ದಾವಣಗೆರೆ,ಜು.22- ಕೋವಿಡ್ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯನ್ನು ತತ್ ಕ್ಷಣವೇ ನಡೆಸುವಂತೆ ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಚುನಾವಣೆಯ ಅಭ್ಯರ್ಥಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರನ್ನು ಭೇಟಿ ಮಾಡಿದ ವಾಮದೇವಪ್ಪ ನೇತೃತ್ವದ ನಿಯೋಗವು ಮನವಿ ಸಲ್ಲಿಸಿತು.
ಕೊರೊನಾ ಸೋಂಕು ಕಡಿಮೆಯಾಗಿರುವ ಕಾರಣ ಈಗಾಗಲೇ ಲಾಕ್ ಡೌನ್ ತೆರವು ಗೊಂಡಿರುವುದಲ್ಲದೇ, ಶಾಲಾ-ಕಾಲೇಜುಗಳ ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಿನಲ್ಲಿ ಸಹಜ ಜೀವನದೆಡೆಗೆ ರಾಜ್ಯ ಮರಳುತ್ತಿದೆ. ಈ ಹಿನ್ನೆಲೆಯಲ್ಲಿ ಕಸಾಪಕ್ಕೆ ಚುನಾವಣೆ ನಡೆಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಕಸಾಪದ ಬಹುತೇಕ ಆಜೀವ ಸದಸ್ಯರು ಲಸಿಕೆ ಹಾಕಿಸಿಕೊಂಡಿದ್ದಾರೆ. ನಾಡು-ನುಡಿ, ನೆಲ-ಜಲ, ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ಸಂಬಂಧಿಸಿದ ಚಟುವಟಿಕೆಗಳು ನಡೆಯಲು ಅನುಕೂಲವಾಗು ವಂತೆ ಪ್ರಜಾಪ್ರಭುತ್ವದ ಅಡಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣಾ ಪ್ರಕ್ರಿಯೆಯನ್ನು ಕೊರೊನಾ ನಿಯಮಗಳ ಅಡಿಯಲ್ಲಿಯೇ ತಕ್ಷಣ ಪ್ರಾರಂಭಿಸುವಂತೆ ಮನವಿಯಲ್ಲಿ ಅವರು ಕೇಳಿಕೊಂಡಿದ್ದಾರೆ.
ಜಿಲ್ಲಾ ಕಸಾಪ ನಿಕಟ ಪೂರ್ವ ಅಧ್ಯಕ್ಷ ಎ.ಆರ್. ಉಜ್ಜಿನಪ್ಪ, ಕಾರ್ಯ ದರ್ಶಿ ದಿಳ್ಯಪ್ಪ, ಜಿ.ಆರ್.ಷಣ್ಮುಖಪ್ಪ, ಬಿ.ಎಂ.ಮುರಿಗೆಯ್ಯ ಕುರ್ಕಿ ಮುಂತಾದವರು ನಿಯೋಗದಲ್ಲಿದ್ದರು.