ಸಿ.ಟಿ. ಸ್ಕ್ಯಾನ್‌ಗೆ ಹೆಚ್ಚು ಹಣ ಪಡೆದರೆ ಕ್ರಮ : ಡಿಸಿ ಎಚ್ಚರಿಕೆ

ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಪ್ರತ್ಯೇಕ ಆಕ್ಸಿಜನ್ ವಾರ್ಡ್

ದಾವಣಗೆರೆ, ಮೇ 3 – ಸಿ.ಟಿ. ಸ್ಕ್ಯಾನ್ ಸೆಂಟರ್‌ಗಳು ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ಶುಲ್ಕ ಪಡೆದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಸಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರು ಹಾಗೂ ಸರ್ಕಾರಿ ಮತ್ತು ಖಾಸಗಿ ಸಿಟಿ ಸ್ಕ್ಯಾನ್ ಮಾಡುವ ತಜ್ಞರೊಂದಿಗೆ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಇತ್ತೀಚೆಗೆ ಸಿ.ಟಿ. ಸ್ಕ್ಯಾನ್ ಮೂಲಕ ರೂಪಾಂತರಿ ಕೊರೊನಾ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಟಿ ಸ್ಕ್ಯಾನ್ ಸೆಂಟರ್‌ಗಳಲ್ಲಿ ಸರ್ಕಾರ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ದರ ಪಡೆಯುತ್ತಿದ್ದಾರೆಂಬ ದೂರುಗಳು ಬಂದಿವೆ. ಯಾವುದೇ ಕಾರಣಕ್ಕೂ ನಿಗದಿತ ದರಕ್ಕಿಂತ ಹೆಚ್ಚಿಗೆ ಪಡೆಯಬಾರದು ಎಂದು ಹೇಳಿದ್ದಾರೆ.

ಸ್ಕ್ಯಾನ್ ಸೆಂಟರ್‌ನ ಫಲಕದಲ್ಲಿ ದರದ ವಿವರವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದ ಅವರು, ಸಿ.ಟಿ. ಸ್ಕ್ಯಾನ್ ಮಾಡಿಸಿದ ನಂತರ ಕೇವಲ ವರದಿ ಮಾತ್ರ ನೀಡಲಾಗುತ್ತಿದ್ದು ಫಿಲ್ಮ್ ನೀಡುತ್ತಿಲ್ಲ. ಇದರಿಂದ ವೈದ್ಯರು ಮರು ಪರಿಶೀಲನೆ ಮಾಡಲು ಆಗುವುದಿಲ್ಲ. ಆದ ಕಾರಣ ಇನ್ನು ಮುಂದೆ ಫಿಲ್ಮ್ ನೀಡಬೇಕು. ಇದನ್ನು ನಾವು ಸ್ಕ್ಯಾನ್ ಆಡಿಟ್ ಮಾಡಿಸುತ್ತೇವೆ. ಫಿಲಂಗಾಗಿ ಹಣ ಪಡೆಯಬಾರದು ಎಂದರು.

ಸಾಮಾನ್ಯ ಮತ್ತು ಕೋವಿಡ್ ಶಂಕಿತರು ಇಬ್ಬ ರನ್ನೂ ಒಂದೇ ಸ್ಕ್ಯಾನರ್‌ನಲ್ಲಿ ಪರೀಕ್ಷೆ ಮಾಡು ತ್ತಿರುವುದು ಕಂಡು ಬಂದಿದೆ. ಸಿಟಿ ಸ್ಕ್ಯಾನರ್ ಸೂಪರ್ ಸ್ಪ್ರೆಡರ್‌ಗಳಾಗುತ್ತಿದ್ದು, ಒಬ್ಬ ರೋಗಿಗೆ ಸ್ಕ್ಯಾನ್ ಮಾಡಿದ ನಂತರ ಸ್ಕ್ಯಾನರ್ ಅನ್ನು ಸಂಪೂರ್ಣ ಸ್ಯಾನಿ ಟೈಸ್ ಮಾಡಿ ಮತ್ತೊಬ್ಬರಿಗೆ ಮಾಡಬೇಕು ಹಾಗೂ ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಕೇಂದ್ರಗಳಲ್ಲಿ ಪಾಲಿಸಬೇಕೆಂದು ಸೂಚನೆ ನೀಡಿದರು.

ಗರ್ಭಿಣಿಯರಿಗೆ ಪ್ರತ್ಯೇಕ ಆಕ್ಸಿಜನ್ ವಾರ್ಡ್: ಗರ್ಭಿಣಿಯರೂ ಹೆಚ್ಚಾಗಿ ಕೊರೊನಾಗೆ ಸಿಲುಕು ತ್ತಿದ್ದಾರೆ. ಹೀಗಾಗಿ ಗರ್ಭಿಣಿಯರಿಗೆ 10 ಬೆಡ್‌ಗಳ ಪ್ರತ್ಯೇಕ ಆಕ್ಸಿಜನ್ ವಾರ್ಡ್‌ ರೂಪಿಸಲು ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಬೀಳಗಿ ತಿಳಿಸಿದ್ದಾರೆ.

ಓಬಿಜಿ ವಿಭಾಗದ ತಜ್ಞರಾದ ಡಾ.ಶುಕ್ಲ ಶೆಟ್ಟಿ ಮಾತನಾಡಿ, ಕೊರೊನಾ ವೈರಾಣು ರೂಪಾಂತರ ಪಡೆದ ಹಿನ್ನೆಲೆಯಲ್ಲಿ ಗರ್ಭಿಣಿಯರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕೆಂಬ ಬಗ್ಗೆ ನಿರ್ಧರಿಸಲು ವೈದ್ಯರ ಒಂದು ಪ್ಯಾನೆಲ್ ರಚಿಸುವಂತೆ ಕೋರಿದರಲ್ಲದೇ, ಸೋಂಕಿನ ಸಂಭವ ಇರುವುದರಿಂದ ಗರ್ಭಿಣಿಯರು ನಿಯಮಿತ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಬರುವುದು ಬೇಡ. ಪಿಹೆಚ್‍ಸಿ, ಹೆರಿಗೆ ಆಸ್ಪತ್ರೆ ಅಥವಾ ಸ್ಥಳೀಯವಾಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

 ಸಭೆಯಲ್ಲಿ ವೈದ್ಯರು ಕೋವಿಡ್ ರೋಗಿಗಳನ್ನು ನಿರ್ವಹಿಸಲು ವೈದ್ಯರ ಮತ್ತು ಶುಶ್ರೂಷಕರ ತಂಡಗಳನ್ನು ಹೆಚ್ಚಿಸುವಂತೆ ಹಾಗೂ ವೈದ್ಯರು ಮತ್ತು ಸಿಬ್ಬಂದಿಗಳ ಹೆಚ್ಚುವರಿ ನಿಯೋಜನೆ ಮಾಡುವಂತೆ ಕೋರಿದರು.

ಇದೊಂದು ರಾಷ್ಟ್ರೀಯ ತುರ್ತು ಪರಿಸ್ಥಿತಿಯಾಗಿದ್ದು, ವೈದ್ಯರು ಇಂತಹ ಸಂದರ್ಭದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು. ಸಿಟಿ ಸ್ಕ್ಯಾನ್‍ಗೆ ನಿಗದಿತ ದರಕ್ಕಿಂತ ಹೆಚ್ಚಿನ ದರ ಪಡೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಸಹಕರಿಸಬೇಕು. ಹೆಚ್ಚಿಗೆ ಬಿಲ್ ಮಾಡಿದರೆ ಜನ ಸಾಮಾನ್ಯರಿಗೆ ತೊಂದರೆಯಾಗುವ ಹಿನ್ನೆಲೆಯಲ್ಲಿ ಮಾನವೀಯ ದೃಷ್ಟಿಯಿಂದ ಖಾಸಗಿ ಆಸ್ಪತ್ರೆಗಳು ಕೋವಿಡ್ ನಿಯಮಾವಳಿಗಳನ್ನು ಪಾಲಿಸಬೇಕೆಂದರು.

ಸಭೆಯಲ್ಲಿ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್, ಎಸ್.‍ಪಿ. ಹನುಮಂತರಾಯ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್‍ನಾಯಕ್, ಡಿಹೆಚ್‍ಓ ಡಾ.ನಾಗರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಜಯಪ್ರಕಾಶ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, ಡಾ.ಶಶಿಧರ್, ಡಾ.ಗಿರೀಶ್,
ಡಾ.ರವಿ ಮತ್ತಿತರೆ ತಜ್ಞ ವೈದ್ಯರು ಉಪಸ್ಥಿತರಿದ್ದರು.

error: Content is protected !!