ಕೇಂದ್ರದ ಸರ್ವಾಧಿಕಾರಿ ಆಡಳಿತ ಮುಗಿಯುವವರೆಗೂ ಚಳುವಳಿಗಳ ಅಲೆ ಬಲವಾಗಲಿದೆ : ನೂರ್‌ ಶ್ರೀಧರ್‌

‘ಚಂದ್ರ ಶಿಕಾರಿ’ ಪುಸ್ತಕ ಬಿಡುಗಡೆ ಸಮಾರಂಭ

ದಾವಣಗೆರೆ, ಮಾ. 7 – ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ವಾಧಿಕಾರಿ ಆಡಳಿತ ಮುಗಿದು ಪ್ರಜಾಪ್ರಭುತ್ವ ಬರುವವರೆಗೊ ದೇಶದಲ್ಲಿ ನಡೆಯುತ್ತಿರುವ ಚಳುವಳಿಗಳ ಅಲೆ ಬಲವಾಗುತ್ತಲೇ ಹೋಗಲಿದೆ ಎಂದು ಕರ್ನಾಟಕ ಜನಶಕ್ತಿ ರಾಜ್ಯಾಧ್ಯಕ್ಷರೂ ಆಗಿರುವ ಸಾಮಾಜಿಕ ಕಾರ್ಯಕರ್ತ ನೂರ್ ಶ್ರೀಧರ್ ಹೇಳಿದ್ದಾರೆ.

ನಗರದ ರೋಟರಿ ಬಾಲಭವನದಲ್ಲಿ ಆಯೋಜಿಸಲಾಗಿದ್ದ ಹೋರಾಟಗಾರ ಚಂದ್ರಶೇಖರ್ ತೋರಣಘಟ್ಟ ಅವರು ಅಗಲಿ ಒಂದು ವರ್ಷವಾಗುತ್ತಿರುವ ನೆನಪಿಗೆ ಆಯೋಜಿಸಲಾಗಿದ್ದ ಚಂದ್ರ ನಮನ ಕಾರ್ಯಕ್ರಮ ಹಾಗೂ ಅವರ ಕುರಿತ §ಚಂದ್ರ ಶಿಕಾರಿ¬ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

90ರ ದಶಕದಲ್ಲಿ ಆಳುವ ವರ್ಗದ ಷಡ್ಯಂತ್ರಕ್ಕೆ ರೈತ, ದಲಿತ, ವಿದ್ಯಾರ್ಥಿ ಸೇರಿದಂತೆ ಹಲವು ಚಳುವಳಿಗಳು ಕುಸಿದವು. ಈಗ ಮತ್ತೆ ಹೊಸ ರೀತಿಯ ಚಳುವಳಿಗಳು ಬರುತ್ತಿವೆ. ವಿದ್ಯಾರ್ಥಿ ರೋಹಿತ್ ವೆ ಮುಲಾ ಮೂಲಕ ಯುವ ಚಳುವಳಿ, ವಿದ್ಯಾರ್ಥಿಗಳ ಚಳುವಳಿ, ಎನ್.ಆರ್.ಸಿ. ವಿರುದ್ಧದ ಚಳುವಳಿ ನಡೆದವು. ಈಗ ರೈತರ ಆಂದೋಲನ ನಡೆಯುತ್ತಿದೆ. ಒಂದರ ನಂತರ ಒಂದರ ಆಂದೋಲನದ ಅಲೆ ತೀವ್ರವಾಗುತ್ತಿದೆ ಎಂದವರು ಹೇಳಿದರು.

ರೈತ ಆಂದೋಲನದ ಅಲೆ ತಗ್ಗಬಹುದು. ಆದರೆ, ಚಳುವಳಿ ಮುಗಿಯುವುದಿಲ್ಲ. ಮುಂದಿನ ಅಲೆ ಇನ್ನೂ ದೊಡ್ಡದಾಗಲಿದೆ. ಸರ್ವಾಧಿಕಾರಿ ಆಡಳಿತ ಮುಗಿದು ಪ್ರಜಾಪ್ರಭುತ್ವ ಬರುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಶ್ರೀಧರ್ ತಿಳಿಸಿದ್ದಾರೆ.

80ರ ದಶಕದಲ್ಲಿ ಕರ್ನಾಟಕದಲ್ಲಿ ಚಳುವಳಿಯ ಅಲೆ ಉತ್ತುಂಗದಲ್ಲಿದ್ದಾಗ ರಾಜಕಾರಣ ಸೇರಬೇಕೇ ಅಥವಾ ಸೇರಬಾರದೇ ಎಂಬ ಜಿಜ್ಞಾಸೆ ಇತ್ತು. ರಾಜಕಾರಣ ಮರೀಚಿಕೆಯಂತೆ ಸೆಳೆಯುತ್ತದೆ. ಆದರೆ, ಅದು ದೀಪದಂತೆ ತನ್ನ ಬಳಿ ಬರುವ ಮಿಣುಕು ಹುಳುಗಳ ರೆಕ್ಕೆಗಳನ್ನು ಸುಟ್ಟು ಹಾಕುತ್ತದೆ. ಹಿಂದಿನ ತಲೆಮಾರಿನ ಚಳುವಳಿ ನಾಯಕರು ಎತ್ತ ಸಾಗಬೇಕು ಎಂಬ ಗೊಂದಲದಲ್ಲಿ ಸಿಲುಕಿದ್ದರು. ಈಗಿನ ಪೀಳಿಗೆಯಲ್ಲಾದರೂ ಈ ದ್ವಂದ್ವಕ್ಕೆ ಉತ್ತರ ಕಂಡುಕೊಳ್ಳಬೇಕಿದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬೆಂಗಳೂರಿನ ಪ್ರಗತಿಪರ ಚಿಂತಕ ಬಿ. ಶ್ರೀಪಾದ್ ಭಟ್, ಅನಂತಮೂರ್ತಿ ಅವರು ಮಾತು ಮರೆತ ಭಾರತ ಎಂದು ಹೇಳಿದ್ದರು. ಆದರೆ, ಈಗ ಮಾತು ನಿಂತ ಭಾರತ ಆಗಿದೆ. ಇಂತಹ ಸಂದರ್ಭದಲ್ಲಿ ರೈತರು ಪಂಜಾಬ್‌ನಲ್ಲಿರುವ ತಮ್ಮ ನೆಲೆಯನ್ನು ಬಿಟ್ಟು ಬಂದು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಚಂದ್ರಶೇಖರ ತೋರಣಘಟ್ಟ ಅವರೂ ಸಹ ಇಂಥದೇ ನಿಲುವಿನವರಾಗಿದ್ದರು. ಅವರಲ್ಲಿ ಪ್ರಸಕ್ತ ರೈತರು ನಡೆಸುತ್ತಿರುವ ಹೋರಾಟದ ಗುಣ ಇತ್ತು ಎಂದರು.

ಚಂದ್ರಶೇಖರ ತೋರಣಘಟ್ಟ ಅವರ ಪತ್ನಿ ಸಿ.ವೈ. ಯಶೋಧ ಮಾತನಾಡಿ, ಹೋರಾಟಗಾರರ ಕುಟುಂಬದವರ ಮನದಾಳದ ಮಾತುಗಳು ಕೆಂಡದ ಉಂಡೆಯಂತಿರುತ್ತವೆ. ಹೇಳುವುದು – ಮೌನವಾಗಿರುವುದು ಎರಡೂ ಕಷ್ಟ. ಹೋರಾಟಗಾರರ ಕುಟುಂಬಗಳಿಗೆ ಪ್ರೀತಿಯೇ ಆಧಾರವಾಗಿರಬೇಕು. ಇಲ್ಲದಿದ್ದರೆ ಶುಷ್ಕ ವಾತಾವರಣದಲ್ಲಿ ಕುಟುಂಬ ಉಳಿಯುವುದು ಕಷ್ಟವಾಗುತ್ತದೆ ಎಂದು ಹೇಳಿದರು.

ಹೋರಾಟಗಾರರ ಕೊನೆ ದಿನಗಳಲ್ಲಿ ಸಂಘಟನೆಗಳು ಗಮನ ಹರಿಸಬೇಕು. ಕೇವಲ ಸಂಪರ್ಕ ಹೊಂದಿದ್ದರೆ ಸಾಲದು, ಸಂಪರ್ಕದಲ್ಲಿ ಮಾನವೀಯತೆ ಇರಬೇಕು. ಆಗ ಪ್ರಾಮಾಣಿಕ ಹೋರಾಟಗಾರರು ಇನ್ನಷ್ಟು ದಿನ ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೈದಾಳ್ ಕೃಷ್ಣಮೂರ್ತಿ, ಚಳುವಳಿಯ ಚರಿತ್ರೆಯನ್ನು ದಾಖಲಿಸುವ ಅಗತ್ಯವಿದೆ. ಚಳುವಳಿ ಎಂದರೆ ಒಬ್ಬ ವ್ಯಕ್ತಿ ಕೇಂದ್ರೀಕೃತವಲ್ಲ. ಅದನ್ನು ಕಾರ್ಯಕರ್ತರ ದೃಷ್ಟಿಯಿಂದ ನೋಡಬೇಕಿದೆ ಎಂದು ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಸಿದ್ದಿಪುರದ ಹಕ್ಕಿಪಿಕ್ಕಿ ಸಮುದಾಯದ ಸುಜಾತ ಹಾಗೂ ಹೊಂದವರ್ಬಿ ಅವರು §ಚಂದ್ರಶಿಕಾರಿ¬ ಪುಸ್ತಕ ಬಿಡುಗಡೆ ಮಾಡಿದರು.

ವೇದಿಕೆಯ ಮೇಲೆ ಜಿ.ಪಂ. ಸದಸ್ಯ ತೇಜಸ್ವಿ ಪಟೇಲ್, ಮೈಸೂರಿನ ಶಿವಣ್ಣ ಕಂದೇಗಾಲ್, ವಕೀಲ ಅನೀಸ್ ಪಾಷಾ ಮತ್ತಿತರರು ಉಪಸ್ಥಿತರಿದ್ದರು.

ನಾದ ಮಣಿನಾಲ್ಕೂರು ಪ್ರಾರ್ಥಿಸಿದರೆ, ಸತೀಶ್ ಅರವಿಂದ್ ಸ್ವಾಗತಿಸಿದರು. ರೇವಣ್ಣ ನಿರೂಪಿಸಿದರು.

error: Content is protected !!