ಮಲೇಬೆನ್ನೂರು, ಮೇ 7- ಮಹಾಮಾರಿ ಕೊರೊನಾ 2ನೇ ಅಲೆ ಗ್ರಾಮೀಣ ಪ್ರದೇಶಕ್ಕೂ ಹರಡುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಏಪ್ರಿಲ್ 20 ರಿಂದ ಮೇ 7 ರವರೆಗೆ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಮಲೇಬೆನ್ನೂರು ಪಟ್ಟಣ ಸೇರಿದಂತೆ ಹೋಬಳಿಯಲ್ಲಿ 80 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಅಲ್ಲದೇ, ಕೊರೊನಾ ಸೋಂಕಿನಿಂದಾಗಿ ಮಲೇಬೆನ್ನೂರು, ಆದಾಪುರ, ಜಿಗಳಿ, ಯಲ ವಟ್ಟಿ, ಭಾನುವಳ್ಳಿ ಗ್ರಾಮಗಳಲ್ಲಿ ತಲಾ ಒಬ್ಬರು ಮತ್ತು ಹೊಳೆಸಿರಿಗೆರೆ, ಹನಗವಾಡಿಯಲ್ಲಿ ತಲಾ ಇಬ್ಬರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಈ ಎಲ್ಲಾ ಆತಂಕಗಳ ನಡುವೆ ಶುಕ್ರವಾರ ಹರಿಹರ ತಾಲ್ಲೂಕಿನಲ್ಲಿ 25 ಜನರಿಗೆ ಮಾತ್ರ ಸೋಂಕು ದೃಢಪಟ್ಟಿದೆ. ಕಳೆದ 15 ದಿನಗಳಲ್ಲಿ ಮಂಗಳವಾರ (ಮೇ 4) ಅತಿ ಹೆಚ್ಚು ಎಂದರೆ 107 ಕೊರೊನಾ ಕೇಸುಗಳು ಪತ್ತೆಯಾಗಿದ್ದವು. ಬುಧವಾರ (ಮೇ 5) 77 ಜನರಿಗೆ ಮತ್ತು ಗುರುವಾರ 46 ಜನರಿಗೆ ಪಾಸಿಟಿವ್ ಬಂದಿದೆ.
ಮಲೇಬೆನ್ನೂರಿನಲ್ಲಿ ಗುರುವಾರ ಒಂದೂ ಪಾಸಿಟಿವ್ ಕೇಸ್ ಬಂದಿರಲಿಲ್ಲ. ಶುಕ್ರವಾರ ಇಬ್ಬರು ಸೇರಿ ಇದುವರೆಗೆ ಒಟ್ಟು 13 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿನಿಂದ ಒಬ್ಬರು ಮಾತ್ರ ಮೃತಪಟ್ಟಿದ್ದಾರೆ.
ಹಳ್ಳಿಗಳಲ್ಲಿ ಸೋಂಕಿತರು : ಜಿಗಳಿ -2, ಹಾಲಿವಾಣ -3, ಕೊಮಾರನಹಳ್ಳಿ -3, ಕುಂಬಳೂರು -7, ಕೊಕ್ಕನೂರು -4, ನಿಟ್ಟೂರು -6, ಯಲವಟ್ಟಿ -4, ಉಕ್ಕಡಗಾತ್ರಿ -4, ವಾಸನ -1, ಬೂದಿಹಾಳ್ -2, ಗುಳದಹಳ್ಳಿ -2, ಮಲ್ಲನಾಯ್ಕನಹಳ್ಳಿ -2, ಹೊಳೆಸಿರಿಗೆರೆ -11, ಜಿ.ಟಿ.ಕಟ್ಟಿ-2, ಬಿಳಸನೂರು -5, ಹಳ್ಳಿಹಾಳ್-2, ಹರಳಹಳ್ಳಿ -1, ಕುಣೆಬೆಳಕೆರೆ -2, ಹೊಸಹಳ್ಳಿಯಲ್ಲಿ ಒಬ್ಬರಿಗೆ ಸೋಂಕು ತಗುಲಿರುವ ಬಗ್ಗೆ ಉಪತಹಶೀಲ್ದಾರ್ ಆರ್.ರವಿ ಮಾಹಿತಿ ನೀಡಿದರು.
ನಿರ್ಲಕ್ಷ್ಯವೇ ಸಾವಿಗೆ ಕಾರಣ
ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ.ಮಂಜುನಾಥ್ ಅವರ ಪ್ರಕಾರ `ಯುವಕರ ನಿರ್ಲಕ್ಷ್ಯವೇ ಸೋಂಕಿಗೆ ತುತ್ತಾಗುತ್ತಿರುವುದಕ್ಕೆ ಮೊದಲ ಕಾರಣವಾಗಿದೆ. ನಮಗೆ ಏನೂ ಆಗುವುದಿಲ್ಲ ಎನ್ನುವ ಮನೋಭಾವ ಯುವಕರನ್ನು ಹೆಚ್ಚು ಹೆಚ್ಚು ಸೋಂಕಿಗೆ ತುತ್ತಾಗಿಸುತ್ತಿದೆ. ಯುವಕರು ಗುಂಪು ಸೇರುವುದು ಕೂಡ ಹೆಚ್ಚು. ಆದ್ದರಿಂದ ಅವರಲ್ಲಿ ಸೋಂಕು ಬೇಗನೆ ಹರಡುತ್ತಿದೆ. ರೋಗ-ನಿರೋಧಕ ಶಕ್ತಿ ಚೆನ್ನಾಗಿದ್ದವರು ಬದುಕುತ್ತಾರೆ. ಕೆಲವರಿಗೆ ಸೋಂಕು ಬಂದಿರುವುದೇ ಗೊತ್ತಾಗುವುದಿಲ್ಲ. ರೋಗ – ನಿರೋಧಕ ಶಕ್ತಿ ಕಡಿಮೆ ಇದ್ದವರು ಸಾವಿಗೆ ತುತ್ತಾಗುತ್ತಾರೆ ಎಂದು ಡಾ. ಮಂಜುನಾಥ್ ಹೇಳಿದ್ದಾರೆ.
ಲಸಿಕೆಗೆ ಹೆಚ್ಚಿದ ಬೇಡಿಕೆ : ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸಾವು – ನೋವು ಹೆಚ್ಚಾಗುತ್ತಿರುವುದರಿಂದ 45 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಪರದಾಡುತ್ತಿದ್ದಾರೆ. ಲಸಿಕೆ ಬಂದ ಆರಂಭದಲ್ಲಿ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದವರೇ ಇಂದು ಲಸಿಕೆ ಬೇಕು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಏಪ್ರಿಲ್ ತಿಂಗಳಲ್ಲಿ ಆರೋಗ್ಯ ಇಲಾಖೆಯವರು ಹಳ್ಳಿಗಳಿಗೆ ಹೋಗಿ ಲಸಿಕೆ ಹಾಕುತ್ತೇವೆ ಬನ್ನಿ ಎಂದರೆ ಬಾರದವರು, ಇಂದು ಲಸಿಕೆಗಾಗಿ ಸರ್ಕಾರಿ ಆಸ್ಪತ್ರೆಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ ಎಂದು ಹಿರಿಯ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು.
ಹಳ್ಳಿಗಳಲ್ಲಿ ಜಾಗೃತಿ : ಕಳೆದ ವರ್ಷ ಕೊರೊನಾ ಕಾಲಿಟ್ಟ ಸಂದರ್ಭದಲ್ಲಿ ಗ್ರಾ.ಪಂ ಹಾಗೂ ಹಳ್ಳಿಗಳ ಮಟ್ಟದಲ್ಲಿ ರಚನೆಯಾಗಿದ್ದ ರೀತಿಯಲ್ಲೇ ಈ ವರ್ಷವೂ ಗ್ರಾ.ಪಂ.ಗಳಲ್ಲಿ ಹೊಸ ಅಧ್ಯಕ್ಷರ-ಉಪಾಧ್ಯಕ್ಷ ಹಾಗೂ ಸದಸ್ಯರು, ಅಂಗನವಾಡಿ, ಆಶಾ ಕಾರ್ಯಕರ್ತರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಶಿಕ್ಷಕರನ್ನು ಒಳಗೊಂಡ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲಾಗಿದೆ. ಎಲ್ಲಾ ಹಳ್ಳಿಗಳಲ್ಲಿ ಟಾಸ್ಕ್ಫೋರ್ಸ್ ಸಮಿತಿ ಕೊರೊನಾ 2ನೇ ಅಲೆ ನಿಯಂತ್ರಿಸಲು ಉತ್ತಮವಾಗಿ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ. ನಗರಗಳಿಂದ ಹಳ್ಳಿಗೆ ಬಂದ ವರ ಮಾಹಿತಿ, ಅವರ ಆರೋಗ್ಯ ತಪಾಸಣೆ, ಹೋಂ ಕ್ವಾರಂಟೈನ್ ಮಾಡಿಸುವುದು ಮತ್ತು ಜನರಲ್ಲಿ ಕೊರೊನಾ ಬಗ್ಗೆ ಅರಿವು ಮೂಡಿಸುವುದು ಹಾಗೂ ಸ್ವಚ್ಛತೆ, ಫಾಗಿಂಗ್ ಮಾಡಿಸುವಂತಹ ಕೆಲಸಗಳು ನಡೆದಿವೆ.