ಜಿಲ್ಲೆಗೆ ಪ್ರತಿನಿತ್ಯ 50 ಸಾವಿರ ಲಸಿಕೆ ಪೂರೈಸಲು ಸಂಸದ ಜಿ.ಎಂ. ಸಿದ್ದೇಶ್ವರ ಆಗ್ರಹ
ದಾವಣಗೆರೆ, ಮೇ 7 – ಜಿಲ್ಲೆಯಲ್ಲಿ 12ರಿಂದ 13 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಬೇಕಿದ್ದು, ಇದಕ್ಕಾಗಿ ಪ್ರತಿದಿನ ಕನಿಷ್ಠ 40-50 ಸಾವಿರದಷ್ಟು ಲಸಿಕೆ ಪೂರೈಕೆ ಆಗಬೇಕಿದೆ. ಇದಕ್ಕಾಗಿ ಬೇಕಾದರೆ ಮುಖ್ಯಮಂತ್ರಿ ಮನೆ ಮುಂದೆ ಕುಳಿತುಕೊಳ್ಳೋಣ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಅಧ್ಯಕ್ಷತೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿದಿನ 12-20 ಸಾವಿರ ಲಸಿಕೆ ಕೊಟ್ಟರೆ ಸಮಸ್ಯೆ ಬಗೆಹರಿಯುವುದಿಲ್ಲ ಎಂದಿದ್ದಾರೆ.
ನಮ್ಮಲ್ಲಿ 45 ವರ್ಷ ಮೀರಿದ ಲಸಿಕೆ ಪಡೆಯುವವರ ಸಂಖ್ಯೆ 2.55 ಲಕ್ಷದಷ್ಟಿದೆ. 18 ವರ್ಷ ಮೀರಿದವರಿಗೆ ಲಸಿಕೆ ನೀಡುವುದಾಗಿ ಪ್ರಧಾನ ಮಂತ್ರಿ ಘೋಷಣೆ ಮಾಡಿದ್ದಾರೆ. ಈ ವರ್ಗದಲ್ಲಿ 10 ಲಕ್ಷ ಜನ ಬರುತ್ತಾರೆ. ಒಟ್ಟಾರೆ 12-13 ಲಕ್ಷ ಜನರಿಗೆ ಲಸಿಕೆ ನೀಡಬೇಕಿದೆ ಎಂದವರು ತಿಳಿಸಿದ್ದಾರೆ.
ಹೀಗಾಗಿ ಪ್ರತಿದಿನ 12-20 ಸಾವಿರ ಲಸಿಕೆ ತರಿಸಿ ಕೊಡಲು ಹೋದರೂ ಜನರು ಸರದಿಯಲ್ಲಿ ನಿಂತು ಹೊಡೆದಾಡುವ ಪರಿಸ್ಥಿತಿ ಬರುತ್ತದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ.
ಕನಿಷ್ಠ ಪ್ರತಿದಿನ 40-50 ಸಾವಿರ ಲಸಿಕೆ ತರಿಸಲು ಏನಾದರೂ ಪ್ರಯತ್ನ ಮಾಡಬೇಕು. ನೀವು ಹೇಳಿದರೆ ನಾವೆಲ್ಲ ಜನಪ್ರತಿನಿಧಿಗಳು ಬರುತ್ತೇವೆ. ಸಿಎಂ
(ಬಿ.ಎಸ್. ಯಡಿಯೂರಪ್ಪ) ಮನೆ ಮುಂದೆ ಕುಳಿತುಕೊಳ್ಳೋಣ. ಯಾವುದೇ ಕಾರಣಕ್ಕೂ ಇಲ್ಲ ಎನ್ನುವಂತಿಲ್ಲ ಎಂದು ಸಂಸದರು ಸಭೆಯಲ್ಲಿ ಆಗ್ರಹಿಸಿದರು.
ಇದಕ್ಕೂ ಮುಂಚೆ ಮಾತನಾಡಿದ ಸಚಿವ ಬೈರತಿ ಬಸವರಾಜ, ಪ್ರತಿದಿನ 15-20 ಸಾವಿರ ಲಸಿಕೆ ತರಿಸುವ ಪ್ರಯತ್ನದಲ್ಲಿದ್ದೇವೆ. ಮುಂದಿನ ವಾರ ಲಸಿಕೆಗಳು ಬರಲಿವೆ ಎಂದು ಹೇಳಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲೆಗೆ ಕೊವ್ಯಾಕ್ಸಿನ್ ಲಸಿಕೆ ಪೂರೈಕೆಯಾಗದಿರುವುದೇ ಅತಿ ಹೆಚ್ಚಿನ ಸಮಸ್ಯೆಯಾಗಿದೆ. 4,500ರಷ್ಟು ಜನರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದ್ದು, ಎರಡನೇ ಕಂತಿನ ಲಸಿಕೆ ಕೊಡಬೇಕಿದೆ ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕೊರೊನಾ ಲಸಿಕೆ ನೋಡಲ್ ಅಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ, 30 ಸಾವಿರ ಜನರು ಕೋವಿಶೀಲ್ಡ್ ಪಡೆದು ಆರು ವಾರಗಳಾಗಿವೆ. ಕೊವ್ಯಾಕ್ಸಿನ್ ಪಡೆದ 850 ಜನ ಆರನೇ ವಾರದಲ್ಲಿದ್ದಾರೆ. ಇವರಿಗೆ ತಕ್ಷಣವೇ ಎರಡನೇ ಡೋಸ್ ಲಸಿಕೆ ಬೇಕಿದೆ ಎಂದು ಹೇಳಿದರು.
ಕೋರ್ಟ್ಗಳು ಬಂದ್, ಜೈಲಲ್ಲೂ ಜಾಗವಿಲ್ಲ
ಸರ್ಕಾರದ ನಿರ್ಬಂಧಗಳಲ್ಲಿ ದ್ವಂದ್ವ : ಎಸ್ಪಿ
ರಾಜ್ಯ ಸರ್ಕಾರ ಪ್ರಕಟಿಸಿರುವ ಜನತಾ ಕರ್ಫ್ಯೂ ಮಾರ್ಗಸೂಚಿಯಲ್ಲಿ ದ್ವಂದ್ವಗಳಿವೆ. ಜನಸಂಚಾರದ ಮೇಲೆ ನಿರ್ಬಂಧ ಹೇರಿದ್ದರೂ ವೈದ್ಯಕೀಯ, ಕೃಷಿ ಚಟುವಟಿಕೆ, ಕಟ್ಟಡ ನಿರ್ಮಾಣ, ಕೈಗಾರಿಕೆ, ಸಾಗಣೆ ಇತ್ಯಾದಿಗಳಿಗೆ ಅನುಮತಿ ನೀಡಲಾಗಿದೆ. ಇದರಿಂದಾಗಿ ಜನರ ಸಂಚಾರ ಹೆಚ್ಚಾಗಿದೆ ಎಂದು ಎಸ್ಪಿ ಹನುಮಂತರಾಯ ಹೇಳಿದ್ದಾರೆ.
ರೈಲಿನ ಒಂದು ವ್ಯಾಗನ್ ಬಂದರೂ ಅದಕ್ಕೆ 500ಕ್ಕೂ ಹೆಚ್ಚು ಕಾರ್ಮಿಕರು ಬೇಕಾಗುತ್ತಾರೆ. ಸರಕು ಸಾಗಣೆ ಮಾಡಬೇಕಾದರೆ ಗ್ಯಾರೇಜ್ಗಳು ಬೇಕು, ಕಟ್ಟಡ ನಿರ್ಮಾಣಕ್ಕೆ ಹತ್ತು ಹಲವು ಅಂಗಡಿಗಳನ್ನು ತೆರೆಯಬೇಕು ಎಂದವರು ತಿಳಿಸಿದರು.
ಜಿಲ್ಲೆಯಲ್ಲಿ 9 ಸಾವಿರಕ್ಕೂ ಹೆಚ್ಚು ಕೊರೊನಾ ನಿರ್ಬಂಧ ಉಲ್ಲಂಘನೆಯ ಪ್ರಕರಣಗಳನ್ನು ಹಾಗೂ 107 ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದೇವೆ. ಆದರೆ, ವಿಚಾರಣೆಗೆ ನ್ಯಾಯಾಲಯಗಳು ಬಂದ್ ಆಗಿವೆ. ಜೈಲಿನಲ್ಲಿ ಜಾಗವಿಲ್ಲ ಎಂದು ವಸ್ತುಸ್ಥಿತಿ ವಿವರಿಸಿದರು.
ಆಕ್ಸಿಜನ್ ಟ್ಯಾಂಕ್ ಖರೀದಿಗೆ ಸೂಚನೆ
ಜಿಲ್ಲಾ ಸಿ.ಜಿ. ಆಸ್ಪತ್ರೆಗೆ 13 ಕೆ.ಎಲ್. ಸಾಮರ್ಥ್ಯದ ಟ್ಯಾಂಕ್ ಖರೀದಿಸಲು ಒಂದು ಕೋಟಿ ರೂ. ವೆಚ್ಚವಾಗಲಿದೆ. ಈ ಬಗ್ಗೆ ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ಅವರಿಗೆ ಪೂರ್ಣ ಅಧಿಕಾರವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಕ್ಸಿಜನ್ ಸಮರ್ಪಕ ಪೂರೈಕೆಗೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಿದ್ದು, ಇದರಲ್ಲಿ ಹೆಚ್ಚೂ ಕಡಿಮೆಯಾದರೆ ಅವರೇ ಹೊಣೆಯಾಗುತ್ತಾರೆ ಎಂದೂ ಭೈರತಿ ಎಚ್ಚರಿಸಿದರು.
ಅರ್ಧ ಗ್ರಾಮ ಅಸ್ವಸ್ಥ
ತಮ್ಮ ಕ್ಷೇತ್ರದಲ್ಲಿ ಬರುವ ರಾಮೇಶ್ವರ ಗ್ರಾಮದ ಅರ್ಧದಷ್ಟು ಜನರು ಚಳಿ ಜ್ವರ ದಿಂದ ಬಳಲುತ್ತಿದ್ದಾರೆ. ಶುಕ್ರವಾರ ಬೆಳಿಗ್ಗೆ ಒಬ್ಬರು ಮೃತಪಟ್ಟಿದ್ದು, ಟೆಸ್ಟ್ ಮಾಡಿಸಿ ದಾಗ ಕೊರೊನಾ ಪಾಸಿಟಿವ್ ಬಂದಿದೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.
ತಕ್ಷಣವೇ ಗ್ರಾಮವನ್ನು ಸ್ಯಾನಿಟೈಜ್ ಮಾಡಬೇಕು ಹಾಗೂ ಗ್ರಾಮಸ್ಥರನ್ನು ಕೊರೊಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದರು.
ಸಹಾಯ ಮಾಡದ ವಾಣಿ : ಜಿಲ್ಲಾಡಳಿತ ಸ್ಥಾಪಿಸಿರುವ ಸಹಾಯವಾಣಿಗೆ ಕರೆ ಮಾಡಿದರೆ ಅಲ್ಲಿ ಯಾರೂ ಕರೆ ಸ್ವೀಕರಿಸುತ್ತಿಲ್ಲ ಎಂದು ವ್ಯಕ್ತಿಯೊಬ್ಬರು ತಮಗೆ ಕರೆ ಮಾಡಿದ್ದರು ಎಂದು ಭೈರತಿ ತಿಳಿಸಿ, ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದರು.
ಕೋವಿಡ್ ಕೇರ್‌ಗೆ ಜನ : ಕಳೆದ ಅಲೆಯಲ್ಲಿ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಜನರನ್ನು ಇರಿಸುವ ಮೂಲಕ ಕೊರೊನಾ ನಿಯಂತ್ರಿಸಲಾಗಿತ್ತು. ಮನೆಯಲ್ಲಿ ಒಂದೇ ಶೌಚಾಲಯ ಇದ್ದರೆ ಕೊರೊನಾ ಬೇಗ ಹರಡುತ್ತದೆ. ಇದು ಉಳಿದವರಿಗೂ ಅಪಾಯ ಎಂದಿರುವ ಸಚಿವ ಬೈರತಿ, ಇಂತಹ ಮನೆಗಳಲ್ಲಿರುವ ಜನರನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ತರಬೇಕೆಂದು ಸೂಚನೆ ನೀಡಿದರು.
ಸಿಬ್ಬಂದಿ ನೇಮಕ : ನಗರದ ಸಿ.ಜಿ. ಆಸ್ಪತ್ರೆ ಸೇರಿದಂತೆ, ಜಿಲ್ಲೆಯ ಹಲವಾರು ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಇದನ್ನು ನೀಗಿಸಲು ಮೇ 10ರಂದು ವೈದ್ಯರು, ನರ್ಸ್ ಮತ್ತಿತರೆ ಸಿಬ್ಬಂದಿಯನ್ನು ನೇರ ನೇಮಕಾತಿ ಮಾತನಾಡಿಕೊಳ್ಳಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ. ನಾಗರಾಜ್ ಸಭೆಗೆ ತಿಳಿಸಿದರು.
ಸಭೆಯಲ್ಲಿ ಶಾಸಕ ಹಾಗೂ ಲಿಡ್ಕರ್ ಅಧ್ಯಕ್ಷ ಪ್ರೊ. ಲಿಂಗಣ್ಣ, ಶಾಸಕ ಎಸ್.ಎ. ರವೀಂದ್ರನಾಥ್, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಜಿ.ಪಂ. ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಎಸ್ಪಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್, ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.