ಹರಿಹರ, ಜು.23- ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿ ತಾಲ್ಲೂಕಿನ ಧೂಳೆಹೊಳೆ, ಉಕ್ಕಡಗಾತ್ರಿ, ಹಲಸಬಾಳು, ಗುತ್ತೂರು, ದೀಟೂರು, ಪಾಮೇನಹಳ್ಳಿ ಮುಂತಾದ ಗ್ರಾಮದ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಹಾಗೂ ದನಕರುಗಳನ್ನು ನೀರಿನಲ್ಲಿ ಇಳಿಸದಂತೆ ಸೂಚನೆ ನೀಡಲಾಗಿದೆ.
ಸಾರಥಿ ಮತ್ತು ಚಿಕ್ಕಬಿದರಿ ಗ್ರಾಮಗಳ ರಸ್ತೆ ಕಡಿತವಾಗಿದ್ದು, ಮಳೆಯ ನೀರಿನ ಪ್ರಮಾಣ ಕಡಿಮೆ ಆದಂತೆ ಈ ಭಾಗದಲ್ಲಿ ಸಾರ್ವಜನಿಕರು ಓಡಾಡಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು.
ನದಿ ಪಾತ್ರದಲ್ಲಿರುವ ಗ್ರಾಮಗಳಿಗೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಕಮಲಾಪುರ ದಲ್ಲಿ ಒಂದು ಮನೆ ಹಾನಿಯಾಗಿದೆ.
ಚಿಕ್ಕಬಿದರಿ ಗ್ರಾಮದ ಕಚ್ಚಾ ಮನೆ ಹಾನಿಯಾಗಿದೆ, ಬೆಳ್ಳೂಡಿ, ಬನ್ನಿಕೋಡು, ಉಕ್ಕಡಗಾತ್ರಿ, ಹಾಲಿವಾಣ, ಸಿರಿಗೆರೆಯಲ್ಲಿ ಮನೆಗಳು ಹಾನಿಗೊಳಗಾಗಿವೆ. ಹೊಸಳ್ಳಿಯಲ್ಲಿ 150 ಎಕರೆ ಪ್ರದೇಶದಲ್ಲಿ ಈರುಳ್ಳಿ ಮತ್ತು ಬೆಳುಳ್ಳಿ ಬೆಳೆಗೆ ಹಾನಿಯಾಗಿದೆ.
ಪೌರಾಯುಕ್ತೆ ಎಸ್. ಲಕ್ಷ್ಮಿ ಮಾತನಾಡಿ, ಗಂಗಾನಗರ ಹಾಗೂ ಬೆಂಕಿ ನಗರ ಪ್ರದೇಶಗಳಿಗೆ ಮಳೆಯಿಂದ ಹಾನಿ ಯಾಗುವ ಸಂಭವ ಇರುವ ಪ್ರದೇಶಗಳನ್ನು ಸ್ಥಳ ಪರಿಶೀಲಿಸಿ, ಗಂಗಾನಗರ ನಿವಾಸಿಗಳಿಗೆ ಸ್ಥಳಾಂತರಿಸಲು ಸೂಚಿಸಲಾಗಿದೆ. ಡಿ.ಬಿ. ಕೆರೆ ಚಾನೆಲ್ನಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಸತತವಾಗಿ ಬೀಳುತ್ತಿರುವ ಮಳೆಗೆ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಗಂಗಾನಗರ ಮತ್ತು ಬೆಂಕಿನಗರ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿದ್ದು, ಅವರು ಸುರಕ್ಷಿತ ಸ್ಥಳಕ್ಕೆ ತೆರಳುವುದಕ್ಕೆ ನಗರಸಭೆ ವತಿಯಿಂದ ಏನೆಲ್ಲಾ ಸೌಲಭ್ಯಗಳು ಬೇಕೋ ಅದನ್ನು ಒದಗಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.
ನಗರದ ಹಳ್ಳದಕೇರಿ, ಗಂಗಾನಗರ, ಬೆಂಕಿ ನಗರ, ಹಳೆ ಭರಂಪುರ, ಮತ್ತು ತಗ್ಗಿನಕೇರಿ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಇಂತಹ ಸಮಯದಲ್ಲಿ ನಿರ್ಲಕ್ಷ್ಯ ಭಾವ ತೋರದೆ ನದಿಯ ದಂಡೆಯ ಮೇಲೆ ಬಂದು ಸರ್ಕಾರ ನಿಗದಿಪಡಿಸಿರುವ ಸ್ಥಳದಲ್ಲಿ ಬಂದು ವಾಸಿಸುವುದಕ್ಕೆ ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಎಇಇ ಬಿರಾದಾರ, ನಗರಸಭೆ ಮಾಜಿ ಸದಸ್ಯ ಡಿ. ಉಜ್ಜೇಶ್, ನಗರಸಭೆ ವಾಟರ್ ಇಂಜಿನಿಯರ್ ಮಂಜುನಾಥ್ ಹಾಗು ಇತರರು ಹಾಜರಿದ್ದರು.