ಡಿಸಿ-ಎಸ್ಪಿ ಸಮಯ ಪ್ರಜೆಯಿಂದ ಆಸ್ಪತ್ರೆಯ ಕೋವಿಡ್ ರೋಗಿಗಳ ಜೀವ ರಕ್ಷಣೆ
ದಾವಣಗೆರೆ, ಮೇ 6- ಕೋವಿಡ್ ರೋಗಿಗಳಿಗೆ ಪ್ರತಿ ದಿನ ಆಮ್ಲಜನಕ ಪೂರೈಕೆಯ ಆಕ್ಸಿಜನ್ ತುಂಬಿದ ಟ್ಯಾಂಕರ್ ಬರುವುದು ತಡವಾದ ಹಿನ್ನೆಲೆಯಲ್ಲಿ ಕೆಲಕಾಲ ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿತ್ತು.
ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮೊಕ್ಕಾಂ ಹೂಡಿ ಕೋವಿಡ್ ರೋಗಿಗಳಿಗೆ ಆಕ್ಸಿಜನ್ ಕೊರತೆಯಾಗದಂತೆ ಸಮರ್ಥವಾಗಿ ನಿಭಾಯಿಸುವ ಮುಖೇನ ಕೋವಿಡ್ ರೋಗಿಗಳ ಜೀವ ರಕ್ಷಿಸಿ, ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಎಸ್ಪಿ ಹನುಮಂತರಾಯ ಅವರೂ ಸಹ ಸಾಥ್ ನೀಡಿ ಜೀವ ಉಳಿಸುವಲ್ಲಿ ಕಾರಣೀಭೂತರಾದರು.
ನಗರದ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ರೋಗಿಗಳಿಗೆ ವಿಜಯನಗರ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನ ಜಿಂದಾಲ್ ಕಂಪನಿಯಿಂದ ಪ್ರತಿ ನಿತ್ಯ 6 ಸಾವಿರ ಲೀಟರ್ ಲಿಕ್ವಿಡ್ ಆಕ್ಸಿಜನ್ ಹೊತ್ತು ಆಕ್ಸಿಜನ್ ಟ್ಯಾಂಕರ್ ಮುಂಜಾನೆ 8.45ಕ್ಕೆ ಗಂಟೆಗೆ ಬರುತ್ತದೆ. ನಂತರ ಜಿಲ್ಲಾಸ್ಪತ್ರೆಯ ಆವರಣದಲ್ಲಿನ 6 ಸಾವಿರ ಲೀಟರ್ ಸಾಮರ್ಥ್ಯವುಳ್ಳ ಸ್ಥಿರ ಟ್ಯಾಂಕರ್ ಗೆ ತುಂಬಿಸಿ ಸೋಂಕಿತ ಆಕ್ಸಿಜನ್ ಅವಲಂಬಿತರಾದ ರೋಗಿಗಳಿಗೆ ಆಕ್ಸಿಜನ್ ಪೂರೈಸಲಾಗುತ್ತಿದೆ. ಆದರೆ ಇಂದು ಅಲ್ಲಿ ಫಿಲ್ಲಿಂಗ್ ಮಾಡಿ ಆಕ್ಸಿಜನ್ ತುಂಬಿದ್ದ ಟ್ಯಾಂಕರ್ ಅನ್ನು ಕಳಿಸಲು ತಡ ಮಾಡಲಾಗಿತ್ತು.
ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ಘಟಕದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಆಗಿದ್ದನ್ನು ಗಮನಿಸಿದ್ದ ಆಸ್ಪತ್ರೆಯ ಅಧಿಕಾರಿಗಳು ತಕ್ಷಣವೇ ವಿಷಯವನ್ನು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಮುಟ್ಟಿಸಿದ್ದಾರೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ಜಿಲ್ಲಾಧಿಕಾರಿಗಳು ತಕ್ಷಣವೇ ಜಿಂದಾಲ್ ಕಂಪನಿಗೆ ಸಂಪರ್ಕಿಸಿ ಆಮ್ಲಜನಕ ಟ್ಯಾಂಕರ್ ಅನ್ನು ತಕ್ಷಣವೇ ಕಳಿಸುವಂತೆ ಮನವಿ ಮಾಡಿದ್ದಾರೆ.
ಆಕ್ಸಿಜನ್ ಟ್ಯಾಂಕರ್ ಬರುವುದರೊಳಗಾಗಿ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ತೊಂದರೆಯಾಗಬಾರದೆಂದು ಸ್ಥಳೀಯ ಖಾಸಗಿ ಆಸ್ಪತ್ರೆಗಳಿಂದ ಹಾಗೂ ಗ್ಯಾಸ್ ಏಜೆನ್ಸಿಗಳಿಂದ ತಕ್ಷಣಕ್ಕೆ ಜಂಬೋ ಆಕ್ಷಿಜನ್ ಸಿಲಿಂಡರ್ ತರಿಸಿದ್ದಾರೆ, ಆಕ್ಷಿಜನ್ ತರುವ ವಾಹನಗಳಿಗೆ ಎಸ್ ಪಿ ಹನುಮಂತ ರಾಯ ಹಾಗೂ ದಾವಣಗೆರೆ ಬಡಾವಣೆ ಠಾಣೆ ಹಾಗೂ ಕೆಟಿಜೆ ನಗರ ಪೊಲೀಸ್ ಸಿಬ್ಬಂದಿಗಳ ಜೊತೆ ಆಕ್ಸಿಜನ್ ಸಿಲಿಂಡರ್ ವಾಹನವನ್ನು ಕಳಿಸಿದ್ದಲ್ಲದೆ, ರಸ್ತೆಯಲ್ಲಿ ಬರುವಾಗ ಯಾವುದೇ ತೊಂದರೆ ಆಗದಂತೆ ನೋಡಿಕೊಂಡು ಜಿಲ್ಲಾಸ್ಪತ್ರೆಗೆ ಸಿಲಿಂಡರ್ ತರಿಸಿದ್ದಾರೆ.
ಆಕ್ಸಿಜನ್ ಟ್ಯಾಂಕರ್ಗೆ ಪೊಲೀಸರ ಬೆಂಗಾವಲು
ದಾವಣಗೆರೆ, ಮೇ 6- ಇನ್ನು ಮುಂದೆ ತಡವಾಗದಂತಿರಲು ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ತುಂಬಿದ ಟ್ಯಾಂಕರ್ ಅನ್ನು ಪೊಲೀಸರ ಬೆಂಗಾವಲಿನಲ್ಲಿ ತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಆಮ್ಲಜನಕ ತುಂಬಿದ ಟ್ಯಾಂಕರ್ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂರು ಮಹಡಿಗಳಲ್ಲಿ ಇರುವ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುವುದು ಸವಾಲಿನ ಕೆಲಸ. ಈ ನಿಟ್ಟಿನಲ್ಲಿ ಎಲ್ಲಾ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳ ಶ್ರಮ ಅಪಾರ. ಶ್ರದ್ದೆ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುವ ತಂಡ ನಮ್ಮಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರತಿ ದಿನ ಬೆಳಿಗ್ಗೆ ಜಿಲ್ಲಾಸ್ಪತ್ರೆಗೆ ಆಮ್ಲಜನಕ ಬರುತ್ತಿತ್ತು. ಆದರೆ, ಇಂದು ಉತ್ಪಾದನಾ ಘಟಕದಲ್ಲಿ ಟ್ಯಾಂಕರ್ ಗೆ ಆಮ್ಲಜನಕ ತುಂಬುವಲ್ಲಿ ತಡವಾಗಿದ್ದ ಕಾರಣ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಂತಹ ಸಂದರ್ಭದಲ್ಲಿ ಪ್ರತಿ ನಿಮಿಷವೂ ನಮಗೆ ಮಹತ್ವದ್ದಾಗಿತ್ತು. ಆದರೂ ಆಕ್ಸಿಜನ್ ಟ್ಯಾಂಕರ್ ಬರುವುದು ತಡವಾದ ಹಿನ್ನೆಲೆಯಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸೇರಿದಂತೆ ಇತರೆ ಆಮ್ಲಜನಕ ಉತ್ಪಾದನಾ ಘಟಕಗಳಿಂದ 330 ಆಕ್ಸಿಜನ್ ಜಂಬೋ ಸಿಲಿಂಡರ್ ಗಳನ್ನು ತರಿಸಿಕೊಂಡು ಯಾವುದೇ ತೊಂದರೆ ಆಗದಂತೆ ಕಾರ್ಯ ಪ್ರವೃತ್ತರಾದೆವು. ಹರಿಹರದ ಸದರನ್ ಆಕ್ಸಿಜನ್ ಘಟಕದಿಂದ ತರಿಸಿ, ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಕೊರತೆ ಆಗದಂತೆ ವ್ಯವಸ್ಥೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಕೊರೊನಾ ಸೋಂಕಿನ ಬಗ್ಗೆ ಸಾರ್ವಜನಿಕರು ಭಯಭೀತರಾಗದೇ, ಬೇಕಾಬಿಟ್ಟಿ ಓಡಾಡದೇ ಕೊರೊನಾ ಸೋಂಕಿನ ಕೊಂಡಿಯನ್ನು ಹೊಡೆದು ಓಡಿಸಬೇಕಿದೆ. ನಿಮಗೆಲ್ಲಾ ಕೈಮುಗಿದು ಬೇಡಿಕೊಳ್ಳುತ್ತೇನೆ ಎಂದು ಅವರು ಮನವಿ ಮಾಡಿದರು.
ಜಿಲ್ಲಾಸ್ಪತ್ರೆಯ 3 ಮಹಡಿಗಳಲ್ಲಿ ಸುಮಾರು 403 ಜನ ಸೋಂಕಿತರಿದ್ದಾರೆ. ಇದರಲ್ಲಿ 103 ಕೋವಿಡ್ ಸೋಂಕಿತರಲ್ಲದವರು, 300 ಜನ ಕೋವಿಡ್ ಸೋಂಕಿತರಿದ್ದು, ಆಕ್ಸಿಜನ್ ಮೇಲೆ ಅವಲಂಬಿತರಾಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಬ್ಬರ ಸಮಯ ಪ್ರಜ್ಞೆಯಿಂದಾಗಿ ಸೋಂಕಿತರ ಜೀವ ಉಳಿದಿದ್ದು, ದೊಡ್ಡ ದುರಂತ ತಪ್ಪಿದಂತಾಗಿದೆ.
ವಿಜಯನಗರ ಜಿಲ್ಲೆಯ ಸಂಡೂರು ತಾಲ್ಲೂಕಿನ ತೋರಣಗಲ್ಲಿನ ವಿಜಯನಗರ ಘಟಕದಿಂದ ಮಧ್ಯಾಹ್ನ ಸುಮಾರು 2.16ಕ್ಕೆ ಆಕ್ಸಿಜನ್ ಟ್ಯಾಂಕರ್ ದಾವಣಗೆರೆಯ ಜಿಲ್ಲಾಸ್ಪತ್ರೆ ಪ್ರವೇಶಿಸಿ, ನಿರ್ಮಿಸಲಾಗಿದ್ದ ಆಮ್ಲಜನಕ ಟ್ಯಾಂಕರ್ ಗೆ ವರ್ಗಾಯಿಸಲಾಯಿತು. 5 ಗಂಟೆಗಳು ತಡವಾಗಿ ಆಕ್ಸಿಜನ್ ಟ್ಯಾಂಕರ್ ಆಗಮಿಸಿತು. ತಡವಾದ ಹಿನ್ನೆಲೆಯಲ್ಲಿ ಭಯದ ವಾತಾವರಣ ಉಂಟಾಗಿತ್ತು.
ಜಿಲ್ಲಾ ವರಿಷ್ಠಾಧಿಕಾರಿ ಹನುಮಂತರಾಯ ನೇತೃತ್ವದಲ್ಲೇ ಝೀರೋ ಟ್ರಾಫಿಕ್ ನಲ್ಲಿ ಪೊಲೀಸ್ ಬೆಂಗಾವಲಿನಲ್ಲಿ ದಾವಣಗೆರೆಗೆ ಆಕ್ಸಿಜನ್ ಟ್ಯಾಂಕರ್ ತರಿಸಲಾಯಿತು.
ಟ್ಯಾಂಕರ್ ಬಂದು ಇಲ್ಲಿನ ಘಟಕಕ್ಕೆ ವರ್ಗಾಯಿಸುವವರೆಗೂ ಜಿಲ್ಲಾಧಿಕಾರಿಗಳು ಜಿಲ್ಲಾಸ್ಪತ್ರೆಯಲ್ಲೇ ಮೊಕ್ಕಾಂ ಹೂಡಿದ್ದರು. ನಂತರ ನಿರಾಳರಾದರು. ಇಲ್ಲವಾದಲ್ಲಿ ರೋಗಿಗಳಿಗೆ ಅಪಾಯ ಬಂದೊದಗುವ ವಿಷಮ ಪರಿಸ್ಥಿತಿ ಎದುರಾಗಿತ್ತು.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಯಾವುದೇ ದುರಂತ ನಡೆಯದಂತೆ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾಸ್ಪತ್ರೆಯ ವೈದ್ಯರು, ಅಧಿಕಾರಿಗಳು, ಸಿಬ್ಬಂದಿಗಳ ತಂಡ ಮಾಡಿದ ಶ್ರಮ ನಿಜಕ್ಕೂ ಪ್ರಶಂಸನೀಯ.