ನರಗುಂದ ರೈತ ಬಂಡಾಯಕ್ಕೆ 41ನೇ ವರ್ಷ ಪೂರೈಸಿದ ಸ್ಮರಣಾರ್ಥ ನಡೆದ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಲ್.ಹೆಚ್.ಅರುಣ್ ಕುಮಾರ್
ದಾವಣಗೆರೆ, ಜು.22- ರೈತರು ನಾಶವಾದರೆ ಈ ದೇಶವೇ ನಾಶವಾದಂತೆ. ರೈತ ಕುಲ ಉಳಿದರೆ ಮಾತ್ರ ದೇಶದ ಉಳಿವು. ಸರ್ಕಾರದ ಎಲ್ಲಾ ಅಂಗಗಳು ರೈತರ ಮೇಲೆ ನಿಂತಿವೆ ಎಂದು ಹಿರಿಯ ವಕೀಲ ಎಲ್.ಹೆಚ್. ಅರುಣ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ನಗರ ಪಾಲಿಕೆ ಆವರಣದಲ್ಲಿ ಸಂಯುಕ್ತ ಹೋರಾಟ-ಕರ್ನಾಟಕ ದಾವಣಗೆರೆ ಸಮಿತಿಯಿಂದ ನರಗುಂದ ರೈತ ಬಂಡಾಯಕ್ಕೆ 41ನೇ ವರ್ಷ ಪೂರೈಸಿದ್ದ ಪ್ರಯುಕ್ತ ಇಂದು ಆಯೋಜಿಸಲಾಗಿದ್ದ ಸ್ಮರಣಾರ್ಥ ಸಭೆಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ರೈತ ಚಳುವಳಿಯಲ್ಲಿ ರಾಜ್ಯದ ನರಗುಂದ
ರೈತ ಚಳುವಳಿ ಒಂದು ಮೈಲಿಗಲ್ಲು. ಆ ಚಳುವಳಿಯ ನಂತರವೇ ದೇಶದಲ್ಲಿ ಹಲವಾರು ರೈತ ಸಂಘಟನೆಗಳು ಹುಟ್ಟಿಕೊಂಡವು. ನಂತರ ರೈತರ ಧ್ವನಿಗೆ ಶಕ್ತಿಯಾಯಿತು. ಅಂತೆಯೇ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ, ದೇಶ ಆರ್ಥಿಕವಾಗಿ ದಿವಾಳಿಯಾದರೆ ಪುನರುಜ್ಜೀವನ ಮಾಡಬಹುದು. ಆದರೆ ಮಾನಸಿಕವಾಗಿ ದಿವಾಳಿಯಾದರೆ ಪುನರುಜ್ಜೀವನ ಆಗುವುದು ಕಷ್ಟ. ಈಗ ನಮ್ಮ ದೇಶವು ಮಾನಸಿಕವಾಗಿ ದಿವಾಳಿಯಾಗಿದೆ. ಸರ್ಕಾರಗಳು ಧರ್ಮದ ಲೇಪನಕೊಟ್ಟು ತಾನೇ ಮಾಡಿದ್ದು ಸರಿ ಎಂದು ದರ್ಪ ತೋರಿಸುತ್ತಿವೆ.
`ಯಾವುದೇ ದೇಶವಾಗಲೀ ಧರ್ಮಾಧರಿತ ಆಡಳಿತ ನಡೆಸಿದರೆ ಬಹಳ ದಿನ ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಪೂರ್ವದ ಹೋರಾಟಗಳು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವು. ನಂತರದ ತುರ್ತು ಪರಿಸ್ಥಿತಿಯಲ್ಲಿ ಹೋರಾಟಗಳು ಆಗಿನ ಸರ್ಕಾರವನ್ನೇ ಎಚ್ಚರಿಸಿದವು. ಇತ್ತ ನವಲಗುಂದ, ನರಗುಂದ ಚಳುವಳಿಯಲ್ಲಿ ರೈತರನ್ನು ಕಡೆಗಣಿಸಿದ್ದಕ್ಕೆ ಸರ್ಕಾರವನ್ನೇ ಕಿತ್ತು ಹಾಕಲಾಯಿತು. ರೈತರು, ದಲಿತರು, ಕಾರ್ಮಿಕರನ್ನು ಕಡೆಗಣಿಸಿದರೆ ಯಾವುದೇ ಸರ್ಕಾರಗಳು ಉಳಿಯುವುದಿಲ್ಲ ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ ಎಂದು ಹೇಳಿದರು.
ಹಿರಿಯ ವಕೀಲ ಅನಿಷ್ ಪಾಷಾ ಮಾತನಾಡಿ, ದೇಶದಲ್ಲಿ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ರೈತ ಪ್ರತಿ ಹಂತದಲ್ಲೂ ತುಳಿತಕ್ಕೆ ಒಳಗಾಗುತ್ತಿದ್ದಾನೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಮಿಕ ಮುಖಂಡರಾದ ಆವರಗೆರೆ ಹೆಚ್.ಜಿ. ಉಮೇಶ್, ಪಿ.ಕೆ. ಲಿಂಗರಾಜು, ಭೀಮಾರೆಡ್ಡಿ, ಸತೀಶ್ ಅರವಿಂದ್, ರೇಣುಕಾ ಯಲ್ಲಮ್ಮ, ಸಾವಿತ್ರಮ್ಮ, ಶ್ರೀನಿವಾಸ್, ಅಂಜಿನಪ್ಪ ಪೂಜಾರ್, ನರೇಗಾ ರಂಗನಾಥ್, ಐರಣಿ ಚಂದ್ರು, ಮಂಜುನಾಥ್ ಕೈದಾಳೆ, ತಿಪ್ಪೇಸ್ವಾಮಿ ಸೇರಿದಂತೆ ಎಐಕೆಎಸ್, ಕೆಪಿಆರ್ರೆಸ್, ಆರ್ಕೆಎಸ್, ಕಬ್ಬು ಬೆಳೆಗಾರರ ಸಂಘದ ಮುಖಂಡರು ಇದ್ದರು.