ಮಲೆನಾಡಾದ ನಡುನಾಡು

ಜಿಲ್ಲೆಯಲ್ಲಿ ವರುಣನ ಆರ್ಭಟ, ಪ್ರವಾಹ ಭೀತಿ

ಹೆಚ್ಚಿದ ತುಂಗ, ಭದ್ರಾ ಒಳ ಹರಿವು

ಹರಿಹರ ತಾಲ್ಲೂಕಿನಲ್ಲಿ 231 ಮಿ.ಮಿ. ಮಳೆ,  ಬೆಳೆಗಳು ಜಲಾವೃತ

ಮಲೇಬೆನ್ನೂರು, ಜು.23- ಕಳೆದ ಒಂದು ವಾರದಿಂದ ಬಿಟ್ಟು ಬಿಟ್ಟು ಬರುತ್ತಿದ್ದ ಮಳೆ ಗುರುವಾರ ದಿನವಿಡೀ ಧಾರಾಕಾರವಾಗಿ ಸುರಿದ ಪರಿಣಾಮ ಎಲ್ಲೆಡೆ ಹಳ್ಳ-ಕೊಳ್ಳಗಳು, ನದಿಗಳು ಉಕ್ಕಿ ಹರಿಯುತ್ತಿವೆ. ಸತತ ಮಳೆಯಿಂದಾಗಿ ಜನ ಜೀವನ ಅಷ್ಟೇ ಅಲ್ಲದೆ, ಜಾನು ವಾರುಗಳ ಜೀವನವೂ ಅಸ್ತವ್ಯಸ್ತಗೊಂಡಿದೆ.

ಶುಕ್ರವಾರ ಮಧ್ಯ ಕರ್ನಾಟಕದಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿ ದ್ದರೂ ಮಲೆನಾಡಿನಲ್ಲಿ ಮಾತ್ರ ವರುಣನ ಆರ್ಭಟ ಮುಂದುವರೆದಿದೆ. ಮಲೆನಾಡಿ ನಲ್ಲಿರುವ ಜಲಪಾತಗಳು ದುಮ್ಮುಕ್ಕಿ ಅರಿಯುತ್ತಿದ್ದು, ಕೆಲವಡೆ ರಸ್ತೆಗಳ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

ಮಳೆ ಹೀಗೆ ಮುಂದುವರಿದರೆ ಪ್ರವಾಹ ಭೀತಿ ಎದುರಾಗುವ ಸಾಧ್ಯತೆ ಇದೆ. ಗಾಜನೂರಿನ ತುಂಗಾ ಜಲಾಶ ಯಕ್ಕೆ ಸುಮಾರು 80 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ಎಲ್ಲಾ ಕ್ರಸ್ಟ್‌ಗೇಟ್‌ ಗಳ ಮೂಲಕ ನದಿಗೆ ಬಿಡಲಾಗುತ್ತಿದೆ.

ಇದರಿಂದಾಗಿ ತುಂಗಭದ್ರಾ ನದಿ  ಉಕ್ಕಿ ಹರಿಯುತ್ತಿದ್ದು, ನದಿ ಹಿನ್ನೀರಿನಲ್ಲಿ ಹೊನ್ನಾಳಿ-ಹರಿಹರ, ಹರಪನಹಳ್ಳಿ ತಾಲ್ಲೂಕುಗಳ ಗ್ರಾಮಗಳ ಸಂಪರ್ಕ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉಕ್ಕಡಗಾತ್ರಿ ಬಳಿ ನದಿ ಹಿನ್ನೀರಿನಲ್ಲಿ ಫತ್ತೇಪುರ, ಉಕ್ಕಡಗಾತ್ರಿ ನಡುವಿನ ಸಂಪರ್ಕ ಸೇತುವೆ ಮುಳುಗಿದ್ದು, ಹರಿಹರ ತಾಲ್ಲೂಕಿನಿಂದ ಉಕ್ಕಡಗಾತ್ರಿ ಸೇರಿದಂತೆ ಆ ಭಾಗದ ಹಳ್ಳಿಗಳಿಗೆ ತೆರಳುವ ವಾಹನಗಳ ಸಂಚಾರ ಬಂದ್‌ ಆಗಿದೆ. 

ಉಕ್ಕಡಗಾತ್ರಿಗೆ ಬರುವವರು ತುಮ್ಮಿನಕಟ್ಟೆ, ಮಾಳನಾಯಕನಹಳ್ಳಿ, ಮಾರ್ಗವಾಗಿ ಬರಬಹುದು. ಮತ್ತು ಉಕ್ಕಡಗಾತ್ರಿಗೆ ಬಂದ ಸಂದರ್ಭದಲ್ಲಿ ನದಿ ಸಮೀಪ ಯಾರೂ ತೆರಳದಂತೆ ಎಚ್ಚರಿಕೆ ವಹಿಸಬೇಕೆಂದು ದೇವಸ್ಥಾನ ಟ್ರಸ್ಟ್‌ ಸಮಿತಿ ಕಾರ್ಯದರ್ಶಿ ಸುರೇಶ್ ಮನವಿ ಮಾಡಿದ್ದಾರೆ.

ನದಿ ದಡದಲ್ಲಿದ್ದ ನೂರಾರು ಪಂಪ್‌ಸೆಟ್‌ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ ಎಂದು ಆತಂಕ ವ್ಯಕ್ತಪಡಿಸಿರುವ ರೈತರ ಭತ್ತದ ನಾಟಿ ಸೇರಿದಂತೆ ತೋಟದ ಬೆಳೆಗಳು ಜಲಾವೃತಗೊಂಡಿದೆ. ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನದ ಕೆಳಗಡೆ ನದಿ ನೀರು ನುಗ್ಗಿದ್ದು, ಅಲ್ಲಿದ್ದ  ಹಣ್ಣು-ಕಾಯಿ ಅಂಗಡಿಗಳು ನೀರಿನಲ್ಲಿ ಮುಳುಗಿವೆ.

ಅತ್ತ ಭದ್ರಾ ಜಲಾಶಯಕ್ಕೆ ಒಳ ಹರಿವು ಮತ್ತಷ್ಟು ಹೆಚ್ಚಾಗಿದೆ. ಶುಕ್ರವಾರ ಬೆಳಿಗ್ಗೆ 39.286 ಕ್ಯೂಸೆಕ್ಸ್‌ ನೀರಿನ ಒಳ ಹರಿವು, ಸಂಜೆ 6 ಗಂಟೆ ವೇಳೆಗೆ 50 ಸಾವಿರ ಕ್ಯೂಸೆಕ್ಸ್‌ಗೆ ಏರಿಕೆಯಾಗಿದೆ. ಜಲಾಶಯ ನೀರಿನ ಮಟ್ಟ 173 ಅಡಿ ಆಗಿದೆ. 71.535 ಟಿಎಂಸಿ ಸಾಮರ್ಥ್ಯ ಜಲಾಶಯದಲ್ಲೀಗ 54.052 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ದಿನ ಜಲಾಶಯದಲ್ಲಿ 153 ಅಡಿ 7 ಇಂಚು ನೀರಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 19 ಅಡಿ ನೀರು ಹೆಚ್ಚು ದಾಖಲಾಗಿದೆ.

ಜಲಾಶಯಕ್ಕೆ ಈಗ ಹರಿಯುತ್ತಿರುವ ರೀತಿಯಲ್ಲೇ ಇನ್ನೂ 4-5 ದಿನ ನೀರು ಹರಿದರೆ ಡ್ಯಾಂ ಭರ್ತಿಯಾಗಲಿದೆ ಎಂದು ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿರುತ್ತದೆ.

ಹರಿಹರ ತಾಲ್ಲೂಕಿನಲ್ಲಿ 231 ಮಿ.ಮೀ. ಮಳೆ: ಹರಿಹರ ತಾಲ್ಲೂಕಿನಲ್ಲಿ ಗುರುವಾರ ಒಂದೇ ದಿನ 231 ಮಿಲಿ ಮೀಟರ್ ಮಳೆಯಾಗಿದ್ದು, ಮಲೇಬೆನ್ನೂರು ಹೋಬಳಿಯ ಕೊಪ್ಪ-1, ಉಕ್ಕಡಗಾತ್ರಿ-1 ಮತ್ತು ಹೊಳೆಸಿರಿಗೆರೆಯಲ್ಲಿ 2 ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ಉಪ ತಹಶೀಲ್ದಾರ್ ಆರ್. ರವಿ ತಿಳಿಸಿದ್ದಾರೆ.

ಹೊಸಹಳ್ಳಿ ಗ್ರಾಮದ ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿ, ಬೆಳ್ಳುಳ್ಳಿ ಬೆಳೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖಾ, ಗ್ರಾಮ ಲೆಕ್ಕಾಧಿಕಾರಿ ಸೌಮ್ಯ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ದೇವರಬೆಳಕೆರೆ ಪಿಕಪ್ ಡ್ಯಾಂ ಗೆ ಒಳ ಹರಿವು ಹೆಚ್ಚಾಗಿದ್ದು, ಡ್ಯಾಂ ನಿಂದ ಭಾರೀ ಪ್ರಮಾಣದ ನೀರು ಹೊರಬರುತ್ತಿರುವುದರಿಂದ ಬ್ಯಾಲದಹಳ್ಳಿ ಹಳ್ಳ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಗುಳದಹಳ್ಳಿ-ಸಂಕ್ಲೀಪುರ ಗ್ರಾಮಗಳ ನಡುವೆ ಇರುವ ಸಂಪರ್ಕ ಸೇತುವೆ ಮೇಲೆ ಕಾಗೆ ಹಳ್ಳ ತುಂಬಿ ಹರಿಯುತ್ತಿದ್ದು, ಎರಡು ಗ್ರಾಮಗಳ ಸಂಪರ್ಕ ಬಂದ್ ಆಗಿದೆ.

ಜಿಗಳಿಯ ಹಳ್ಳದಲ್ಲೂ ಭಾರೀ ನೀರು ಹರಿಯುತ್ತಿದ್ದು, ತಗ್ಗು ಪ್ರದೇಶದ ಗದ್ದೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶದ ತೋಟಗಳಲ್ಲಿ ಸುಮಾರು 2 ಅಡಿಯಷ್ಟು ನೀರು ನಿಂತಿದೆ. ಮಲೇಬೆನ್ನೂರು-ಕುಂಬಳೂರು ನಡುವೆ ಜಮೀನುಗಳಲ್ಲಿ ಹರಿದು ಬರುವ ಹಳ್ಳದ ನೀರು ಹೊಳೆಯಂತಾಗಿದೆ. ಗದ್ದೆಗಳಲ್ಲಿ ರೊಳ್ಳೆ ಹೊಡೆಯುವಷ್ಟು ಮಳೆ ನೀರು ನಿಂತಿದ್ದು, ಕಾಲುವೆಗಳಲ್ಲಿ ನೀರು ರಭಸವಾಗಿ ಹರಿಯುತ್ತಿದೆ. ಕೊಮಾರನಹಳ್ಳಿ ಬಳಿ ಇರುವ ಭದ್ರಾ ಮುಖ್ಯ ಕಾಲುವೆಯಲ್ಲಿ 3 ಅಡಿಗೂ ಹೆಚ್ಚು ನೀರು ಹರಿದು ಬರುತ್ತಿದೆ. ಈ ನೀರು ಸಸಿಮಡಿ ಬೆಳೆಸುವ ರೈತರಿಗೆ ಅನುಕೂಲವಾಗಲಿದೆ.

ಕೊಮಾರನಹಳ್ಳಿ ಸಮೀಪದ ಗುಡ್ಡಗಳಿಂದ ಮಳೆ ನೀರು ಬಸಿಯುತ್ತಿದ್ದು, ಹಾಲವರ್ತಿಸರ, ಕರಡಿಕಲ್ ಸರ ಮತ್ತು ಕರ್ನಳ್ಳದ ನೀರು , ಕೊಮಾರನಹಳ್ಳಿ ಕೆರೆಗೆ ಹರಿದು ಬರಲು ಆರಂಭಿಸಿದೆ. ಇದರಿಂದಾಗಿ ಕೆರೆಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಲಿದೆ ಎಂದು ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್ ಹರ್ಷ ವ್ಯಕ್ತ ಪಡಿಸಿದ್ದಾರೆ.

error: Content is protected !!