ಆಕ್ಸಿಜನ್ ಕೊರತೆ : 24 ಸಾವು

ಚಾಮರಾಜನಗರದಲ್ಲಿ ಕೋವಿಡ್‌ ದುರಂತ

ಸಾರಿಗೆ ವ್ಯವಸ್ಥಾಪಕ ನಿರ್ದೇಶಕರಿಂದ ತನಿಖೆಗೆ ಆದೇಶ

ಬೆಂಗಳೂರು, ಮೇ 3 – ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರದ ಆಸ್ಪತ್ರೆಯಲ್ಲಿ ಕೊರೊನಾದಿಂದ ಬಳಲುತ್ತಿದ್ದ 23 ಜನರೂ ಸೇರಿದಂತೆ 24 ಜನರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಆಸ್ಪತ್ರೆಯಲ್ಲಿ ನಡೆದ ಘಟನೆ ತೀವ್ರ ಆಘಾತಕ್ಕೆ ಕಾರಣವಾಗಿದ್ದು, ಕುಟುಂಬದವರು ಸುದ್ದಿ ತಿಳಿದ ನಂತರ ಆಸ್ಪತ್ರೆ ಎದುರು ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಪ್ರತಿಭಟನೆಯನ್ನೂ ನಡೆಸಿದ ಕುಟುಂಬದ ಸದಸ್ಯರು, ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿವೆ ಎಂದು ಆರೋಪಿಸಿದರು.

ಘಟನೆಯ ಬಗ್ಗೆ ತನಿಖೆ ನಡೆಸಲು ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ನೇಮಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ತಿಳಿಸಿದ್ದಾರೆ. ಈ ಸಂಬಂಧ ನಾಳೆ ತುರ್ತು ಸಚಿವ ಸಂಪುಟ ಸಭೆಯನ್ನೂ ಕರೆದಿದ್ದಾರೆ.

ಈ ನಡುವೆ ಹೇಳಿಕೆ ನೀಡಿರುವ ಆರೋಗ್ಯ ಸಚಿವ ಡಾ. ಸುಧಾಕರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್, ಆಕ್ಸಿಜನ್ ಕೊರತೆಯಿಂದ ಸಾವುಗಳು ಎಲ್ಲೂ ಸಂಭವಿಸಿಲ್ಲ. ರೋಗಿಗಳು ಕೊನೆ ಗಳಿಗೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ಸಾವುಗಳು ಸಂಭವಿಸುತ್ತಿವೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ 6 ಸಾವಿರ ಲೀಟರ್ ದ್ರವ ವೈದ್ಯಕೀಯ ಆಕ್ಸಿಜನ್ ಇದೆ. ಆದರೆ, ಸಿಲಿಂಡರ್‌ಗಳ ಅಗತ್ಯವಿತ್ತು. ಮೈಸೂರಿನಿಂದ ಸಿಲಿಂಡರ್ ತರುವಲ್ಲಿ ಲೋಪವಾಗಿದೆ ಎಂದವರು ಹೇಳಿದ್ದಾರೆ.

ಮೂವರು ಮಾತ್ರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿರುವ ಸಚಿವ ಸುಧಾಕರ್, ನಿನ್ನೆ ಭಾನುವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿವರೆಗೆ 14 ಜನ ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕೊರೊನಾ ಸಹಜ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 12ರಿಂದ 3 ಗಂಟೆವರೆಗೆ ಮೂವರು ಸಾವನ್ನಪ್ಪಿದ್ದಾರೆ. ಮುಂಜಾನೆ 3 ಗಂಟೆಯಿಂದ 7 ಗಂಟೆಯವರೆಗೆ 7 ಜನ ಸಾವುನ್ನಪ್ಪಿದ್ದು, 24 ಗಂಟೆಯಲ್ಲಿ 23 ಜನರು ಮೃತಪಟ್ಟಿದ್ದಾರೆ ಎಂದಿದ್ದಾರೆ.

ಆರೋಗ್ಯ ಸಚಿವ ಡಾ. ಸುಧಾಕರ್, ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಯಡಿಯೂರಪ್ಪ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಸಂಪರ್ಕಕ್ಕೆ ತೆಗೆದುಕೊಂಡು ತೀವ್ರ ತರಾಟೆಗೆ ತೆಗೆದುಕೊಂಡರು. 

ಈ ಘಟನೆ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿಯವರು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ಬಗ್ಗೆ ವರದಿ ಬರುತ್ತಿದ್ದಂತೆ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಘಟನೆಯನ್ನು ಖಂಡಿಸಿರುವ ಪ್ರತಿಪಕ್ಷಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ್ ಅವರ ರಾಜೀನಾಮೆಗೆ ಒತ್ತಾಯಿಸಿವೆ. 

ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತ್ಯೇಕ ಹೇಳಿಕೆಗಳನ್ನು ನೀಡಿ, ಸರ್ಕಾರದ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದೆ. ಇದರ ಜವಾಬ್ದಾರಿಯನ್ನು ಮುಖ್ಯಮಂತ್ರಿಯವರೇ ಹೊರಬೇಕು ಎಂದು ಹೇಳಿದ್ದಾರೆ. 

ತಜ್ಞರು ನೀಡಿರುವ ವರದಿಯನ್ನು ಕಡೆಗಣಿಸಿದ್ದಕ್ಕೆ ಜನ ಹಾದಿ ಬೀದಿಯಲ್ಲಿ ಸಾಯುವಂತಾಗಿದೆ ಎಂದು ಕಿಡಿಕಾರಿರುವ ಕುಮಾರಸ್ವಾಮಿ, ಇಂತಹ ಸರ್ಕಾರ ನಮಗೆ ಬೇಕೇ ಎಂದಿದ್ದಾರೆ. 

ಮತ್ತೊಂದೆಡೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘಟನೆಯ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು. ವರದಿ ಬರುವವರೆಗೆ ತಮ್ಮ ಸ್ಥಾನಗಳಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದಾರೆ. 

error: Content is protected !!