ಸೋಂಕಿತರನ್ನು ಕಡೆಗಣಿಸದೇ ಸೂಕ್ತ ಸಮಯಕ್ಕೆ ಚಿಕಿತ್ಸೆ ನೀಡಿ

ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್

ಜಗಳೂರು, ಮೇ 7- ಕೋವಿಡ್‌ ಸೋಂಕಿತರನ್ನು ಕಡೆಗಣಿಸದೇ ಸರಿಯಾದ ಸಮಯಕ್ಕೆ  ಚಿಕಿತ್ಸೆ ನೀಡಿ ಕಡ್ಡಾಯವಾಗಿ ಲಸಿಕೆ ಹಾಕಿಸಿ, ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ವೈದ್ಯಾಧಿ ಕಾರಿಗಳು ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.  

ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ  ಇಂದು  ಭೇಟಿ ನೀಡಿ  ಪರಿಶೀಲನೆ ನಡೆಸಿ ಅವರು ಮಾತನಾಡಿದರು. 

ಕೊರೊನಾ ಗೆಲ್ಲಬೇಕಾದರೆ ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯವಾಗಿ ಹಾಕಿಕೊಳ್ಳಬೇಕು. ಅನವಶ್ಯಕವಾಗಿ ತಿರುಗಾಡದೇ ಮನೆಯಲ್ಲೇ ಇರಬೇಕು. ಸರಕಾರದ ನಿಯಮಗಳನ್ನು ಪಾಲಿಸಬೇಕು. ಜನರು ಜಾಗ್ರತೆ ವಹಿಸಬೇಕು, ಭಯಪಡಬಾರದು ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಕಳೆದ ವರ್ಷ  ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ಐಸೋಲೇಷನ್  ತೆರೆಯಲಾಗಿತ್ತು. ಅದಕ್ಕೂ ಮುನ್ನ  ಸೋಂಕಿತರು, ಸಾಮಾನ್ಯ ರೋಗಿಗಳು ಒಂದೇ  ಬಾಗಿಲಿನಿಂದ  ಓಡಾಡಬೇಕಾಗಿತ್ತು. ಇದರಿಂದ ಸಾಕಷ್ಟು ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿದ್ದರಿಂದ  ಹೊರ ಭಾಗದಿಂದಲೇ ಐಸೋಲೇಷನ್‍ಗೆ  ಹೋಗಲು ಪ್ರತ್ಯೇಕ ಬಾಗಿಲು ಮಾಡಲಾಯಿತು ಎಂದು ಸಚಿವರ  ಗಮನಕ್ಕೆ ತಂದರು. 

ಕೋವಿಡ್ ಕೇಂದ್ರಕ್ಕೆ ಸಚಿವ, ಸಂಸದರ ಭೇಟಿ:  ಇದಕ್ಕೂ ಮುನ್ನ ತಾಲ್ಲೂಕಿನ ಮೆದಗಿನಕೆರೆ ಗ್ರಾಮ ಸಮೀಪದ ಮೊರಾರ್ಜಿ ವಸತಿ ಶಾಲೆಯಲ್ಲಿರುವ ಕೋವಿಡ್ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಕೋವಿಡ್ ಸೋಂಕಿತ ವ್ಯಕ್ತಿಗಳ ಯೋಗ ಕ್ಷೇಮ ವಿಚಾರಿಸಿದರು.

ನಾನು ಯಾರು ಗೊತ್ತಾ… ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜು, ಇವರು ಯಾರು ಗೊತ್ತಾ… ದಾವಣಗೆರೆ ಜಿಲ್ಲೆಯ ಸಂಸದ ಜಿ.ಎಂ.ಸಿದ್ದೇಶ್ವರ, ಇವರು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಂದು ಸೋಂಕಿತ ಕೋವಿಡ್ ವ್ಯಕ್ತಿಗಳೊಂದಿಗೆ ಸಚಿವರು ಪರಿ ಚಯ ಹೇಳಿಕೊಂಡು, ಏನಾದರು ತೊಂದರೆಯಾದರೆ ಜಿಲ್ಲಾ ಧಿಕಾರಿಗಳಿಗೆ ಪೋನ್ ಮಾಡಿ, ಅಗತ್ಯ ಸೌಲಭ್ಯಗಳನ್ನು ನೀಡುತ್ತಾರೆ. ಧೈರ್ಯವಾಗಿ ಇದ್ದು ಕೊರೊನಾದಿಂದ ಗುಣಮುಖರಾಗಬೇಕು. ಸರ್ಕಾರ ಸದಾ ಜನರ ಹಿತವನ್ನೇ ಕಾಪಾಡುತ್ತದೆ ಎಂದು ಸಚಿವರು ಧೈರ್ಯ ತುಂಬಿದರು.

 ಸರಿಯಾದ ಮಾಹಿತಿ ನೀಡದ ವೈದ್ಯಾಧಿಕಾರಿಗೆ ತರಾಟೆ: ತಾಲ್ಲೂಕಿನಲ್ಲಿ ಎಷ್ಟು ಜನ ಕೋವಿಡ್‍ಗೆ ಒಳಗಾ ಗಿದ್ದಾರೆ, ಮರಣದ ಸಂಖ್ಯೆಯ ಮಾಹಿತಿ ಸ್ಪಷ್ಟವಾಗಿ ತಿಳಿಸಬೇಕು. ಎಂದು ಸಚಿವರು ಕೇಳಿದ ಪ್ರಶ್ನೆಗೆ ತಾಲ್ಲೂಕು ವೈದ್ಯಾಧಿಕಾರಿ ಡಾ. ನಾಗರಾಜ್ ಒಂದು  ಸಾವು ಎಂದರು. ಇದರಿಂದ ಸಿಡಿಮಿಡಿಗೊಂಡ ಸಚಿವರು ಕೋವಿಡ್ ಪ್ರಮಾಣ ಜಾಸ್ತಿಯಾಗುವ ಮೂಲಕ ಜಗಳೂರು ಪಟ್ಟಣದಲ್ಲಿ ಸಾವಿನ ಸಂಖ್ಯೆ ಏರುತ್ತಿದ್ದು, 4 ಕ್ಕೂ ಅಧಿಕ ಜನರು ಕೋವಿಡ್‌ನಿಂದ ಮರಣ ಹೊಂದಿದ್ದಾರೆ. ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಆಗುತ್ತಿಲ್ಲ ಎಂದು ಪತ್ರಕರ್ತರು ನನ್ನನ್ನು ಪ್ರಶ್ನೆ ಮಾಡಿದ್ದಾರೆ. ಯಾವುದು ಸರಿ? ಸರಿಯಾದ ಅಂಕಿ – ಅಂಶ ನೀಡಿ ಎಂದು ತರಾಟೆಗೆ ತೆಗೆದುಕೊಂಡರು. ಗಲಿಬಿಲಿಗೊಂಡ ವೈದ್ಯಾಧಿಕಾರಿಗಳು  4 ಸಾವಾಗಿದ್ದು,  ಒಂದು ಸರ್ಕಾರದಿಂದ ವರದಿ ಬಂದಿದೆ. ಇನ್ನು ಮೂರು ವರದಿಗಳು ಬರಬೇಕಿದೆ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ ಕೋವಿಡ್ ಸೋಂಕಿತ ವ್ಯಕ್ತಿಗಳು ಎದೆ ಗುಂದಬಾರದು. ಹೊರಗಡೆ ಎಲ್ಲೂ ಓಡಾಡಬಾರದು. ಸಾಮಾಜಿಕ ಅಂತರ, ಮಾಸ್ಕ್ ಧರಿಸಬೇಕು. ಸರ್ಕಾರದಿಂದ ಸಿಗಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಕೋವಿಡ್ ಸೋಂಕಿತರೊಂದಿಗೆ ಕುಶಲೋಪರಿ  ವಿಚಾರಿಸಿ ಮಾತನಾಡಿ, ವಿಟಮಿನ್ ಸಿ. ಟ್ಯಾಬ್ಲೆಟ್ಸ್ ಸೇರಿದಂತೆ  ಸಂಬಂಧಿಸಿದ ಮಾತ್ರೆಗಳು ನೀಡುತ್ತಾರೆಯೇ? ಎಂದು ಕೇಳಿದರಲ್ಲದೇ ಊಟದ ವ್ಯವಸ್ಥೆ ಹೇಗಿದೆ ಎಂಬ ಮಾಹಿತಿ ಪಡೆದುಕೊಂಡರು. ಗುಣಮುಖರಾದ ಮೇಲೆ ನೀವು ಸಾಧ್ಯವಾದಷ್ಟು ಮನೆಯಲ್ಲೇ ಇದ್ದು ಸುರಕ್ಷಿತವಾಗಿ ಇರುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ, ತಹಸೀಲ್ದಾರ್ ಡಾ. ನಾಗವೇಣಿ, ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಮಲ್ಲನಾಯ್ಕ್, ನೋಡಲ್ ಅಧಿಕಾರಿ ಚಂದ್ರಶೇಖರ್, ಡಿಎಚ್‌ಒ ನಾಗರಾಜ್, ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಆಡಳಿತಾಧಿಕಾರಿ ಡಾ. ನೀರಜ್ ಇನ್ನಿತರರಿದ್ದರು.

error: Content is protected !!