ಗ್ರಾಮ ಪಂಚಾಯ್ತಿಗಳಿಗೆ ಸಚಿವ ಈಶ್ವರಪ್ಪ ಸೂಚನೆ
ದಾವಣಗೆರೆ, ಜು. 23 – ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಕೆರೆಗಳನ್ನು ಗ್ರಾಮ ಪಂಚಾಯ್ತಿಗಳ ವಶಕ್ಕೆ ನೀಡಿ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ ಜನವರಿ ಒಳಗೆ ಗ್ರಾಮ ಪಂಚಾಯ್ತಿಗಳು ಎಲ್ಲಾ ಕೆರೆಗಳನ್ನು ಅಭಿವೃದ್ಧಿ ಪಡಿಸಬೇಕೆಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ, ಗ್ರಾಮೀಣಾಭಿವೃದ್ಧಿ ಇಲಾಖೆ, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಮೈಸೂರು ಹಾಗೂ ಜಿಲ್ಲಾ ಪಂಚಾಯ್ತಿಗಳ ಸಹಯೋಗದಲ್ಲಿ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ 195 ಗ್ರಾಮ ಪಂಚಾಯ್ತಿಗಳು ಹಾಗೂ ಕನಿಷ್ಠ 600 ಹಳ್ಳಿಗಳಿವೆ. ಒಟ್ಟು 243 ಕೆರೆಗಳಿವೆ. ಹೀಗಾಗಿ ಎರಡು – ಮೂರು ಹಳ್ಳಿಗಳಿಗೆ ಒಂದು ಕೆರೆ ಬರುತ್ತದೆ. ಇನ್ನು ಆರು ತಿಂಗಳ ಒಳಗೆ ಕೆರೆಗಳ ಅಭಿವೃದ್ಧಿಗೆ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಪಣ ತೊಡಬೇಕು ಎಂದು ಕರೆ ನೀಡಿದರು.
ಕೆರೆಗಳ ಒತ್ತುವರಿಯಾಗಿದ್ದರೆ ಗ್ರಾಮ ಪಂಚಾಯ್ತಿಗಳಿಂದ ಸಂಘರ್ಷಕ್ಕೆ ಮುಂದಾಗಬಾರದು. ಶಾಸಕರು, ಪಿಡಿಒ ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೂಲಕ ತಮ್ಮ ಗಮನಕ್ಕೆ ತರಬೇಕು. ಮುಲಾಜಿಲ್ಲದೇ ಒತ್ತುವರಿ ತೆರವುಗೊಳಿಸಲಾಗುವುದು ಎಂದವರು ಹೇಳಿದರು.
ಜಿಲ್ಲೆಯ 195 ಗ್ರಾಮ ಪಂಚಾಯ್ತಿಗಳಲ್ಲಿ ಕೇವಲ 13ರಲ್ಲಿ ಘನತ್ಯಾಜ್ಯ ಘಟಕಗಳು ಚಾಲನೆಯಾಗಿವೆ ಎಂಬ ಬಗ್ಗೆ ಬೇಸರ ವ್ಯಕ್ತಪಡಿಸಿದ ಈಶ್ವರಪ್ಪ, ತ್ವರಿತವಾಗಿ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳಾಗಬೇಕು ಎಂದು ಸೂಚನೆ ನೀಡಿದರು.
ದುಡ್ಡು ಕೊಡದವರ ಮನೆ ಮುಂದೆ ಕಸ ಹಾಕಿ
ಗ್ರಾಮ ಪಂಚಾಯ್ತಿಗಳಲ್ಲಿ ಕಸ ವಿಲೇವಾರಿಗೆ ಶುಲ್ಕ ಪಾವತಿ ಮಾಡಬೇಕಿದೆ. ಆರಂಭದಲ್ಲಿ ಹಿಂಜರಿಕೆ ವ್ಯಕ್ತವಾದರೂ, ನಂತರ ಜನರು ದುಡ್ಡು ಕೊಡುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಒಂದು ವೇಳೆ ದುಡ್ಡು ಕೊಡದೇ ಇದ್ದರೆ ಅವರ ಮನೆಯ ಕಸ ಪಡೆಯಬೇಡಿ. ಅವರ ಮನೆ ಮುಂದೆ ಊರ ಕಸ ಹಾಕಿ ಎಂದು ಈಶ್ವರಪ್ಪ ಹೇಳಿದರು.
‘ಥೋಡಾ ಧೀರೇ ಚಲೋ ಭಯ್ಯಾ’ ಅಂದ ಕೇಂದ್ರ
ಕಳೆದ ವರ್ಷ ಉದ್ಯೋಗ ಖಾತ್ರಿಯಲ್ಲಿ ಕೇಂದ್ರ ಸರ್ಕಾರ 13 ಕೋಟಿ ಮಾನವ ದಿನಗಳನ್ನು ರಾಜ್ಯಕ್ಕೆ ಕಲ್ಪಿಸಿತ್ತು. ಅದೆಲ್ಲವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಿದ್ದೆವು. ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಕೇಂದ್ರದ ಅಧಿಕಾರಿಗಳು, §ಥೋಡ ಧೀರೆ ಚಲೋ ಭಯ್ಯಾ’ (ಸ್ವಲ್ಪ ನಿಧಾನವಾಗಿ ನಡೆಯಿರಿ ಅಣ್ಣ) ಎಂದು ಹೇಳಿದ್ದರು ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ನಂತರ ಕೇಂದ್ರ ಸರ್ಕಾರ 2 ಕೋಟಿ ಹೆಚ್ಚುವರಿ ಮಾನವ ದಿನ ಕಲ್ಪಿಸಿತ್ತು. ಇದರಿಂದ ರಾಜ್ಯಕ್ಕೆ 800 ಕೋಟಿ ರೂ.ಗಳ ಹೆಚ್ಚುವರಿ ಅನುದಾನ ಸಿಕ್ಕಿತು ಎಂದವರು ತಿಳಿಸಿದರು.
ಪ್ರಗತಿ ಪರಿಶೀಲನಾ ಸಭೆಯಾದ ಕಾರ್ಯಾಗಾರ
ಸಚಿವ ಕೆ.ಎಸ್. ಈಶ್ವರಪ್ಪ ಅವರು ಕಾರ್ಯಾಗಾರವನ್ನು ಪ್ರಗತಿ ಪರಿಶೀಲನಾ ಸಭೆಯಂತೆ ಪರಿವರ್ತಿಸಿದರು. ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಿರ್ಮಾಣವಾಗಬೇಕಿರುವ ಘನತ್ಯಾಜ್ಯ ವಿಲೇವಾರಿ ಘಟಕ, ಸೌರ ಫಲಕಗಳ ಅಳವಡಿಕೆ, ಕೆರೆಗಳ ಅಭಿವೃದ್ಧಿ, ವೇತನ ಪಾವತಿ ಸೇರಿದಂತೆ ಹಲವಾರು ವಿಷಯಗಳ ಕುರಿತು ಮಾಹಿತಿ ಪಡೆದರು.
ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಸೌರಫಲಕಗಳನ್ನು ಅಳವಡಿಸುವಂತೆ ಸೂಚನೆ ನೀಡಿದ ಅವರು, ಉದ್ಯೋಗ ಖಾತ್ರಿ ಕೆಲಸದ ಕುರಿತು ತಿಳಿಸಿದರು.
161 ಪಿ.ಡಿ.ಒ.ಗಳ ಪೈಕಿ ಕೆಲವರು ಗೈರಾಗಿರುವುದನ್ನು ಗಮನಿಸಿದ ಸಚಿವರು, ಹೊರ ಹೋಗುವಾಗ ಹಾಜರಿ ಪಡೆದು, ಗೈರಾದವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯ್ತಿ ಯೋಜನೆಗಳ ಬಗ್ಗೆ ಹಲವಾರು ಪಿ.ಡಿ.ಒ.ಗಳಿಗೇ ಮಾಹಿತಿ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಯೋಜನೆಗಳ ಬಗ್ಗೆ ತಿಳಿಯುವಂತೆ ತಾಕೀತು ಮಾಡಿದರು.
ಬಯಲು ಶೌಚ ನಿವಾರಣೆಗಾಗಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಮೊದಲ ಆದ್ಯತೆ ನೀಡಬೇಕು. ವೈಯಕ್ತಿಕ ಹಾಗೂ ಸಾಮೂಹಿಕ ಶೌಚಾಲಯಗಳ ಮೂಲಕ ಈ ಸಮಸ್ಯೆ ನಿವಾರಿಸಬೇಕು ಎಂದು ಕರೆ ನೀಡಿದರು.
ಪಂಚಾಯ್ತಿಗಳ ನೀರುಗಂಟೆ ಹಾಗೂ ಸ್ವಚ್ಛತಾ ಕಾರ್ಮಿಕರ ವೇತನ ಯಾವುದೇ ಕಾರಣಕ್ಕೂ ಬಾಕಿ ಉಳಿಸಿಕೊಳ್ಳಬಾರದು. ಮೊದಲು ವೇತನ ಬಾಕಿ ತೀರಿಸಿ ನಂತರ ಬೇರೆ ಕಾಮಗಾರಿ ಕೈಗೊಳ್ಳಿ ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹಾಗೂ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಮೂಲಭೂತ ಸೌಲಭ್ಯಗಳಿಗಾಗಿ ಉದ್ಯೋಗ ಖಾತ್ರಿಯ ಶೇ.25ರ ಅನುದಾನ ಬಳಕೆಗೆ ಅನುಮತಿ ನೀಡಬೇಕು. ಇದರಿಂದ ಪಂಚಾಯ್ತಿಗಳಲ್ಲಿ ಶಾಶ್ವತ ಆಸ್ತಿಗಳು ರೂಪುಗೊಳ್ಳುತ್ತವೆ ಎಂದು ಹೇಳಿದರು.
ಶಾಸಕ ಎಸ್.ಎ. ರವೀಂದ್ರನಾಥ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ನಿರ್ದೇಶಕಿ ಗಾಯತ್ರಿ, ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಪ್ರಮೋದ್ ಹೆಗಡೆ, ಜಿಲ್ಲಾ ಪಂಚಾಯ್ತಿ ಸಿಇಒ ವಿಜಯ ಮಹಾಂತೇಶ್ ದಾನಮ್ಮನವರ್, ಉಪ ಕಾರ್ಯದರ್ಶಿ ಆನಂದ್ ಉಪಸ್ಥಿತರಿದ್ದರು.