ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಆಕ್ಸಿಜನ್ ಪ್ರಮಾಣ ಪರಿಗಣಿಸಿ, 348 ಬೆಡ್ ವ್ಯವಸ್ಥೆ ಮಾಡಲಾಗಿದೆ. ಈ ಆಕ್ಸಿಜನ್ ಬೆಡ್‌ಗಳು ಪೂರ್ಣ ಆಗಿವೆ. ಈಗ ಪ್ರತಿದಿನ 200-250 ಜನರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದರಿಂದ ಬೆಡ್‌ಗಳ ಕೊರತೆ ಬರುವುದಿಲ್ಲ.
– ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಮೇ 3 – ಪ್ರಸ್ತುತ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ 348 ಆಕ್ಸಿಜನ್ ಬೆಡ್‌ಗಳನ್ನು ಹೆಚ್ಚಿಸಲು ಹಾಗೂ ಆಕ್ಸಿಜನ್ ಪೂರೈಕೆ ಸುಗಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಸ್ಪತ್ರೆಯಲ್ಲಿರುವ ಆಕ್ಸಿಜನ್ ಘಟಕದ ತಾಂತ್ರಿಕ ದೋಷಗಳನ್ನು ನಿವಾರಿಸಲಾಗುವುದು ಎಂದಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಸುಗಮ ಆಕ್ಸಿಜನ್ ಪೂರೈಕೆ, ಬೆಡ್ ವ್ಯವಸ್ಥೆ ಮತ್ತು ಔಷಧೋಪಚಾರದ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯ ಮೆಡಿಕಲ್ ಆಕ್ಸಿಜನ್ ಪ್ಲಾಂಟ್‍ಗೆ ಹೆಚ್ಚುವರಿ ಆಕ್ಸಿಜನ್ ಪಡೆಯಲು ಹೆಚ್ಚುವರಿ ವಾಹನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಆಕ್ಸಿಜನ್ ಪ್ರಮಾಣ ಪರಿಗಣಿಸಿ 348 ಬೆಡ್ ವ್ಯವಸ್ಥೆ ಮಾಡಲಾಗಿದೆ. ಇವು ಪೂರ್ಣ ಆಗಿವೆ. ಹೆಚ್ಚಿನ ಜನರು ಗುಣಮುಖರಾಗಿ ಬಿಡುಗಡೆಯಾಗುತ್ತಿರುವುದರಿಂದ ಬೆಡ್‌ಗಳ ಕೊರತೆ ಬರುವುದಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳ ಶೇ.75ರಷ್ಟು ಬೆಡ್‌ಗಳನ್ನು ಪಡೆಯಲು ಸರ್ಕಾರ ಅನುಮತಿ ನೀಡಿದೆ. ಅಗತ್ಯವಾದರೆ ಅವುಗಳನ್ನು ಪಡೆಯುವ ಜೊತೆಗೆ, ಛತ್ರಗಳಲ್ಲೂ ಸಹ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಔಷಧ ಪೂರೈಕೆ ಇದ್ದು, ಖಾಸಗಿಯಲ್ಲಿ ಲಭ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಸರ್ಕಾರದ ಬಳಿ ಚರ್ಚಿಸಲಾಗುವುದು ಎಂದರು.
ಇಂದು ಜಿಲ್ಲೆಗೆ ಹತ್ತು ಸಾವಿರದಷ್ಟು ಕೊರೊನಾ ಲಸಿಕೆ ಬರುವ ನಿರೀಕ್ಷೆ ಇದೆ. ಲಸಿಕೆ ಬಂದರೆ ಅದರ ವಿತರಣೆಗೆ ಮಂಗಳವಾರದಿಂದಲೇ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮೆಡಿಕಲ್ ಆಕ್ಸಿಜನ್ ಪ್ಲಾಂಟ್‍ಗೆ ಆಕ್ಸಿಜನ್ ಪೂರೈಕೆ ಮಾಡಲು ಎಂಎಸ್‍ಪಿಎಲ್ ನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಅವರು ಸದರನ್ ಆಕ್ಸಿಜನ್ ಏಜೆನ್ಸಿಯ ಮೂಲಕ ಆಸ್ಪತ್ರೆಗೆ ಸರಬರಾಜು ಮಾಡುತ್ತಿದ್ದಾರೆ. ಇಲ್ಲಿಯವರೆಗೆ ಆಕ್ಸಿಜನ್ ಕೊರತೆ ಇಲ್ಲ. ಆದರೆ, ಆಕ್ಸಿಜನ್ ಪ್ಲಾಂಟ್ ಮತ್ತು ವಾಲ್ವ್‍ನಲ್ಲಿ ಸಣ್ಣಪುಟ್ಟ ತೊಂದರೆಗಳಿದ್ದು ಅದನ್ನು ಬಳ್ಳಾರಿಯ ಇಂಜಿನಿಯರ್ ಪರಿಶೀಲಿಸಿ ಕೆಲವು ಮಾರ್ಗೋಪಾಯ ತಿಳಿಸಿದ್ದಾರೆ ಎಂದರು.
ಬೆಡ್‌ಗಳ ಸಾಮರ್ಥ್ಯ ಹೆಚ್ಚಿಸಿಕೊಳ್ಳುವಂತೆ ಎರಡು ಮೆಡಿಕಲ್ ಕಾಲೇಜಿನವರಿಗೆ ಕೇಳಿದ್ದೇವೆ. ಇದಕ್ಕೆ ಅವರು ಸಿದ್ಧವಿದ್ದರೂ ವೈದ್ಯಕೀಯ ಆಕ್ಸಿಜನ್ ಪೂರೈಕೆ ಆಗಬೇಕು. ಇದಕ್ಕಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಬಾಪೂಜಿ ಆಸ್ಪತ್ರೆಯ ಡಾ.ರವಿಯವರು ವೈದ್ಯರು ಹಾಗೂ ಇಂಟರ್ನ್ಸ್ ತಮ್ಮ ಜೀವದ ಭಯ ತೊರೆದು ಹಗಲು, ರಾತ್ರಿ ಕೊರೊನಾ ರೋಗಿಗಳನ್ನು ನೋಡಿಕೊಳ್ಳುತ್ತಿದ್ದು, ಇವರಿಗೆ ಪ್ರತಿದಿನ ರೂ.1 ಸಾವಿರದಂತೆ ಪ್ರೋತ್ಸಾಹ ಧನ ನೀಡುವಂತೆ ಮನವಿ ಮಾಡಿದ್ದಾರೆ. ಸರ್ಕಾರದಿಂದ ಇದಕ್ಕೆ ಪ್ರಸಕ್ತ ಅವಕಾಶವಿಲ್ಲ. ಈ ಹಿನ್ನೆಲೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತಮ್ಮ ಟ್ರಸ್ಟ್ ವತಿಯಿಂದ ರೂ.5 ಲಕ್ಷ ನೀಡುವುದಾಗಿ ತಿಳಿಸಿದ್ದಾರೆ ಎಂದು ಬೀಳಗಿ ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಮಹಾಪೌರ ವೀರೇಶ್ ಎಸ್.ಟಿ., ಎಸ್ಪಿ ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‍ನಾಯಕ್, ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಯಪ್ರಕಾಶ್, ಡಿಎಸ್‍ಓ ಡಾ.ರಾಘವನ್, ಡಾ.ಶಶಿಧರ್, ಡಾ.ಗಿರೀಶ್, ಡಾ.ರವಿ, ಬಳ್ಳಾರಿಯ ಬಯೋಮೆಡಿಕಲ್ ಇಂಜಿನಿಯರ್ ಶಾಂತರಾಜು ಮತ್ತಿತರರು ಉಪಸ್ಥಿತರಿದ್ದರು.