ ಯೋಜನೆಯು ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ ಆಗಲಿದೆ, ವಿವಿಧ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ವಿಶೇಷ ಅನುದಾನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಬೆಳವಣಿಗೆಗೆ ಆದ್ಯತೆ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ, ರಾಜ್ಯದ ರೈತರ ಸಬಲೀಕರಣಕ್ಕೆ ಯೋಜನೆಗಳು, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ, ಸೇರಿದಂತೆ ಅನೇಕ ಜನಪರ ಕಾಳಜಿಯನ್ನು ರಾಜ್ಯ ಬಜೆಟ್ನಲ್ಲಿ ತೋರಿಸಿದ್ದು ಸ್ವಾಗತಾರ್ಹ.
ಅಭಿವೃದ್ಧಿಶೀಲ ಹಾಗೂ ಭವಿಷ್ಯದ ಕಡೆಗೆ ಹೆಜ್ಜೆ ಹಾಕುವ ಸ್ವಾಗತಾರ್ಹ ಬಜೆಟ್ ಇದಾಗಿದೆ.
ಜನವಿರೋಧಿ, ನಿರಾಶಾದಾಯಕ ಬಜೆಟ್
ರಾಜ್ಯ ಬಜೆಟ್ ಜನವಿರೋಧಿ ಹಾಗೂ ನಿರಾಶಾದಾಯಕ ಬಜೆಟ್ ಆಗಿದೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಡಿ. ಬಸವರಾಜ್ ಟೀಕಿಸಿದ್ದಾರೆ. ಗಗನಕ್ಕೆ ಏರಿರುವ ಪೆಟ್ರೋಲ್, ಡೀಸೆಲ್ ಹಾಗೂ ಸಿಲಿಂಡರ್ ಮೇಲಿನ ರಾಜ್ಯ ಮಾರಾಟ ತೆರಿಗೆಯನ್ನು ಬಜೆಟ್ನಲ್ಲಿ ಇಳಿಸುತ್ತಾರೆಂದು ನಂಬಿದ್ದ ಜನರಿಗೆ ತೀವ್ರ ನಿರಾಶೆಯಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನರ ಬದುಕು ದುಸ್ತರವಾಗಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ನೆರವಿಗೆ ಸರ್ಕಾರ ಬಾರದೇ ಇರುವುದು ಜನರಿಗೆ ಬಗೆದ ದ್ರೋಹವಾಗಿದೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ. 25ರಷ್ಟಿರುವ ದಲಿತರು ಮತ್ತು ಶೇ. 12ರಷ್ಟಿರುವ ಅಲ್ಪಸಂಖ್ಯಾತರಿಗೆ ಸೂಕ್ತ ಅನುದಾನ ನೀಡಿಲ್ಲವೆಂದು ಬಿಎಸ್ವೈ ನಡೆಯನ್ನು ಖಂಡಿಸಿದ್ದಾರೆ.
ಒಟ್ಟಾರೆಯಾಗಿ 2021-22ರ ಬಜೆಟ್ ರಾಜ್ಯದ ಅಭಿವೃದ್ಧಿ ಪೂರಕವಾಗಿಲ್ಲ. ಈ ಬಾರಿಯ ಬಜೆಟ್ ಖಾಲಿ ಡಬ್ಬ, ಸೌಂಡ್ ಜಾಸ್ತಿ ಯಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಬಜೆಟ್ ಸ್ವಲ್ಪ ಸಿಹಿ, ಸ್ವಲ್ಪ ಕಹಿ
ದಾವಣಗೆರೆಗೆ ಒಂದು ಜಯದೇವ ಹೃದ್ರೋಗ ಉಪಕೇಂದ್ರ, ಸ್ವಾಗತಾರ್ಹ ನಿರ್ಧಾರ (20 ಕೋಟಿ ರೂಪಾಯಿ). ಕರ್ನಾಟಕದಾದ್ಯಂತ ಜೈನ ಯಾತ್ರಾ ಕೇಂದ್ರದ ಅಭಿವೃದ್ಧಿಗೆ ಮೀಸಲಿಟ್ಟ ಹಣವೂ ಸ್ವಾಗತಾರ್ಹ ನಿರ್ಧಾರ.
ದಾವಣಗೆರೆ – ಚಿತ್ರದುರ್ಗ – ತುಮಕೂರು ನೇರ ರೈಲು ಮಾರ್ಗದ ಭೂ ಖರೀದಿ ಕಾರ್ಯವನ್ನು ಈ ಬಜೆಟ್ನಲ್ಲಿ ಚುರುಕುಗೊಳಿಸಬಹುದಾಗಿತ್ತು.
ಹಳೆಯ ದಾವಣಗೆರೆ ಪ್ರದೇಶದಲ್ಲಿ ಕರ್ನಾಟಕ ಒನ್ ಶಾಖೆಗಳನ್ನು ನಾಗರಿಕರ ಅನುಕೂಲಕ್ಕೆ ತೆರೆಯಬಹುದಿತ್ತು. ಸ್ಮಾರ್ಟ್ ಸಿಟಿ ಅಡಿ ಬೆಂಗಳೂರು ಮಾದರಿ, Tender Sure Footpaths (ಜನ ನಿಬಿಡ ಪ್ರದೇಶದಲ್ಲಿ) ದಾವಣಗೆರೆಗೆ ಕಲ್ಪಿಸಬಹುದಾಗಿತ್ತು, ವೇಗವಾಗಿ ಬೆಳೆಯುತ್ತಿರುವ ದಾವಣಗೆರೆ ನಗರಕ್ಕೆ ಒಂದು ಸುಸಜ್ಜಿತ ಕ್ರೀಡಾಂಗಣಕ್ಕೆ ಅನುದಾನವನ್ನು ಬಿಡುಗಡೆಗಳಿಸ ಬಹುದಾಗಿತ್ತು ಮಧ್ಯ ಕರ್ನಾಟಕದ ಬಹುದಿನದ ಬೇಡಿಕೆಯಲ್ಲಿ ಒಂದಾದ ದಾವಣಗೆರೆ ಹಾಗು ಚಿತ್ರದುರ್ಗ ನಗರಗಳ ಮದ್ಯೆ ವಿಮಾನ ನಿಲ್ದಾಣಕ್ಕೆ ಆದ್ಯತೆ ಕೊಡಬೇಕಾಗಿತ್ತು.
– ರೋಹಿತ್ ಎಸ್ . ಜೈನ್, ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ, ದಾವಣಗೆರೆ
ರೈತ ವಿರೋಧಿ ಬಜೆಟ್
ರಾಜ್ಯ ಸರ್ಕಾರ ಈ ಬಾರಿ ಬಜೆಟ್ ಜನ ವಿರೋಧಿ ಹಾಗೂ ರೈತ ವಿರೋಧಿಯಾಗಿದೆ. ರೈತರ ಸಂಕೇತ ಹಸಿರು ಶಾಲು ಹಾಕಿಕೊಂಡು ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ.
ಈ ಬಾರಿ ಪ್ರತ್ಯೇಕ ರೈತ ಬಜೆಟ್ ಕೂಡ ಮಂಡನೆ ಮಾಡದೇ ಅನ್ಯಾಯ ಮಾಡಿದ್ದಾರೆ. ಸಂಕಷ್ಟದಲ್ಲಿರುವ ಅಡಿಕೆ ಬೆಳೆಗಾರರು ಹಾಗೂ ಮೆಕ್ಕೆಜೋಳ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕಿತ್ತು. ಇನ್ನೂ ತರಕಾರಿ ಸೇರಿದಂತೆ, ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು ಕಡಿಮೆ ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆ ಮಾಡುವಲ್ಲಿಯೂ ಈ ಸರ್ಕಾರ ವಿಫಲವಾಗಿದೆ.
ದಾವಣಗೆರೆ ಜಿಲ್ಲೆಗೆ ಕೃಷಿ ಹಾಗೂ ಪಶು ವೈದ್ಯಕೀಯ ಕಾಲೇಜ್ ಆರಂಭ ಮಾಡಲು ಬಜೆಟ್ನಲ್ಲಿ ಘೋಷಣೆ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಹೃದ್ರೋಗ ಆಸ್ಪತ್ರೆ : ಮಧ್ಯ ಕರ್ನಾಟಕಕ್ಕೆ ನೀಡಿದ ಕೊಡುಗೆ
ಜಯದೇವ ಹೃದ್ರೋಗ ಆಸ್ಪತ್ರೆ ಮಂಜೂರು ಮಾಡಿ ಇಂದಿನ ಬಜೆಟ್ ನಲ್ಲಿ 20 ಕೋಟಿ ಹಣ ಮೀಸಲಿಟ್ಟಿರುವುದು ದಾವಣಗೆರೆ ಜಿಲ್ಲೆಯ ಹಾಗೂ ಮಧ್ಯ ಕರ್ನಾಟಕದ ಜನತೆಗೆ ನೀಡಿರುವ ಕೊಡುಗೆಯಾಗಿದೆ.
ಈ ಕೊಡುಗೆಯಿಂದಾಗಿ ಮಧ್ಯ ಕರ್ನಾಟಕದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಬಹಳಷ್ಟು ಅನುಕೂಲವಾಗಿದೆ. ಹೃದಯ ರೋಗ ಸಮಸ್ಯೆ ಬಂದ ತಕ್ಷಣ ಎಲ್ಲಾ ವರ್ಗದ ಜನರು ಬೆಂಗಳೂರಿನ ಜಯದೇವ ಆಸ್ಪತ್ರೆ ಕಡೆ ನೋಡುವುದು ಸರ್ವೇ ಸಾಮಾನ್ಯ, ಆದರೆ ಹೃದಯ ರೋಗಿಗಳಿಗೆ ಬಹಳಷ್ಟು ಬಾರಿ ತಕ್ಷಣದ ಚಿಕಿತ್ಸೆ ಅವಶ್ಯವಾಗಿರುತ್ತದೆ, ಬೆಂಗಳೂರಿಗೆ
ಹೋಗುವುದರ ಒಳಗಾಗಿಯೇ ಹಲವಾರು ಜನರು ಜೀವ ಕಳೆದು ಕೊಂಡಿರುವುದನ್ನು ಬಹಳಷ್ಟು ಬಾರಿ ಕೇಳಿದ್ದೇವೆ, ಇಂತಹ ಸಂದರ್ಭದಲ್ಲಿ ಸಿ.ಎಂ ಬಿ.ಎಸ್.ವೈ ರವರ ಕೊಡುಗೆ ಮಧ್ಯ ಕರ್ನಾಟಕದ ಜನತೆಯ ಭಾಗ್ಯವೇ ಸರಿ.
– ಎನ್.ರಾಜಶೇಖರ್, ಜಿಲ್ಲಾ ಮಾಜಿ ಪ್ರಧಾನ ಕಾರ್ಯದರ್ಶಿ, ದಾವಣಗೆರೆ.
6ಕ್ಕೆ ಏರಲಿಲ್ಲ 3ಕ್ಕೆ ಇಳಿಯಲಿಲ್ಲ
ರಾಜ್ಯ ಬಜೆಟ್ನಲ್ಲಿ ಮಹಿಳಾ ಉದ್ಯಮಕ್ಕೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಕೊಟ್ಟಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜು ತೆರೆಯಲು ಹೋದ ವರ್ಷದ ಬಡ್ಜೆಟ್ನಲ್ಲಿ ಹೇಳಿದ್ದರು ಮತ್ತು ಈ ವರ್ಷದ ಬಜೆಟ್ನಲ್ಲಿ ಹೇಳಿದ್ದಾರೆ. ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು.
ವ್ಯಾಟ್ ನಲ್ಲಿ 2014-15 ರಿಂದ 2017 ಜೂನ್ ತಿಂಗಳವರೆಗಿನ ಲೆಕ್ಕ ಪರಿಶೋಧನೆಯಲ್ಲಿ ಹಾಕುವ ದಂಡ ಮತ್ತು ಬಡ್ಡಿಯನ್ನು ಕರ ಸಮಾಧಾನದ ಅಡಿಯಲ್ಲಿ ಜಾರಿಗೆ ತಂದಿದ್ದು ಸುಮಾರು ರೂ.76500.00 ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಸಂದಾಯವಾಗಿರುತ್ತದೆ. ಇದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ.
ಒಟ್ಟಿಗೆ `6ಕ್ಕೆ ಏರಲಿಲ್ಲ 3ಕ್ಕೆ ಇಳಿಯಲಿಲ್ಲ’ ಅನ್ನೋತರ ಈ ವರ್ಷದ ಬಜೆಟ್ ಮಂಡನೆಯಾಗಿದೆ
– ಜಂಬಿಗಿ ರಾಧೇಶ್, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷರು, ದಾವಣಗೆರೆ.
`ರೈತರ ಪರವಾದ ಬಜೆಟ್’
ಬಜೆಟ್ನಲ್ಲಿ ಕೃಷಿ ವಲಯಕ್ಕೆ ಉತ್ತೇಜನ ನೀಡಿರುವುದು ಸ್ವಾಗ ತಾರ್ಹ. ಕೃಷಿ ವಲಯಕ್ಕೆ ಹೆಚ್ಚು ಪ್ರಾಧಾನ್ಯತೆ ಜೊತೆಗೆ ಉತ್ತೇಜನ ನೀಡಿದ್ದು, ಕೃಷಿ ಕಾರ್ಮಿಕರು ಕೃಷಿಕರು ಹೈನು ಗಾರಿಕೆ, ಮೀನುಗಾರರಿಗೆ ರೇಷ್ಮೆ ಬೆಳೆಗಾರರಲ್ಲಿ, ಹೂ ಬೆಳೆಗಾರರಲ್ಲಿ ಹರ್ಷ ತಂದಿದೆ. ಇದೊಂದು ಕೃಷಿ ಪರ ಬಜೆಟ್.
– ಎಸ್.ಮರಳಸಿದ್ದೇಶ್ವರ, ಶಿವಪುರ, ಹೊಳಲ್ಕೆರೆ.
ಬಜೆಟ್ : ದಾವಣಗೆರೆಗೆ ಆದ್ಯತೆ ಇಲ್ಲ
ದಾವಣಗೆರೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ಸ್ಥಾಪನೆ ಹಾಗೂ ಐವತ್ತು ಪರಿಶಿಷ್ಟ ಜಾತಿ ಹಾಸ್ಟೆಲ್ಗಳ ಸ್ಥಾಪನೆಗೆ ಒತ್ತು ನೀಡಿರುವುದು ಸ್ವಾಗ ತಾರ್ಹ. ಆದರೆ, ಮಧ್ಯ ಕರ್ನಾಟಕ ದಾವಣಗೆರೆಗೆ ಹೆಚ್ಚಿನ ಆದ್ಯತೆ ಇಲ್ಲದಿ ರುವುದು ಶೋಚನೀಯ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹೆಚ್ಚುವರಿ ತೆರಿಗೆ ಕಡಿಮೆ ಮಾಡದಿರುವುದು ನಿರೀಕ್ಷೆಯನ್ನು ಹುಸಿ ಮಾಡಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದೆ
ಬಜೆಟ್ಗೆ ದೂರ ದೃಷ್ಟಿಯಿಲ್ಲ
ಅನುದಾನವನ್ನು ಎಲ್ಲಾ ಇಲಾಖೆಗೆ ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ. ಬಡವರಿಗೆ ಹೊಸ ಯೋಜನೆ ಕೊಟ್ಟಿಲ್ಲ. ಯಾರಿಗೆ ಏನು ಕೊಟ್ಟಿದ್ದಾರೆ. ಏನು ಸಿಗುತ್ತದೆ ಎನ್ನುವ ಬಗ್ಗೆ ಬಜೆಟ್ನಲ್ಲಿ ಗೊಂದಲವಿದೆ.
ಈ ಬಜೆಟ್ಗೆ ದೂರ ದೃಷ್ಟಿಯಿಲ್ಲ. ಇಂಧನ ದರ ಸೆಸ್ ಕಡಿಮೆ ಮಾಡಿ ಜನರ ಹೊರೆ ಇಳಿಸಬೇಕಿತ್ತು. ಆದರೆ ಆ ರೀತಿ ಮಾಡದೇ ಇರುವುದರಿಂದ ಜನರ ಜೇಬಿಗೆ ಕತ್ತರಿ ಬೀಳುವುದು ನಿಲ್ಲಲ್ಲ. ಕಳೆದ ವರ್ಷದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಇನ್ನೂ ಬಂದಿಲ್ಲ. ಇದರ ಬಗ್ಗೆ ಗಮನಹರಿಸಿಲ್ಲ. ಅಲ್ಪ ಸಂಖ್ಯಾತ ಸಮುದಾಯಕ್ಕೆ ಬಜೆಟ್ನಲ್ಲಿ ಕಡಿಮೆ ಅನುದಾನ ಮೀಸಲಿರಿಸಿದ್ದಾರೆ.
ಟಾರ್ಗೆಟ್ ಅಸ್ಲಾಂ, ಉದ್ಯಮಿಗಳು ದಾವಣಗೆರೆ
ರೂಪಾಯಿ ಹಂಚಿಕೆ ಸಮರ್ಪಕವಾಗಿಲ್ಲ
ರಾಜ್ಯ ಬಜೆಟ್ ಆರ್ಥಿಕ ನಿರ್ವಹಣೆಯ ಲೋಪಗಳನ್ನು ಬಿಂಬಿಸಿದೆ. ಯಾವ ಬಾಬ್ತಿಗೆ ಎಷ್ಟು ಅನುದಾನ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆ ಸ್ವತಃ ಸಿಎಂ ಅವರೇ ಗೊಂದಲದಲ್ಲಿದ್ದಾರೆ ಎನಿಸುತ್ತದೆ. ಕಲ್ಯಾಣ ಕರ್ನಾಟಕಕ್ಕೆ ಸಿಂಹ ಪಾಲು ಮೊತ್ತವನ್ನು ತೋರಿಸಲಾಗಿದ್ದು, ಯಾವುದಕ್ಕೆ ಎಂದು ಸ್ಪಷ್ಟವಾಗಿ ಹೇಳಿಲ್ಲ. ಜಾತಿ ಅಭಿವೃದ್ದಿ ನಿಗಮಗಳಿಗೆ ಹೇರಳವಾಗಿ ಸುಮಾರು 2 ಸಾವಿರ ಕೋಟಿ ಅನುದಾನ ಮೀಸಲಿರಿಸಿರುವುದು ಸರಿಯಲ್ಲ. ಜಿಲ್ಲೆಗೆ ಜಯದೇವ ಹೃದಯ ರೋಗ ವಿಜ್ಞಾನದ ಉಪ ಕೇಂದ್ರ ತೆರೆಯಲು ಅನುದಾನ ಬಿಟ್ಟರೆ ಯಾವುದೇ ಘೋಷಣೆ ಮಾಡಿಲ್ಲ. ಈ ಮೂಲಕ ಮಧ್ಯ ಕರ್ನಾಟಕದ ದಾವಣಗೆರೆಗೆ ನಿರಾಶೆಯಾಗಿದೆ. ವಕೀಲರಿಗೆ ಯಾವುದೇ ಯೋಜನೆ ಘೋಷಣೆಯಾಗಿಲ್ಲ.
ಎಲ್.ಎಚ್.ಅರುಣ್ ಕುಮಾರ್, ಹಿರಿಯ ವಕೀಲರು
ಜನತೆಯನ್ನು ಸಾಲಗರಾರನ್ನಾಗಿಸಿದ ಬಜೆಟ್
ಮುಖ್ಯಮಂತ್ರಿಗಳ ಬಜೆಟ್ ಕೇವಲ ಕೆಲವರಿಗೆ ಸೀಮಿತವಾದಂತಿದೆ. ಗೋ ಹತ್ಯೆ ನಿಷೇಧ ಜಾರಿಗೆ ತಂದ ಮುಖ್ಯಮಂತ್ರಿಗಳಿಗೆ ಗೋವುಗಳನ್ನು ಸಾಕಲು ಗೋಶಾಲೆಗಳನ್ನಾದರೂ ತೆರೆಯಬೇಕೆಂಬ ಸಾಮಾನ್ಯ ಜ್ಞಾನವೂ ಸಹ ಇಲ್ಲವೇ ? ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಪ್ರಶ್ನಿಸಿದ್ದಾರೆ.
ಕೃಷಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ನೀಡಬೇಕಾಗಿತ್ತು. ನಮಗೂ ಈ ಬಜೆಟ್ ಮೇಲೆ ಬಹಳ ನಿರೀಕ್ಷೆಗಳಿದ್ದವು. ಆದರೆ ಇದಾವುದನ್ನೂ ನೀಡದೇ 2 ಲಕ್ಷ 40 ಸಾವಿರ ಕೋಟಿ ರೂ ಬಜೆಟ್ ಮಂಡಿಸಿದ್ದಾರೆ. ಇದಕ್ಕಾಗಿ ಸುಮಾರು 80 ಸಾವಿರ ಕೋಟಿ ರೂ. ಸಾಲ ಮಾಡಿ ರಾಜ್ಯದ ಜನರನ್ನು ಸಾಲಗಾರರನ್ನಾಗಿಸಿದ್ದಾರೆ ಎಂದವರು ಹೇಳಿದ್ದಾರೆ.