ಸೋಮವಾರದಿಂದ ಜನ ಸಂಚಾರ ಸ್ತಬ್ಧ, ಅಗತ್ಯ ವಸ್ತುಗಳ ಖರೀದಿಗೂ ವಾಹನ ಬಳಕೆ ನಿಷೇಧ
ಬೆಂಗಳೂರು, ಮೇ 7 – ಕೊರೊನಾ ಬಗ್ಗು ಬಡಿಯಲು ಮೇ 10ರಿಂದ ಬಿಗಿ ಲಾಕ್ಡೌನ್ ವಿಧಿಸಿರುವ ರಾಜ್ಯ ಸರ್ಕಾರ, ಜನ ಸಂಚಾರದ ಮೇಲೆ ಗರಿಷ್ಠ ನಿರ್ಬಂಧ ಹೇರಿದೆ. ಅಗತ್ಯ ವಸ್ತುಗಳ ಖರೀದಿಗೂ ಜನ ವಾಹನ ಬಳಸದಂತೆ ನಿಷೇಧಿಸಿದೆ.
ಸಂಪುಟ ಸಭೆ ಹಾಗೂ ಅಧಿಕಾರಿಗಳ ಜೊತೆಗಿನ ಚರ್ಚೆಯ ನಂತರ ಲಾಕ್ಡೌನ್ ಪ್ರಕಟಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸೋಮವಾರ ಬೆಳಿಗ್ಗೆ 6ರಿಂದ ಮೇ 24ರ ಬೆಳಿಗ್ಗೆ 6ರವರೆಗೆ ರಾಜ್ಯ ಸಂಪೂರ್ಣ ಲಾಕ್ಡೌನ್ನಲ್ಲಿರಲಿದೆ. ಅಗತ್ಯ ವಾದರೆ ಲಾಕ್ಡೌನ್ ವಿಸ್ತರಣೆಯಾಗಲಿದೆ ಎಂದಿದ್ದಾರೆ.
ಅಂಗಡಿ, ಮುಂಗಟ್ಟು, ಪಬ್, ಬಾರ್, ಹೋಟೆಲ್, ಕೈಗಾರಿಕಾ ಚಟುವಟಿಕೆ ನಿರ್ಬಂಧಿಸಲಾಗಿದೆ. ಆಹಾರ, ಹಾಲು, ಹಣ್ಣು, ಮಾಂಸ, ತರಕಾರಿ ಹಾಗೂ ಇತರೆ ಅಗತ್ಯ ಸಾಮಗ್ರಿಗಳ ಸರಬರಾಜು ಹಾಗೂ ಮಾರಾಟಕ್ಕೆ ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಂಗಡಿ ತೆರೆಯಲು ಅನುಮತಿ ಕೊಡಲಾಗಿದೆ ಎಂದವರು ಹೇಳಿದ್ದಾರೆ.
ಹಾಲಿನ ಬೂತ್ಗಳು ಹಾಗೂ ತರಕಾರಿ ತಳ್ಳುಗಾಡಿಗಳು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕಾರ್ಯ ನಿರ್ವಹಿಸಲು ಅವಕಾಶ ಕೊಡಲಾಗಿದೆ. ಆಸ್ಪತ್ರೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ ಜನ ವಾಹನದಲ್ಲಿ ಸಂಚರಿಸಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಆಸ್ಪತ್ರೆ ಮತ್ತು ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಜನ ಹಾಗೂ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು. ರೈಲು ಹಾಗೂ ವಿಮಾನಗಳ ಪ್ರಯಾಣಕ್ಕೆ ಅವಕಾಶವಿದೆ ಎಂದೂ ಅವರು ಹೇಳಿದ್ದಾರೆ.
ಅನುಮತಿ ಇರುವುದು
- ವಿಮಾನ ಮತ್ತು ರೈಲು. ತುರ್ತು ಸಂದರ್ಭಗಳಲ್ಲಿ ಟ್ಯಾಕ್ಸಿ ಹಾಗೂ ಆಟೋ
- ಹೋಟೆಲ್, ರೆಸ್ಟೋರೆಂಟ್ಗಳಲ್ಲಿ ಪಾರ್ಸೆಲ್ ಹಾಗೂ ಹೋಂ ಡೆಲಿವರಿ
- ಕೇಂದ್ರ ಹಾಗೂ ರಾಜ್ಯಗಳ ಅಗತ್ಯ ಸೇವೆ ಕಚೇರಿಗಳು
- ಆರೋಗ್ಯ ಸೇವಾ ಸೌಲಭ್ಯಗಳು
- ಕೃಷಿ ಮತ್ತು ಪೂರಕ ಚಟುವಟಿಕೆಗಳು
- ಎಲ್ಲ ಸರಕು ಸಾಗಾಣಿಕೆಗಳ ವಾಹನಗಳು
- ಆಹಾರ ದಿನಸಿ, ಹಣ್ಣು – ತರಕಾರಿ, ಮಾಂಸದ ಅಂಗಡಿಗಳು ಬೆಳಿಗ್ಗೆ 6ರಿಂದ 10
- ಮದ್ಯಮಾರಾಟ ಪಾರ್ಸಲ್ನಲ್ಲಿ ಬೆಳಿಗ್ಗೆ 6ರಿಂದ 10
- ಹಾಲಿನ ಬೂತ್, ತಳ್ಳುಗಾಡಿಗಳಲ್ಲಿ ತರಕಾರಿ ಬೆಳಿಗ್ಗೆ 6ರಿಂದ ಸಂಜೆ 6
- ನ್ಯಾಯ ಬೆಲೆ ಅಂಗಡಿಗಳು
- ದೂರಸಂಪರ್ಕ, ಇಂಟರ್ನೆಟ್, ಪ್ರಸಾರ, ಕೇಬಲ್
- ಐಟಿ ಮತ್ತು ಐಟಿಇಎಸ್ ಕಂಪನಿಗಳು
- ಸ್ಥಳದಲ್ಲೇ ಕಾರ್ಮಿಕರು ಲಭ್ಯವಿರುವ ಕೈಗಾರಿಕೆಗಳು
- ಸ್ಥಳದಲ್ಲೇ ಕಾರ್ಮಿಕರು ಲಭ್ಯವಿರುವ ಕಟ್ಟಡ ನಿರ್ಮಾಣ
- ಅಗತ್ಯ ವಸ್ತುಗಳ ತಯಾರಿಕಾ ಘಟಕ, ನಿರಂತರ ಕಾರ್ಯನಿರ್ವಹಣೆಯ ಘಟಕಗಳು
- ಅಂತ್ಯಸಂಸ್ಕಾರದಲ್ಲಿ ಗರಿಷ್ಠ ಐದು ಜನ
- ಮದುವೆ ಸಮಾರಂಭಗಳಲ್ಲಿ ಗರಿಷ್ಠ 50 ಜನ
ನಿಷೇಧಿಸಲಾಗಿರುವುದು
- ಬಸ್, ಮೆಟ್ರೋ ಸಂಚಾರ
- ಶಾಲಾ, ಕಾಲೇಜು, ಶಿಕ್ಷಣ/ಕೋಚಿಂಗ್ ಸಂಸ್ಥೆಗಳು
- ಸಿನೆಮಾ ಹಾಲ್, ಶಾಪಿಂಗ್ ಮಾಲ್, ಜಿಮ್, ಕ್ರೀಡಾ ಸಂಕೀರ್ಣ, ಕ್ರೀಡಾಂಗಣ, ಈಜುಕೊಳ, ಉದ್ಯಾನ, ಮನರಂಜನಾ ಪಾರ್ಕ್, ಕ್ಲಬ್, ಥಿಯೇಟರ್, ಬಾರ್, ಸಮುದಾಯ ಭವನ
- ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು
- ಎಲ್ಲ ಧಾರ್ಮಿಕ ಸ್ಥಳಗಳು ಹಾಗೂ ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶವಿಲ್ಲ
- ಸಾರ್ವಜನಿಕರ ಓಡಾಟ ಕಡ್ಡಾಯ ನಿಷೇಧ (ಕೆಲವು ವಿನಾಯಿತಿ)
- ಸರ್ಕಾರಿ ಹಾಗೂ ಖಾಸಗಿ ಬಸ್ ಮತ್ತು ಇತರೆ ಪ್ರಯಾಣಿಕರ ವಾಹನಗಳ ಸಂಚಾರವಿಲ್ಲ
ಇ-ಕಾಮರ್ಸ್ನಲ್ಲಿ ಎಲ್ಲವೂ ಮಾರಬಹುದು
ಆನ್ಲೈನ್ ಮೂಲಕ ದಿನಬಳಕೆಯ ಅಗತ್ಯ ವಸ್ತುಗಳೂ ಸೇರಿದಂತೆ ಎಲ್ಲವನ್ನೂ ಮಾರಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಬಗ್ಗೆ ವಿವರ ನೀಡಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್, ಇ-ಕಾಮರ್ಸ್ ಮೂಲಕ ಮಾರಾಟ ಮಾಡುವ ಸರಕುಗಳನ್ನು ತಡೆದು ಪರಿಶೀಲಿಸುವುದು ಕಾರ್ಯ ಸಾಧುವಲ್ಲ. ಹೀಗಾಗಿ ಎಲ್ಲವನ್ನೂ ಮಾರಲು ಅವಕಾಶವಿದೆ ಎಂದಿದ್ದಾರೆ.
ಲಸಿಕೆಗೂ ಕಾಲೇ ಗತಿ
ಜನತಾ ಕರ್ಫ್ಯೂ ಸಮಯದಲ್ಲಿ ಜನರು ವಾಹನಗಳಲ್ಲಿ ತೆರಳಲು ಅವಕಾಶವಿತ್ತು. ಆದರೆ, ಲಾಕ್ಡೌನ್ ವೇಳೆ ವಾಹನ ಬಳಕೆಗೆ ಅವಕಾಶ ಇರುವುದಿಲ್ಲ. ನೆರೆಹೊರೆಯಲ್ಲಿರುವ ದಿನಸಿ ಅಂಗಡಿ ಹಾಗೂ ಹೋಟೆಲ್ಗಳಿಗೆ ಕಾಲ್ನಡಿಗೆಯಲ್ಲಿ ತೆರಳಿ ಖರೀದಿ ಮಾಡಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.
ಕೈಗಾರಿಕೆ ಹಾಗೂ ಕಟ್ಟಡ ನಿರ್ಮಾಣಕ್ಕೆ ಜನರು ತೆರಳುವಂತಿಲ್ಲ. ಸ್ಥಳದಲ್ಲೇ ವಾಸ್ತವ್ಯ ಮಾಡಿಕೊಂಡು ಕೆಲಸ ಮಾಡಬೇಕು ಎಂದವರು ಹೇಳಿದ್ದಾರೆ.
ಲಸಿಕೆ ಪಡೆಯಲೂ ಸಹ ವಾಹನ ಬಳಸುವಂತಿಲ್ಲ. ಆನ್ಲೈನ್ನಲ್ಲಿ ನೋಂದಣಿ ಮಾಡಿಕೊಂಡು, ಕಾಲ್ನಡಿಗೆಯಲ್ಲೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬೇಕು ಎಂದವರು ಹೇಳಿದ್ದಾರೆ.
ಕಟ್ಟಡ ನಿರ್ಮಾಣ ಹಾಗೂ ಕೈಗಾರಿಕಾ ಸ್ಥಳದಲ್ಲೇ ಕಾರ್ಮಿಕರಿದ್ದರೆ ಮಾತ್ರ ಕಾರ್ಯನಿರ್ವಹಣೆಗೆ ಅವಕಾಶವಿದೆ. ಕಟ್ಟಡ ಹಾಗೂ ಕೈಗಾರಿಕೆಗಳಿಗೆ ಕಾರ್ಮಿಕರು ತೆರಳಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.
ಕಾರ್ಮಿಕರು ಬೆಂಗಳೂರು ತೊರೆದು ಹಳ್ಳಿಗಳಿಗೆ ಹೋಗದಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡಿರುವ ಯಡಿಯೂರಪ್ಪ, ಕಟ್ಟಡ ಕಾಮಗಾರಿ ಹಾಗೂ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ. ಕಾರ್ಮಿಕರು ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಲಾಕ್ಡೌನ್ಗಾಗಿ ಪರಿಹಾರ ನೀಡುವ ಬಗ್ಗೆ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ. ಈ ಬಗ್ಗೆ ಚರ್ಚೆ ಮಾಡು ತ್ತಿದ್ದೇವೆ ಎಂದವರು ತಿಳಿಸಿದ್ದಾರೆ.
ಪಾಸ್ ಇಲ್ಲ : ಲಾಕ್ಡೌನ್ ವೇಳೆ ಜನರ ಸಂಚಾರಕ್ಕೆ ಸರ್ಕಾರದಿಂದ ಪಾಸ್ ಕೊಡುವುದಿಲ್ಲ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹೇಳಿದ್ದು, ಜನರು ಲಾಕ್ಡೌನ್ ವೇಳೆ ಹೊರ ಬಂದರೆ ತುರ್ತು ಸಂದರ್ಭ ಇತ್ತು ಎಂದು ಅವರೇ ಸಾಬೀತು ಪಡಿಸಿಕೊಳ್ಳಬೇಕು ಎಂದಿದ್ದಾರೆ.
ಪ್ರಸಕ್ತ ಸ್ವಲ್ಪ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿವೆ. ಲಾಕ್ಡೌನ್ ಅವಧಿಯಲ್ಲಿ ಅವುಗಳನ್ನೂ ಮುಚ್ಚಲಾಗುವುದು ಎಂದವರು ಹೇಳಿದ್ದಾರೆ.