ದಾವಣಗೆರೆ, ಮೇ 5 – ಶುಕ್ರವಾರ ಸ್ಥಗಿತಗೊಂಡಿದ್ದ ಕೊರೊನಾ ಲಸಿಕೆ ವಿತರಣೆ ಬುಧವಾರ ಆರಂಭವಾಗಿತ್ತು. ಏರುತ್ತಿರುವ ಕೊರೊನಾ ಸೋಂಕುಗಳ ನಡುವೆ, ಲಸಿಕೆಗೆ ಇನ್ನಿಲ್ಲದ ಬೇಡಿಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಜನರು, ಅದರಲ್ಲೂ ವಯೋವೃದ್ಧರು ದೊಡ್ಡ ಸಂಖ್ಯೆಯಲ್ಲಿ ಲಸಿಕಾ ಕೇಂದ್ರಗಳ ಎದುರು ಜಮಾಯಿಸಿದ್ದರು.
ನಗರದ ಎಂಸಿಸಿ ಎ ಬ್ಲಾಕ್ನಲ್ಲಿರುವ ಸೂಪರ್ಮಾರ್ಕೆಟ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜನರು ಬೆಳಿಗ್ಗೆ 6-7 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದರು. ಎರಡನೇ ಕಂತಿನ ಡೋಸ್ ಪಡೆಯುವವರಿಗೆ ಮಾತ್ರ ಇಂದು ಲಸಿಕೆ ನೀಡಲಾಗುವುದು ಎಂದು ತಿಳಿಸಲಾಗಿತ್ತು. ಆದರೂ, ಮೊದಲ ಬಾರಿಗೆ ಲಸಿಕೆ ಪಡೆಯುವವರು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಆರೋಗ್ಯ ಕೇಂದ್ರದ ವೈದ್ಯರಾದ ಡಾ. ನಟರಾಜ್, ಸರ್ಕಾರದ ಸೂಚನೆಯಿಂದ 45 ವರ್ಷ ಮೀರಿದ ಹಾಗೂ ಎರಡನೇ ಕಂತಿನ ಲಸಿಕೆಯವರಿಗೆ ಮಾತ್ರ ಕೊಡಲಾಗುವುದು. ಉಳಿದರೆ ಮಾತ್ರ ಮೊದಲ ಕಂತಿನವರಿಗೆ ಕೊಡಲಾಗುವುದು ಎಂದು ಹೇಳಿದರು.
ಅಪ್ಪ – ಅಮ್ಮನಿಗೆ ಲಸಿಕೆ ಪಡೆಯಲು ಅಲೆದಾಟ
ತಮ್ಮ 56 ವರ್ಷದ ತಂದೆ ಹಾಗೂ 50 ವರ್ಷದ ತಾಯಿಗಾಗಿ ಲಸಿಕೆ ಪಡೆಯಲು ವಾರದಿಂದ ಅಲೆದಾಡುತ್ತಿದ್ದೇನೆ. ಆದರೆ, ಇದುವರೆಗೂ ಸಾಧ್ಯವಾಗಿಲ್ಲ ಎಂದು ಸಿ.ಜಿ. ಆಸ್ಪತ್ರೆಯ ಬಳಿಯ ಲಸಿಕಾ ಕೇಂದ್ರಕ್ಕೆ ಬಂದಿದ್ದ ನಗರದ ಪದ್ಮ ಎಂಬುವವರು ತಿಳಿಸಿದರು.
ನಿವೃತ್ತ ಶಿಕ್ಷಕರಾದ ಮರುಳಸಿದ್ದಪ್ಪ ಅವರು ತಮ್ಮ ಪತ್ನಿಗಾಗಿ ಲಸಿಕೆ ಸಿಗುವುದೇ ಎಂಬ ಹುಡುಕಾಟದಲ್ಲಿದ್ದರು. ನಾನು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದುಕೊಂಡಿದ್ದೇನೆ ಎಂದ ಅವರು, ಖಾಲಿ ಇದ್ದಾಗ ಪತ್ನಿ ಲಸಿಕೆಗೆ ಹಿಂಜರಿದರು. ಈಗ ಲಸಿಕೆ ಬೇಕೆಂದರೂ ಇಷ್ಟು ಉದ್ದನೆಯ ಸರದಿಯಲ್ಲಿ ನಿಲ್ಲಲು ಅವರಿಂದ ಸಾಧ್ಯವಾಗದು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ದಾವಣಗೆರೆ : ಅರೆ ಬರೆ ಧರಿಸಿದ ಮಾಸ್ಕ್, ಒಬ್ಬರ ಮೇಲೊಬ್ಬರು ಬೀಳುವಂತೆ ನಿಲ್ಲುವುದು, ಅಂತರವಿಲ್ಲದೇ ನಿರ್ಲಕ್ಷ್ಯ, ಉದ್ದನೆಯ ಸರದಿ… ಇವು ನಗರದ ಕೊರೊನಾ ಲಸಿಕಾ ಕೇಂದ್ರಗಳ ಬಳಿ ಕಂಡು ಬಂದ ದೃಶ್ಯಗಳು.
ಕೋವ್ಯಾಕ್ಸಿನ್ಗೆ ಪರದಾಟ
ಜಿಲ್ಲೆಯಲ್ಲಿ ಮಂಗಳವಾರ ಕೊವೀಶೀಲ್ಡ್ ಲಸಿಕೆ ಬಂದಿದೆ. ಈ ಹಿಂದೆ ಕೊವ್ಯಾಕ್ಸಿನ್ನ ಮೊದಲ ಡೋಸ್ ಪಡೆದವರು ಎರಡನೇ ಡೋಸ್ಗೆ ಹುಡುಕಾಟ ನಡೆಸಿದ್ದರು.
ಕೋವ್ಯಾಕ್ಸಿನ್ ಯಾವಾಗ ಬರುತ್ತದೋ ಗೊತ್ತಿಲ್ಲ. ಈ ಬಗ್ಗೆ ಸರ್ಕಾರವೇ ಪ್ರಕಟಣೆ ನೀಡಬೇಕು ಎಂದು ಲಸಿಕೆ ಪಡೆಯಲು ಬಂದವರಿಗೆ ಲಸಿಕಾ ಕೇಂದ್ರದವರು ಉತ್ತರಿಸುತ್ತಿದ್ದರು.
ಅಂತರಕ್ಕೆ ಆನ್ಲೈನ್ ಸೂಕ್ತ
ಆನ್ಲೈನ್ ಮೂಲಕ ಲಸಿಕೆಗೆ ನೋಂದಾಯಿಸಬೇ ಕು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿ ತ್ತು. ಅದರಂತೆ ಆನ್ಲೈನ್ ನೋಂದಣಿ ಮಾಡಿಸಿಕೊಂಡ ವರಿಗೆ ಲಸಿಕಾ ಕೇಂದ್ರದಲ್ಲಿ ಆದ್ಯತೆ ನೀಡಲು ವ್ಯವಸ್ಥೆ ಮಾಡಿ ದರೆ ಜನಜಂಗುಳಿ ತಪ್ಪಲಿದೆ.
ಇಲ್ಲವಾದರೆ, ಕೊರೊನಾ ಲಸಿಕಾ ಕೇಂದ್ರಗಳೇ ಸೋಂಕು ಹರಡುವ ಕೇಂದ್ರಗಳಾಗುವ ವಿಚಿತ್ರ ಪರಿಸ್ಥಿತಿ ಉಂಟಾಗಬಹುದು.
ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಪಾಲಿಕೆ ಪ್ರತಿಪಕ್ಷದ ನಾಯಕ ಎ. ನಾಗರಾಜ್, ಆರೋಗ್ಯ ಕೇಂದ್ರಕ್ಕೆ 100 ಲಸಿಕೆಗಳನ್ನು ನೀಡಲಾಗಿತ್ತು. ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿದ ನಂತರ 200 ಲಸಿಕೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕಾಣದ ಕೊರೊನಾ ಮುನ್ನೆಚ್ಚರಿಕೆ : ಲಸಿಕಾ ಕೇಂದ್ರದ ಮುಂದೆ ನೂರಾರು ಜನರು ಗುಂಪಾಗಿ ನಿಂತಿದ್ದರು. ಪೊಲೀಸರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದ್ದೂ ಪ್ರಯೋಜನಕ್ಕೆ ಬರಲಿಲ್ಲ.
ಆನ್ಲೈನ್ಗೆ ಆದ್ಯತೆ ಇಲ್ಲ : ಗುಂಪು ಸೇರುವಿಕೆ ತಪ್ಪಿಸಲು ಆನ್ಲೈನ್ ಮೂಲಕ ಲಸಿಕೆಗಾಗಿ ನೋಂದಣಿ ಮಾಡಬೇಕೆಂದು ತಿಳಿಸಲಾಗಿತ್ತು. ಆದರೆ, ಆನ್ಲೈನ್ನಲ್ಲಿ ನೋಂದಣಿ ಮಾಡಿದವರನ್ನು ಗುರುತಿಸಲು ಸಾಧ್ಯವಾಗದಷ್ಟು ಜನಜಂಗುಳಿ ಸೇರಿತ್ತು. ಇದರಿಂದಾಗಿ ವೈದ್ಯಕೀಯ ಸಿಬ್ಬಂದಿ ಅಸಹಾಯಕರಾಗಿದ್ದರು.
ಕೂಪನ್ ವಿತರಣೆ : ಸಿ.ಜಿ. ಆಸ್ಪತ್ರೆಯಲ್ಲಿನ ಲಸಿಕಾ ಕೇಂದ್ರದಲ್ಲಿ ಮಾತ್ರ ಗುಂಪುಗೂಡುವಿಕೆಯನ್ನು ತಪ್ಪಿಸಲಾಗಿತ್ತು. ಇಲ್ಲಿನ ವೈದ್ಯ ಡಾ. ಸಿದ್ದರಾಮೇಶ್ವರ ಅವರು ಮೊದಲನೆ ಡೋಸ್ ಲಸಿಕೆ ಪಡೆಯುವವರಿಗೆ ಅವಕಾಶವಿಲ್ಲ ಎಂದು ಅಂಥವರನ್ನು ವಾಪಸ್ ಕಳಿಸಿದ್ದರು.
ಕೂಪನ್ ವಿತರಿಸುವ ಮೂಲಕ ಲಸಿಕೆ ಇರುವಷ್ಟು ಜನರು ಮಾತ್ರ ಸರದಿಯಲ್ಲಿರುವಂತೆ ತಿಳಿಸಿದ್ದರು. ಈ ಕೇಂದ್ರದಲ್ಲಿ 20 ಮುಂಚೂಣಿ ಕಾರ್ಯಕರ್ತರು ಹಾಗೂ 280 ಸಾರ್ವಜನಿಕರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿತ್ತು.
ಬೆಳಿಗ್ಗೆ 8 ಗಂಟೆಯಿಂದಲೇ ಜನರು ಇಲ್ಲಿ ಸೇರಿದ್ದರು. ನಾವು 9 ಗಂಟೆಗೆ ಬಂದು ಜನರಿಗೆ ಕೂಪನ್ಗಳನ್ನು ವಿತರಿಸಿದ್ದೆವು. ಇದರಿಂದಾಗಿ ಜನಸಂದಣಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಎರಡನೇ ಡೋಸ್ ಲಸಿಕೆ ಬೇಕಾಗಿದೆ. ಹೀಗಾಗಿ ಎರಡನೇ ಡೋಸ್ನವರಿಗೆ ಮಾತ್ರ ಲಸಿಕೆ ಕೊಡಲಾಗುತ್ತಿದೆ ಎಂದು ಡಾ. ಸಿದ್ದರಾಮೇಶ್ವರ್ ತಿಳಿಸಿದ್ದಾರೆ.