ಜೆ.ಜೆ.ಎಂ. ಮೆಡಿಕಲ್ ಕಾಲೇಜು ಘಟಿಕೋತ್ಸವ
ದಾವಣಗೆರೆ, ಮಾ.7- ಕಳೆದ ಐದೂ ವರೆ ವರ್ಷಗಳ ಕಾಲ ನಿಷ್ಠೆಯಿಂದ ವೈದ್ಯ ಕೀಯ ಅಭ್ಯಾಸ ಮಾಡಿ ಪದವೀಧರರಾಗಿ ದ್ದೀರಿ. ಮುಂದೆ ನಿಷ್ಠಾವಂತ ವೈದ್ಯರಾಗುವ ಮೂಲಕ ಜೆ.ಜೆ.ಎಂ. ಕಾಲೇಜಿನ ಕೀರ್ತಿ ಯನ್ನು ವಿಶ್ವದಗಲಕ್ಕೂ ಕೊಂಡೊಯ್ಯುತ್ತೀರಿ ಎಂಬ ಆಶಾಭಾವನೆ ಇದೆ ಎಂದು ಕಾಲೇಜಿನ ಅಧ್ಯಕ್ಷರೂ, ಶಾಸಕರೂ ಆದ ಡಾ.ಶಾಮನೂರು ಶಿವಶಂಕರಪ್ಪ ಹೇಳಿದರು.
ನಗರದ ಜೆ.ಜೆ.ಎಂ. ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ವೈದ್ಯ ವಿದ್ಯಾರ್ಥಿಗಳ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಇಂದು ಜ.ಜ.ಮು. ಮಹಾವಿದ್ಯಾಲ ಯಕ್ಕೆ ಹೆಮ್ಮೆಯ ದಿನವಾಗಿದೆ. 50ನೇ ಬ್ಯಾಚ್ನಲ್ಲಿ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆದು ದೇಶ ಸೇವೆಗೆ ಸಜ್ಜಾಗುತ್ತಿರು ವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದರು.
ಈಗಾಗಲೇ 49 ಬ್ಯಾಚ್ಗಳಲ್ಲಿ ಪದವಿ ಪಡೆದವರು ವಿಶ್ವದ ಮೂಲೆ ಮೂಲೆಗಳಲ್ಲಿ ಶ್ರೇಷ್ಠ ವೃತ್ತಿ ಮಾಡಿ ಪೋಷಕರಿಗೆ, ಕಾಲೇಜಿಗೆ ಹಾಗೂ ದೇಶಕ್ಕೂ ಕೀರ್ತಿ ತಂದಿದ್ದಾರೆ. ಇದೀಗ ನೂತನ ಬ್ಯಾಚ್ನಲ್ಲೂ ಅನೇಕರು ರಾಂಕ್ ಪಡೆದಿರುವುದು ಪ್ರಶಂಸನೀಯ ಎಂದರು.
ಕಾಲೇಜಿನ ಬೋಧಕ ವೈದ್ಯರು ಗುಣಮಟ್ಟದ ಶಿಕ್ಷಣದಿಂದ ಹೆಚ್ಚು ರಾಂಕ್ ಪಡೆಯಲು ಸಾಧ್ಯವಾಗುತ್ತಿದೆ. ಮತ್ತಷ್ಟು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಉತ್ತಮ ಶಿಕ್ಷಣ ನೀಡುವ ಮೂಲಕ ಮತ್ತಷ್ಟು ಹೆಚ್ಚು ರಾಂಕ್ ಗಳು ಬರುವಂತಾಗಲಿ. ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡುವ ನಮ್ಮ ಕಾಲೇಜು ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಾರಾಯಣ ಹೃದಯಾಲಯದ ಅಧ್ಯಕ್ಷ ಡಾ. ದೇವಿ ಶೆಟ್ಟಿ, ಇದೀಗ ಕಾಲೇಜಿನಿಂದ ಹೊರ ಬಂದು ಸಂಕೀರ್ಣ ಜಗತ್ತನ್ನು ಎದುರಿಸಲು ಸಜ್ಜಾಗುತ್ತಿದ್ದೀರಿ. ಕೆಲವರು ಸಾಮಾನ್ಯವಾಗಿ ಉತ್ತೀರ್ಣರಾದರೆ, ಮತ್ತೆ ಕೆಲವರು ರಾಂಕ್ ಪಡೆದು ಬಂಗಾರದ ಪದಕ ಪಡೆದಿದ್ದೀರಿ. ಆದರೆ ಜೀವನ ರೇಸ್ನ ಆರಂಭದಲ್ಲಿರುವ ನಿಮಗೆ ಮುಂದಿನ ಹೆಜ್ಜೆಗಳು ಅಮೂಲ್ಯ ಎಂದರು.
ವೈದ್ಯಕೀಯ ಕ್ಷೇತ್ರದಲ್ಲಿ ಬುದ್ಧಿವಂತಿಕೆಗಿಂತ ಕೌಶಲ್ಯ, ಉತ್ಸಾಹ ಹಾಗೂ ಜನ ಪರ ಕಾಳಜಿ, ರೋಗಿಯೊಂದಿಗೆ ಸಂವಹನ ನಡೆಸುವ ಕ್ರಿಯೆ ಬಹು ಮುಖ್ಯವಾಗುತ್ತದೆ. ಇದು ಓರ್ವ ಉತ್ತಮ ವೈದ್ಯನಿಗೆ ಇರಬೇಕಾದ ಅರ್ಹತೆಯೂ ಹೌದು. ರೋಗ ಲಕ್ಷಣಗಳನ್ನು ತಿಳಿದು ರೋಗದ ಬಗ್ಗೆ ಹೇಳುವುದು ಜ್ಞಾನ. ರೋಗಿಯ ಎದೆಯ ಮೇಲೆ ಸ್ಟೆತಸ್ಕೋಪ್ ಇರಿಸಿ, ಅವರ ಎದೆ ಬಡಿತ ನೋಡಿಯೇ ಇಂತಹ ತೊಂದರೆ ಇದೆ ಎಂದು ಹೇಳುವುದು ಉತ್ತಮ ವೈದ್ಯನ ಕೌಶಲ್ಯ ಎಂದರು.
ಜನತೆಯಯ ಬಳಿ ನಗು ನಗುತ್ತಲೇ ಮಾತನಾಡುತ್ತಾ, ಅವರ ತೊಂದರೆಯನ್ನು ತಾಳ್ಮೆಯಿಂದ ಕೇಳಿ, ಸಾಂತ್ವನ ಹೇಳಿ ಸರಿಯಾದ ಔಷಧೋಪಚಾರ ಕೊಡುವುದು ಓರ್ವ ವೈದ್ಯನ ಕರ್ತವ್ಯ ಎಂದ ಅವರು, ಹೊಸ ತಂತ್ರಜ್ಞಾನಗಳನ್ನು ಅಭ್ಯಾಸ ಮಾಡಬೇಕು. ಜಗತ್ತು ಹೇಗಿದೆಯೋ ಹಾಗೆ ಸ್ವೀಕರಿಸಬೇಕು ಎಂದು ವೈದ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಸಚ್ಚಿದಾನಂದ ಮಾತನಾಡುತ್ತಾ, ಯಾವುದೇ ಸಾಂಕ್ರಾಮಿಕ ಸಂಕಷ್ಟಗಳಿಗೆ ಎದೆಗುಂದದೆ ಹೊಸ ತಂತ್ರಜ್ಞಾನ ಉಪಯೋಗಿಸಿ ಅದನ್ನು ನಿಯಂತ್ರಣ ದಲ್ಲಿಡುವಂತೆ ನೋಡಿಕೊಳ್ಳಬೇಕು ಎಂದರು.
ನಾವೀಗ ಸಂವಹನ ಯೋಗದಲ್ಲಿದ್ದೇವೆ. ಅದಕ್ಕೆ ತಕ್ಕಂತೆ ನಮ್ಮನ್ನು ತೊಡಗಿಸಿಕೊಳ್ಳಬೇಕು. ಯಾವಾಗ ಯಾವ ವೈದ್ಯನ ಅವಶ್ಯಕತೆ ಬರಬಹುದು ಎಂದು ಯಾರೂ ನಿರೀಕ್ಷಿಸಲಾಗದು ಎಂದರು.
ಪ್ರಾಂಶುಪಾಲ ಡಾ.ಎಸ್.ಬಿ. ಮುರುಗೇಶ್ ಮಾತನಾಡಿ, ರೋಗಿಯ ಸೇವೆ ದೇವರ ಸೇವೆ ಇದ್ದಂತೆ. ನಮ್ಮ ಕೆಲಸವನ್ನು ನಾವು ಖುಷಿಯಿಂದ ಮಾಡಬೇಕು. ವೈದ್ಯರೇ ದೇವರು ಎಂಬ ನಂಬಿಕೆಯನ್ನು ಉಳಿಸಿಕೊಂಡು ಹೋಗಬೇಕು. ಹೆಚ್ಚು ಹೆಚ್ಚು ಪ್ರಯೋಗಗಳನ್ನು ಮಾಡಿ, ಮನುಕುಲಕ್ಕೆ ಸಹಾಯ ಮಾಡಬೇಕು ಎಂದು ಹೇಳಿದರು. ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.