ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದೊಂದಿಗೆ ಸಂಘ-ಸಂಸ್ಥೆಗಳು ಕೈಜೋಡಿಸಲಿ : ಸಂಸದ ಸಿದ್ದೇಶ್ವರ

ದಾವಣಗೆರೆ, ಮೇ 5- ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು, ಕೊರೊನಾ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಕೊರೊನಾ ಸೋಂಕಿತರ ಶೂಶ್ರೂಷೆ ಮಾಡುವ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ ಜಿಲ್ಲೆಯ ಸರ್ಕಾರೇತರ ಸಂಘ-ಸಂಸ್ಥೆಗಳು ಕೈಜೋಡಿಸಿ ನೆರವಾಗುವಂತೆ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಏರ್ಪಾಡಾಗಿದ್ದ ಸಭೆಯಲ್ಲಿ ಸಂಸದ ಡಾ. ಜಿ.ಎಂ.ಸಿದ್ದೇಶ್ವರ ಮನವಿ ಮಾಡಿದರು. 

ಸಾರ್ವಜನಿಕರು ಹಾಗೂ ಸರ್ಕಾ ರೇತರ ಸಂಘ-ಸಂಸ್ಥೆಗಳು ಕೊರೊನಾ ನಿಯಂತ್ರಣದ ಕಾರ್ಯದಲ್ಲಿ ಸಹಭಾಗಿತ್ವ ತೋರಿದಾಗ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ. 

ಈಗಾಗಲೇ ನಗರದ ಸಿ.ಜಿ. ಆಸ್ಪತ್ರೆಯಲ್ಲಿ ದಾಖಲಾಗಿರುವ ಕೊರೊನಾ ಸೋಂಕಿತರಿಗೆ ಊಟ, ಉಪಚಾರದ ಹೊಣೆಯನ್ನು ಒಂದು ಸಂಸ್ಥೆಯವರು ವಹಿಸಿಕೊಂಡಿದ್ದಾರೆ. ಅದೇ ರೀತಿ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೂ ದಾಖಲಾಗಿರುವ ಸೋಂಕಿತರಿಗೆ ಊಟ, ಉಪಚಾರ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಒದಗಿಸಲು ಸಂಘ-ಸಂಸ್ಥೆಗಳು ಮುಂದೆ ಬಂದರೆ ಅನುಕೂಲವಾಗಲಿದೆ ಎಂದರು. 

ಜಿಲ್ಲೆಯ ಎಲ್ಲಾ ಸೋಂಕಿತರು ಜಿಲ್ಲಾಸ್ಪತ್ರೆಯನ್ನು ಅವಲಂಬಿಸಿ ದಾವಣಗೆರೆಗೆ ಬಂದರೆ ಇಲ್ಲಿ ಸಾಕಷ್ಟು ಒತ್ತಡ ಉಂಟಾಗಲಿದೆ. ಈ ಒತ್ತಡವನ್ನು ಕಡಿಮೆ ಮಾಡುವ ದೃಷ್ಟಿಯಿಂದ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೇ ಸೋಂಕಿತರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಅವಶ್ಯವಿರುವ ರೋಗಿಗಳನ್ನು ಮಾತ್ರ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಿ ಎಂದು ಸಲಹೆ ನೀಡಿದರು. 

ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ತಜ್ಞ ವೈದ್ಯರು ನೇಮಕಗೊಂಡರೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿಯೇ ಉತ್ತಮ ಚಿಕಿತ್ಸೆ ಲಭ್ಯವಾಗಲಿದೆ ಎಂದರು.

ಬೇರೆ ಜಿಲ್ಲೆಗಳಲ್ಲಿ ಆಗಿರುವ ತಪ್ಪುಗಳಿಂದ ನಾವು ಪಾಠ ಕಲಿಯಬೇಕಾಗಿದೆ, ಅಂತಹ ತಪ್ಪುಗಳು ನಮ್ಮ ಜಿಲ್ಲೆಯಲ್ಲಿ ಆಗದಂತೆ ಎಚ್ಚರ ವಹಿಸಬೇಕಾಗಿದೆ. ಆದ್ದರಿಂದ, ಎಲ್ಲರೂ ಜಾಗ್ರತೆಯಿಂದ ಕೆಲಸ ಮಾಡಿ ಎಂದರು.

ಕೋವಿಡ್ ಚಿಕಿತ್ಸೆಗೆ ಮೀಸಲಾ ಗಿರುವ ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರರಾಗಿರುವ ಸಿಬ್ಬಂದಿಗಳು  ಸೋಂಕಿತರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಲು ಸೂಚನೆ ನೀಡಿ ಎಂದರು ಹಾಗೂ ಎಲ್ಲಾ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆಗೆ ಲಭ್ಯವಿರುವ ಕೋವಿಡ್ ಬೆಡ್‍ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುವಂತೆ ಸಲಹೆ ನೀಡಿದರು.

ಶಿಫಾರಸ್ಸಿಗೆ ಮಣಿಯಬೇಡಿ : ಆಕ್ಸಿಜನ್‌, ಬೆಡ್‌ ಹಂಚಿಕೆ ವಿಚಾರದಲ್ಲಿ ಯಾವುದೇ ಶಿಫಾರಸ್ಸಿಗೆ ಮಣಿಯಬೇಡಿ ಎಂದು ಸಿದ್ದೇಶ್ವರ ಕಿವಿಮಾತು ಹೇಳಿದರು.

ಆಕ್ಸಿಜನ್ ಬೆಡ್‍ಗಳ ಹಂಚಿಕೆ ವಿಷಯದಲ್ಲಿ ಯಾವುದೇ ಶಿಫಾರಸ್ಸಿಗೆ ಮಣಿಯಬೇಡಿ, ಜೀವ ಎಲ್ಲರದೂ ಒಂದೇ. ಈ ನಿಟ್ಟಿನಲ್ಲಿ ಮೊದಲು ಬಂದವರಿಗೆ ಆದ್ಯತೆ ನೀಡಿ ಬೆಡ್ ಹಂಚಿಕೆ ಮಾಡಿ. ಈ ವಿಷಯದಲ್ಲಿ ಯಾವುದೇ ರಾಜೀ ಬೇಡ ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್,  ಮಹಾನಗರ ಪಾಲಿಕೆ ಮಹಾಪೌರ ಎಸ್.ಟಿ.ವೀರೇಶ್, ದೂಡಾ ಅಧ್ಯಕ್ಷ ರಾಜನ ಹಳ್ಳಿ ಶಿವಕುಮಾರ್, ಪರಿವಾರದ ಪ್ರಮುಖರಾದ ಗೂ.ರುದ್ರಯ್ಯ, ಅಜಿತ್ ಓಸ್ವಾಲ್, ಅರುಣ್ ಗುಡ್ಡದಕೇರಿ, ಮಂಜಾನಾಯ್ಕ್, ಸೊಕ್ಕೆ ನಾಗರಾಜ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!