ಜೈಲು ಹಕ್ಕಿಗಳಿಗೆ ಸಿಗದ ಕೋವಿಡ್ – 19 ಲಸಿಕೆ ಭಾಗ್ಯ

ದಾವಣಗೆರೆ, ಮೇ 6- ಕೊರೊನಾ ಸೋಂಕಿಗೆ ತುತ್ತಾಗದಿರಲು ಮುಂಜಾಗ್ರತೆಗಾಗಿ ನಗರದಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಜೈಲು ಹಕ್ಕಿಗಳೂ ಮೊದಲ ಲಸಿಕೆ ಭಾಗ್ಯ ಕಂಡಿದ್ದಾರೆ. ಆದರೆ, ಲಸಿಕೆ ಖಾಲಿ ಒಂದೆಡೆಯಾದರೆ, ಕೆಲವರ ಬಳಿ ಆಧಾರ್ ಕಾರ್ಡ್ ಇಲ್ಲದ ಕಾರಣ ಎಲ್ಲಾ ಜೈಲು ಹಕ್ಕಿಗಳಿಗೂ ಲಸಿಕೆ ಭಾಗ್ಯ ಸಿಕ್ಕಿಲ್ಲ.

45 ವರ್ಷ ಮೇಲ್ಪಟ್ಟ 13 ಮಂದಿ ಖೈದಿಗಳಿಗೆ ಇತ್ತೀಚೆಗೆ ಮೊದಲ ಲಸಿಕೆ ಹಾಕಿಸಲಾಗಿದೆ. ಲಸಿಕೆ ಹಾಕಿಸಲು ಕೆಲವರ ಆಧಾರ್ ಕಾರ್ಡ್ ಇಲ್ಲ. ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಕೊರೊನಾ ಲಸಿಕೆ ಖಾಲಿಯಾಗಿರುವ ಕಾರಣ ಆಧಾರ್ ಕಾರ್ಡ್ ವುಳ್ಳ ಉಳಿದ ಖೈದಿಗಳಿಗಾದರೂ ಲಸಿಕೆ ಹಾಕಿಸಲು ಆಗದಂತಾಗಿದೆ ಎನ್ನುತ್ತಾರೆ ಕಾರಾಗೃಹದ ಸಹಾಯಕ ಅಧೀಕ್ಷಕ ಕರ್ಣ ಬಿ. ಕ್ಷತ್ರಿ.

ಇದೇ ಏ.27ರಂದು 219 ಮಂದಿ ಖೈದಿ ಗಳಿದ್ದರು. ಅಂದಿನಿಂದ ಮಂಗಳವಾರದವರೆಗೆ 22 ಮಂದಿ ಜಾಮೀನು ಪಡೆದು ಬಿಡುಗಡೆ ಹೊಂದಿದ್ದು, ನಿನ್ನೆ ಸಹ 3 ಮಂದಿ ಹೊಸ ಖೈದಿಗಳು ಬಿಡುಗಡೆಗೊಂಡಿದ್ದಾರೆ. ಸದ್ಯಕ್ಕೆ ಒಟ್ಟು 194 ಹಳೆಯ ಮತ್ತು ಹೊಸ ಖೈದಿಗಳು ಜೈಲಿನಲ್ಲಿದ್ದಾರೆ. ಸಾಮಾನ್ಯವಾಗಿ ಖೈದಿಗಳಿಗೆ ಜಾಮೀನು ಸಿಗುತ್ತಿದೆ. ಲಾಕ್ ಡೌನ್ ಕಾರಣ ಹೊಸ ಖೈದಿಗಳ ಪ್ರವೇಶ ಕಡಿಮೆ ಆಗಿದೆ ಎಂದು ಕರ್ಣ ಅವರು `ಜನತಾವಾಣಿ’ಗೆ ಮಾಹಿತಿ ನೀಡಿದರು.

ಜೈಲಿನಲ್ಲಿ ಒಟ್ಟು 12 ಸೆಲ್ ಗಳಿವೆ. 10 ಸೆಲ್‍ಗಳು, ಎರಡು ಬ್ಯಾರಕ್ (ವಿಶಾಲವಾದ ಸೆಲ್‍ಗಳು) ಇವೆ. ಖೈದಿಗಳನ್ನು ನಿಯಮಾ ನುಸಾರ ಸೆಲ್ ಗಳಲ್ಲಿ ಇರಿಸಲಾಗುತ್ತಿದೆ.

ಸಿಬ್ಬಂದಿಗಳಿಗೆಲ್ಲಾ ಎರಡೂ ಹಂತದ ಲಸಿಕೆ: ಜೈಲಿನ 42 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳೆಲ್ಲಾ ಕಳೆದ 2-3 ತಿಂಗಳ ಹಿಂದೆಯೇ ಎರಡೂ ಹಂತದ ಲಸಿಕೆ ಪಡೆದಿದ್ದಾರೆ.

ಎಸ್‍ಓಪಿ ಪಾಲನೆಯಿಂದ ಕಾರಾಗೃಹ ಸೇಫ್: ಜಿಲ್ಲಾ ಅಧೀಕ್ಷಕರ ಸೂಚನೆಯಂತೆ ಜಿಲ್ಲಾ ಕಾರಾಗೃಹದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆ ಮೂಲಕ ಸದ್ಯಕ್ಕೆ ಇದುವರೆಗೂ ಕಾರಾಗೃಹದಲ್ಲಿ ಕೊರೊನಾ ಸೋಂಕಿನ ಸುಳಿವಿಲ್ಲ ಎನ್ನುತ್ತಾರೆ ಕರ್ಣ.

ಪ್ರಮಾಣಿತ ಕಾರ್ಯಾಚರಣೆ ವಿಧಾನದ (ಎಸ್‍ಓಪಿ) ಅನ್ವಯ ಕ್ರಮ ಕೈಗೊಳ್ಳಲು ಕಾರಾ ಗೃಹದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡ ಲಾಗಿದೆ. ಎಲ್ಲಾ ಬಂಧಿಗಳಿಗೆ ಮಾಸ್ಕ್ ವಿತರಿ ಸಿದ್ದು, ಧರಿಸಲು ಸೂಚಿಸಿದೆ. ಬಂಧಿಗಳಿಗೆ ಸ್ಯಾನಿ ಟೈಜರ್ ವಿತರಿಸಿದ್ದು, ಆಗಾಗ ಕೈತೊಳೆದು ಕೊಳ್ಳಲು ಸೂಚಿಸಿದೆ ಎಂದು ವಿವರಿಸಿದರು.

ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಕಡ್ಡಾಯ ವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಮಾಸ್ಕ್ ಮತ್ತು ಫೇಸ್‍ಶೀಲ್ಡ್‌ಗಳನ್ನು ಎಲ್ಲಾ ಸಿಬ್ಬಂದಿಗಳಿಗೆ ವಿತರಿಸಲಾಗಿದೆ. ಈಗಾಗಲೇ ಬಂಧಿಗಳಿಗೆ ಸಂದರ್ಶನ ನಿಲ್ಲಿಸಲಾಗಿದೆ. ಅಧಿ ಕಾರಿ ಮತ್ತು ಸಿಬ್ಬಂದಿಗಳೂ ಕಾರಾಗೃಹದ ಒಳ ಪ್ರವೇಶ ಮಾಡಿದಾಗ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತದೆ. ಪ್ರತಿ ದಿನ ಎಲ್ಲಾ ಬಂಧಿಗಳ ದೈಹಿಕ ಉಷ್ಣತೆಯನ್ನು ಪರೀಕ್ಷಿಸಲಾಗುತ್ತಿದೆ. ಕಾರಾಗೃಹದ ಒಳಭಾಗದಲ್ಲಿ ಮತ್ತು ಹೊರಭಾಗದಲ್ಲಿ ಪ್ರತಿ ನಿತ್ಯ ಬೆಳಿಗ್ಗೆ ಮತ್ತು ಸಂಜೆ 2 ಬಾರಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗುತ್ತಿದೆ ಎಂದರು.

ಹೊಸದಾಗಿ ಪ್ರವೇಶ ಪಡೆದ ಬಂಧಿಗಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಕಾರಾಗೃಹಕ್ಕೆ ದಾಖಲಾಗುವ ಬಂಧಿಗಳಿಗೆ ವೈದ್ಯಕೀಯ ತಪಾಸಣೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ವೈದ್ಯಕೀಯ ವರದಿ ನೀಡಲು ಬಂಧಿಗಳನ್ನು ಕಾರಾಗೃಹಕ್ಕೆ ತರುವ ಬೆಂಗಾವಲು ಸಿಬ್ಬಂದಿಗೆ ತಿಳಿಸಲಾಗಿದೆ. ನೆಗೆಟಿವ್ ವರದಿ ಇದ್ದರೆ ಅಷ್ಟೇ ಬಂಧಿಗಳನ್ನು ಕಾರಾಗೃಹದಲ್ಲಿ ದಾಖಲು ಮಾಡಿಕೊಳ್ಳಲಾಗುತ್ತಿದೆ. ಹೊಸದಾಗಿ ಪ್ರವೇಶ ಪಡೆದ ಬಂಧಿಗಳಿಗೆ ಮುಂಜಾಗ್ರತೆ ಹಿತದೃಷ್ಟಿಯಿಂದ ಐಸೋಲೇಷನ್ ವಾರ್ಡಿನಲ್ಲಿ ಇರಿಸಲಾಗುತ್ತಿದೆ.

ಕಾರಾಗೃಹದ ಔಷಧಿ ವಿಭಾಗದಲ್ಲಿ ಅಗತ್ಯ ಪ್ರಮಾಣದ ಔಷಧಿಗಳು ಮತ್ತು ಪ್ರಾಥಮಿಕ ಕಾಯಿಲೆಗೆ ಬಳಸುವ ಮೂಲಭೂತ ಔಷಧಿ ಗಳನ್ನು ಶೇಖರಿಸಲಾಗಿದೆ. ಕಾರಾಗೃಹಕ್ಕೆ ಭೇಟಿ ನೀಡುವ ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿಗಳ ಸಲ ಹೆಯಂತೆ ಔಷಧಿಗಳನ್ನು ಬಂಧಿಗಳಿಗೆ ವಿತರಿಸ ಲಾಗುತ್ತಿದೆ. ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯವರಿಂದ ವಾರಕ್ಕೊಮ್ಮೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ ಎಂದರು.

ಕಾರಾಗೃಹದ ಮುಖ್ಯದ್ವಾರದ ಬಳಿ ಸುಸಜ್ಜಿತ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರದೊಂದಿಗೆ ಸೋಂಕು ನಿವಾರಕ ಸುರಂಗ ನಿರ್ಮಿಸಲಾಗಿದೆ. ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ಖರೀದಿಸಲು ಬಿಡುಗಡೆ ಮಾಡಿರುವ ಅನುದಾನದಲ್ಲಿ ಅಗತ್ಯವಿರುವ ಪಿಪಿಇ ಕಿಟ್, ಹ್ಯಾಂಡ್ ಗ್ಲೌಸ್, ಮಾಸ್ಕ್, ಥರ್ಮಲ್ ಸ್ಕ್ರೀನಿಂಗ್ ಮೆಷಿನ್ ಕಿಟ್ ಸೇರಿದಂತೆ ಇತರೆ ಪರಿಕರಗಳನ್ನು ಖರೀದಿಸಿ, ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲ ಬಂಧಿಗಳಿಗೆ ಊಟ ವಿತರಣೆ ಮಾಡುವ ಸಂದರ್ಭದಲ್ಲಿ ಹಾಗೂ ಕೊಠಡಿಯಲ್ಲಿ ಅಂತರ ಕಾಯ್ದುಕೊಳ್ಳಲು ಸೂಚಿಸಿ, ಪರಿಶೀಲಿಸಲಾಗುತ್ತಿದೆ. ಕಾರಾಗೃಹದಲ್ಲಿ ಯಾವುದೇ ಸಂಘ, ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತಿಲ್ಲ ಎಂದು ತಮ್ಮ ಕರ್ತವ್ಯ ಪಾಲನೆಯ ಅನುಭವ ಹಂಚಿಕೊಂಡರು.

ಗ್ರಂಥಾಲಯದ ಕೊಠಡಿ ಬಂಧಿಗಳ ಬ್ಯಾಂಕ್ ಆಗಿ ಪರಿವರ್ತನೆ: ಬಂಧಿಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವ ಉದ್ದೇಶದಿಂದ ಕಾರಾಗೃಹದ ಒಳಾವರಣದಲ್ಲಿರುವ ಗ್ರಂಥಾ ಲಯದ ಕೊಠಡಿಯನ್ನು ಬಂಧಿಗಳ ಬ್ಯಾಂಕ್ ಆಗಿ ಪರಿವರ್ತನೆಗೆ ಲೋಕೋಪ ಯೋಗಿ ಇಲಾಖೆ ದಾವಣಗೆರೆಯಿಂದ ಅಂದಾಜು ಪಟ್ಟಿ ಪಡೆದು ಬಿಲ್ಲು ತಯಾರಿಸಿ ಮೇಲು ರುಜುವಿಗಾಗಿ ಪ್ರಧಾನ ಕಛೇರಿಗೆ ಒಪ್ಪಿಸಲಾಗಿದೆ ಎಂದರು.


– ಜಿ.ಎಸ್.ವಸಂತ್ ಕುಮಾರ್

error: Content is protected !!