ದಾವಣಗೆರೆ, ಮೇ 7- ಜಿಲ್ಲಾದ್ಯಂತ ಒಟ್ಟು 2,425 ಬೆಡ್‍ಗಳಿದ್ದು 962 ಬೆಡ್‍ಗಳು ಭರ್ತಿಯಾಗಿವೆ. ಇನ್ನೂ 1,463 ಬೆಡ್‍ಗಳು ಲಭ್ಯವಿವೆ. ಮೇ 6 ರಂದು ಐಸೋಲೇಷನ್, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಒಟ್ಟು 701 ಬೆಡ್‍ಗಳು ಪಾಸಿಟಿವ್ ಪ್ರಕರಣಗಳಿಗೆ ಭರ್ತಿಯಾಗಿತ್ತು ಎಂದು ತಿಳಿಸಿದರು. ಇಲ್ಲಿಯವರೆಗೆ 242 ವಯಾಲ್ ರೆಮ್ ಡಿಸಿವಿರ್ ದಾಸ್ತಾನು ಇದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಕೈಗೊಳ್ಳಲಾಗಿರುವ ಹಾಗೂ ಕೈಗೊಳ್ಳಬೇಕಾಗಿರುವ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಈ ವರ್ಷ ಏಪ್ರಿಲ್ 2021 ರವರೆಗೆ 3,485 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ 2,534 ಸಕ್ರಿಯ ಪ್ರಕರಣಗಳಿವೆ. ಮೊದಲನೇ ಅಲೆಯಲ್ಲಿ 264 ಜನರು ಮೃತರಾಗಿದ್ದು, ಎರಡನೇ ಅಲೆಯಲ್ಲಿ ಏಪ್ರಿಲ್ 2021 ರಿಂದ ಇಲ್ಲಿಯವರೆಗೆ 26 ಜನರು ಮೃತಪಟ್ಟಿದ್ದಾರೆ. ದಾವಣಗೆರೆ ತಾಲ್ಲೂಕಿನಲ್ಲಿ 1,583 ಸಕ್ರಿಯ ಪ್ರಕರಣಗಳಿದ್ದು, ಹರಿಹರ 261, ಜಗಳೂರು 141, ಚನ್ನಗಿರಿ 213, ಹೊನ್ನಾಳಿ 241 ಹಾಗೂ ಹೊರ ಜಿಲ್ಲೆಯಿಂದ 95 ಸಕ್ರಿಯ ಪ್ರಕರಣಗಳು ಇದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾವಣಗೆರೆಯಲ್ಲಿ 886, ಚನ್ನಗಿರಿ 130, ಹರಿಹರ 131, ಜಗಳೂರು 57, ಹೊನ್ನಾಳಿ 91 ಸೇರಿದಂತೆ ಒಟ್ಟು 1,295 ಜನರು ಹೋಮ್ ಐಸೋಲೇಷನ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
78 ವೆಂಟಿಲೇಟರ್ : ಜಿಲ್ಲೆಯ ಒಟ್ಟು 8 ಕೋವಿಡ್ ಆಸ್ಪತ್ರೆಗಳಲ್ಲಿ 78 ವೆಂಟಿಲೇಟರ್‍ಗಳಿವೆ. ಚಿಗಟೇರಿ ಆಸ್ಪತ್ರೆಯಲ್ಲಿ 41 ಇದ್ದು, ಅವುಗಳಲ್ಲಿ 20 ವೆಂಟಿಲೇಟರ್‍ಗಳನ್ನು ಕೋವಿಡ್‍ಗಾಗಿ ಬಳಸಲಾಗುತ್ತಿದೆ. ಇನ್ನೂ 15 ವೆಂಟಿಲೇಟರ್‍ಗಳನ್ನು ನುರಿತ ಸಿಬ್ಬಂದಿಗಳ ಕೊರತೆಯಿಂದ ಬಳಸಲು ಸಾಧ್ಯವಾಗಿಲ್ಲ. ಶೀಘ್ರದಲ್ಲಿ ನುರಿತ ಸಿಬ್ಬಂದಿಗಳ ನೇರ ನೇಮಕಾತಿ ನಡೆಸಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವೆಂಟಿಲೇಟರ್ ಲಭ್ಯವಿದ್ದೂ ಸಿಬ್ಬಂದಿ ಕೊರತೆ ಕಾರಣ ಬಳಕೆಯಾಗುತ್ತಿಲ್ಲ ಎಂದು ಹೇಳುವುದು ಸರಿಯಲ್ಲ. ಕೂಡಲೇ ಅಗತ್ಯ ಸಿಬ್ಬಂದಿಗಳ ನೇಮಕಕ್ಕೆ ಕ್ರಮ ವಹಿಸುವಂತೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಈ ವರ್ಷದ ಏಪ್ರಿಲ್ ತಿಂಗಳಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಮುಖವಾಗುತ್ತಿದ್ದು, ಎರಡನೇ ಅಲೆ ಇರುವುದು ಕಂಡುಬಂದಿದೆ. ಜಿಲ್ಲೆಯಲ್ಲಿ ಮಾರ್ಚ್ 2020 ರಿಂದ 2021 ರ ಮೇ 5 ರವರೆಗೆ ಒಟ್ಟು 27,722 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 290 ಜನರು ಮೃತಪಟ್ಟಿದ್ದಾರೆ. ಇಲ್ಲಿಯವರೆಗೂ ಒಟ್ಟು 5,12,226 ಪರೀಕ್ಷೆಗಳನ್ನು ಮಾಡಲಾಗಿದೆ. ಈವರೆಗೆ 3,99,486 ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿದ್ದು, 18,764 ಪಾಸಿಟಿವ್ ಪ್ರಕರಣ ಬಂದಿದೆ. 1,14,090 ರಾಪಿಡ್ ಅಂಟಿಜೆನ್ ಪರೀಕ್ಷೆ ಮಾಡಲಾಗಿದ್ದು, 8,950 ಪಾಸಿಟಿವ್ ಪ್ರಕರಣ ಬಂದಿದೆ
– ಡಾ.ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ
ಆಂಬ್ಯುಲೆನ್ಸ್ ಮತ್ತು ಮುಕ್ತಿ ವಾಹನ: ಜಿಲ್ಲೆಯಲ್ಲಿ ಒಟ್ಟು 76 ಆಂಬ್ಯುಲೆನ್ಸ್‍ಗಳು ಕಾರ್ಯನಿರ್ವಹಿಸುತ್ತಿದ್ದು, ಹೆಚ್ಚುವರಿಯಾಗಿ ಜಿಲ್ಲಾಡಳಿತದಿಂದ ಜಿಲ್ಲಾಸ್ಪತ್ರೆಗೆ 1 ಎ.ಎಲ್.ಎಸ್., 1 ಬಿ.ಎಲ್.ಎಸ್. ಸೇರಿದಂತೆ ಒಟ್ಟು 7 ಆಂಬ್ಯುಲೆನ್ಸ್‌ಗಳನ್ನು ನೀಡಲಾಗಿದ್ದು ಎಲ್ಲಾ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಹಾಗೂ ಕೋವಿಡ್ ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಸಾಗಣೆ ಮಾಡಲು ಜಿಲ್ಲಾಡಳಿತದಿಂದ 2 ಮುಕ್ತಿ ವಾಹನಗಳನ್ನು ಹಾಗೂ ಮಹಾನಗರ ಪಾಲಿಕೆಯಿಂದ 1 ಮುಕ್ತಿ ವಾಹನ ಕಾರ್ಯ ನಿರ್ವಹಿಸುತ್ತಿದೆ.
ಕೋವಿಡ್ ಕೇರ್ ಸೆಂಟರ್ : ದಾವಣಗೆರೆ ತಾಲ್ಲೂಕಿನಲ್ಲಿ ಜೆ.ಹೆಚ್.ಪಟೇಲ್ ಮತ್ತು ಬಾಡಾ ಕ್ರಾಸ್ ಹಾಸ್ಟೆಲ್‍ನಲ್ಲಿ ಕೋವಿಡ್ ಕೇರ್ ಸೆಂಟರ್ ಇದ್ದು ಇಲ್ಲಿಯವರೆಗೆ 52 ಜನ ದಾಖಲಾಗಿದ್ದಾರೆ. 32 ಜನ ಬಿಡುಗಡೆಯಾಗಿದ್ದು, ಪ್ರಸ್ತುತ 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊನ್ನಾಳಿಯಲ್ಲಿ ಒಟ್ಟು 80 ಬೆಡ್ ಸಾಮರ್ಥ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಇದ್ದು 16 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಹರಿಹರದ ಗುತ್ತೂರು ಗ್ರಾಮದಲ್ಲಿ 130 ಹಾಸಿಗೆ ಸಾಮರ್ಥ್ಯವುಳ್ಳ ಕೋವಿಡ್ ಕೇರ್ ಸೆಂಟರ್ ಇದ್ದು, 83 ಜನ ದಾಖಲಾಗಿದ್ದು 44 ಜನ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 39 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚನ್ನಗಿರಿಯ ರಾಣಿ ಚೆನ್ನಮ್ಮ ವಸತಿಯುತ ಶಾಲೆಯಲ್ಲಿ 100 ಬೆಡ್ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್ ಇದ್ದು, 11 ಜನ ಬಿಡುಗಡೆಯಾಗಿದ್ದು, ಪ್ರಸ್ತುತ 9 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಗಳೂರು ತಾಲ್ಲೂಕಿನಲ್ಲಿ 45 ಜನ ಕೋವಿಡ್ ಕೇರ್ ಸೆಂಟರ್‍ಗೆ ದಾಖಲಾಗಿದ್ದರು, ಈ ಪೈಕಿ ಸದ್ಯ 24 ಜನ ಇದ್ದಾರೆ ಎಂದು ಆಯಾ ತಾಲ್ಲೂಕಿನ ತಹಶೀಲ್ದಾರರು ಮಾಹಿತಿ ನೀಡಿದರು.