ದಾವಣಗೆರೆ, ಮಾ.7- ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಜನರಿಗೆ ತಲುಪಿಸುವ ಮಹತ್ವಾಕಾಂಕ್ಷೆಯೊಂದಿಗೆ ರಾಸಾ ಯನಿಕ ಮತ್ತು ರಸಗೊಬ್ಬರ ಸಚಿವಾಲಯದಿಂದ ಆರಂಭವಾಗಿರುವ ಜನೌಷಧಿ ಕೇಂದ್ರಗಳು ದೇಶದ ಆರೋಗ್ಯ ವಲಯದಲ್ಲಿ ಮಹತ್ತರ ಕ್ರಾಂತಿ ಮಾಡಿವೆ. ಬಡವರ ಪಾಲಿಗೆ ಅಕ್ಷಯ ಪಾತ್ರೆಯಂತಿರುವ ಈ ಜನೌಷಧಿ ಕೇಂದ್ರಗಳು `ಮೋದಿ ಕಾ ದುಕಾನ್’ ಎಂದೇ ದೇಶಾದ್ಯಂತ ಖ್ಯಾತಿ ಪಡೆದಿವೆ. ಜನರು ಬಯಸಿದ್ದನ್ನು ನೀಡುವುದಕ್ಕಿಂತ ಜನರಿಗೆ ಅಗತ್ಯವಾಗಿದ್ದನ್ನು ನೀಡಿದಾಗ ಮಾತ್ರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಲು ಸಾಧ್ಯ ಎಂಬುದಕ್ಕೆ ಜನೌಷಧಿ ಕೇಂದ್ರಗಳ ಸ್ಥಾಪನೆ ಸಾರ್ವಕಾಲಿಕ ಉದಾಹರಣೆಯಾಗಿ ನಿಲ್ಲಬಲ್ಲದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೆಳಿದರು.
ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳ ಒಕ್ಕೂಟದಿಂದ ಆಯೋಜಿ ಸಲಾಗಿದ್ದ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ದಿವಸ್ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ದೇಶಾದ್ಯಂತ ಇಲ್ಲಿಯವರೆಗೆ ಸುಮಾರು 7499 ಜನೌಷಧಿ ಕೇಂದ್ರಗಳನ್ನು ತೆರೆಯಲಾಗಿದೆ, ಕರ್ನಾಟಕದಲ್ಲಿ 846 ಹಾಗೂ ಜಿಲ್ಲೆಯಲ್ಲಿ ಸುಮಾರು 19 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
ತೈಲ ಬೆಲೆ ಹಾಗೂ ಸಿಲಿಂಡರ್ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗಿರುವುದನ್ನು ವಿರೋಧ ಪಕ್ಷದವರು ದೊಡ್ಡ ಸುದ್ದಿ ಮಾಡುತ್ತಿದ್ದಾರೆ. ಆದರೆ, ಕೊರೊನಾ ಸಂಕಷ್ಟದ ಸಮಯದಲ್ಲಿ ದೇಶದ 80 ಕೋಟಿ ಜನರಿಗೆ ನಾಲ್ಕೈದು ತಿಂಗಳುಗಳ ಕಾಲ ಉಚಿತ ಪಡಿತರ ಹಾಗೂ ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್ಗಳನ್ನು ನೀಡಲು ಸಾಕಷ್ಟು ಹಣವನ್ನು ಕೇಂದ್ರ ಸರ್ಕಾರ ಖರ್ಚು ಮಾಡಿದೆ. ಬೀದಿ ಬದಿ ವ್ಯಾಪಾರಿಗಳಿಗೆ, ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರ ಖಾತೆಗಳಿಗೆ ಜೀವನ ನಡೆಸಲಿಕ್ಕೆ ಅವರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಿದೆ. ಸಣ್ಣ ಸಣ್ಣ ಕೈಗಾರಿಕೆಗಳಿಗೆ ಸಬ್ಸಿಡಿ ನೀಡಿ ಕಾಯಕಲ್ಪ ನೀಡಿದೆ. ಇದಕ್ಕೆಲ್ಲಾ ಸಾಕಷ್ಟು ಹಣ ಖರ್ಚು ಮಾಡಿರುವ ಕೇಂದ್ರ ಸರ್ಕಾರದ ಬಗ್ಗೆ ಸಾರ್ವ ಜನಿಕರು ಗಮನ ಹರಿಸಬೇಕು ಎಂದು ಹೇಳಿದರು.
ಯು.ಪಿ.ಎ. ಆಡಳಿತದ ಅವಧಿಯಲ್ಲಿ ತೈಲ ಬೆಲೆ ಏರಿಕೆಯಾದಾಗ ಅದನ್ನು ಸರಿದೂಗಿಸುವ ಸಲುವಾಗಿ ಸುಮಾರು 1.44 ಲಕ್ಷ ಕೋಟಿಯಷ್ಟು ತೈಲ ಬಾಂಡ್ಗಳನ್ನು ಕಂಪನಿಗಳಿಗೆ ವಿತರಿಸಲಾಗಿತ್ತು. ಅದರ ಬಡ್ಡಿ ಹಣ 70 ಸಾವಿರ ಕೋಟಿಯಷ್ಟು ಸೇರಿ ಸುಮಾರು 2.00 ಲಕ್ಷ ಕೋಟಿಯಷ್ಟು ಹಣವನ್ನು ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಕಂಪನಿಗಳಿಗೆ ಮರುಪಾವತಿ ಮಾಡಿದೆ ಎಂದರು. ಕೇವಲ ವಿರೋಧ ಪಕ್ಷದಲ್ಲಿದ್ದೇವೆ ಎನ್ನುವ ಕಾರಣಕ್ಕೆ ಸರ್ಕಾರದ ಪ್ರತಿಯೊಂದು ನಡೆಯನ್ನೂ ಟೀಕಿಸುವುದರಲ್ಲಿ ಯಾವುದೇ ಹುರುಳಿರುವುದಿಲ್ಲ, ಸತ್ಯಾಂಶವನ್ನು ಜನರಿಗೆ ತಿಳಿಸುವ ಕೆಲಸವನ್ನು ನಾವು ಮಾಡುತ್ತೇವೆ, ನಿರ್ಧಾರ ಜನರಿಗೆ ಬಿಡುತ್ತೇವೆ ಎಂದರು.
ದಾವಣಗೆರೆಯ ರಾಮಕೃಷ್ಣ ಮಿಷನ್ನ ಶ್ರೀ ತೀರ್ಥಂಕರಾನಂದ ಸ್ವಾಮಿ, ಶಾಸಕ ಎಸ್.ಎ. ರವೀಂದ್ರನಾಥ್, ದೊಡ್ಡಬಾತಿ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಸಿ.ಬಿ. ಹನುಮಂತಪ್ಪ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಂಗನಗೌಡ್ರು, ಜಿಲ್ಲಾ ಪಂಚಾಯತಿ ಸದಸ್ಯೆ ರೇಣುಕಮ್ಮ ಕರಿಬಸಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.