ಸಿ.ಜಿ. ಆಸ್ಪತ್ರೆಯ ಸಿಬ್ಬಂದಿ ಕೊರತೆ ಇನ್ನೂ ನೀಗಿಲ್ಲ

ಅಲೆ ಬದಲಾದರೂ ಪರಿಸ್ಥಿತಿ ಬದಲಾಗಿಲ್ಲ

ದಾವಣಗೆರೆ, ಮೇ 3 – ಕೊರೊನಾ ಮೊದಲ ಅಲೆ ಹೋಗಿ ಎರಡನೇ ಅಲೆ ತಾರಕಕ್ಕೇರುತ್ತಿದೆ. ಆದರೆ, ಮೊದಲ ಅಲೆಯಲ್ಲಿ ಕಂಡು ಬಂದ ವೆಂಟಿಲೇಟರ್‌, ಸಿಬ್ಬಂದಿ ಹಾಗೂ ಸ್ಟಾಫ್‌ ನರ್ಸ್‌ಗಳ ಕೊರತೆ ಸಮಸ್ಯೆ ಇನ್ನೂ ನೀಗಿಲ್ಲ.

ಹೆಸರಿಗೆ ಮಾತ್ರ ವೆಂಟಿಲೇಟರ್‌ಗಳು ಖಾಲಿ ಇವೆ. ಆದರೆ,  ರೋಗಿಗಳಿಗೆ ಮಾತ್ರ ಸೌಲಭ್ಯ ಸಿಗುತ್ತಿಲ್ಲ. ಕೊರೊನಾದಿಂದ ಸಾವು – ಬದುಕಿನ ಹೋರಾಟ ನಡೆಸುತ್ತಿರುವ ರೋಗಿಗಳಿಗೆ, ಈ ವೆಂಟಿಲೇಟರ್‌ಗಳು ಕನ್ನಡಿಯೊಳಗಿನ ಗಂಟಿನಂತಾಗಿವೆ.

ಕಳೆದ ಬಾರಿ ಕೊರೊನಾ ಸೋಂಕು ತಾರಕಕ್ಕೇರಿದ ಸಂದರ್ಭದಲ್ಲೂ ಸಿಬ್ಬಂದಿ ಕೊರತೆ ವಿಷಯ ಕಾಡಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಿಎಂ – ಕೇರ್ಸ್‌ ನಿಧಿಯ ಮೂಲಕ ವೆಂಟಿಲೇಟರ್‌ಗಳನ್ನು ಕಳಿಸಲಾಗಿತ್ತು. ಆದರೆ, ಸಿಬ್ಬಂದಿ ಕೊರತೆಯಿಂದ ಬಳಕೆಗೆ ಹಿನ್ನಡೆಯಾಗಿತ್ತು.

ಈ ನಡುವೆ, ಮೊದಲ ಕೊರೊನಾ ಅಲೆ ಉತ್ತುಂಗಕ್ಕೆ ತಲುಪಿ ನಂತರ ಬಹುತೇಕ ಇಲ್ಲ ಎನ್ನುವ ಹಂತಕ್ಕೆ ಹೋಯಿತು. ಈಗ ಎರಡನೇ ಅಲೆ ಅಬ್ಬರಿಸುತ್ತಿದೆ. ಇಷ್ಟೆಲ್ಲ ಕಾಲ ಕಳೆದರೂ ಸಿಬ್ಬಂದಿ ನೇಮಕಕ್ಕೆ ಕಾಲ ಮಾತ್ರ ಕೂಡಿ ಬಂದಿಲ್ಲ. ಸರ್ಕಾರಕ್ಕೆ ಮನವಿ ಸಲ್ಲಿಸುವುದರಲ್ಲೇ ವರ್ಷ ಉರುಳಿ ಹೋಗಿದೆ.

ಪ್ರಸಕ್ತ ಕೊರೊನಾದ ಎರಡನೇ ಅಲೆ ಉಲ್ಬಣಿಸಿ ಇರುವ ಆಕ್ಸಿಜನ್‌ ಬೆಡ್‌ಗಳೆಲ್ಲವೂ ತುಂಬಿಕೊಂಡಿವೆ. ದಿಕ್ಕು ಸಿಗದೇ ಓಡುತ್ತಿರುವ ಕೊರೊನಾದ ಎರಡನೇ ಅಲೆ ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಊಹಿಸಲು ಸಾಧ್ಯವಾಗದೇ ಕೇಂದ್ರ ಸರ್ಕಾರದ ವಿಜ್ಞಾನಿಗಳೇ ಕೈ ಚೆಲ್ಲಿದ್ದಾರೆ. 

ಇಂತಹ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಗಳು ಕೊರೊನಾ ಅಲೆ ಎದುರಿಸಲು ಅಗತ್ಯವಾಗಿ ಬೇಕಾಗಿದ್ದು ಸಿಬ್ಬಂದಿ. ಅಂತಹ ಸಿಬ್ಬಂದಿಯ ಕೊರತೆ ನೀಗಿಸುವ ಮಾತುಗಳು ವರ್ಷದಿಂದಲೂ ಕೇಳಿ ಬರುತ್ತಲೇ ಇವೆ ಎಂಬುದೇ ವಿಪರ್ಯಾಸ.

ಜಿಲ್ಲಾ ಆಸ್ಪತ್ರೆಗಳಲ್ಲಿರುವ 15 ವೆಂಟಿಲೇಟರ್‌ಗಳ ನಿರ್ವಹಣೆಗೆ ಮಾನವ ಶಕ್ತಿ ಬೇಕಿದೆ. ಇದಕ್ಕಾಗಿ ಖಾಸಗಿ ಅನಸ್ತೇಷಿಯಾ ವೈದ್ಯರ ನೆರವು ಪಡೆಯಲಾಗುವುದು ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಸೋಮವಾರ ತಿಳಿಸಿದ್ದಾರೆ.

ಈ ವೆಂಟಿಲೇಟರ್‌ಗಳ ನಿರ್ವಹಣೆಗೆ 20 ನರ್ಸ್ ಹಾಗೂ 10 ವೈದ್ಯರು ಬೇಕಿದೆ. ಆದರೆ, ಪ್ರಸಕ್ತ ಹಲವಾರು ವೈದ್ಯರೇ ಕೊರೊನಾ ಸೋಂಕಿಗೆ ಸಿಲುಕಿರುವುದರಿಂದ ಸಿಬ್ಬಂದಿ ಪಡೆಯುವುದು ಕಷ್ಟವಾಗುತ್ತಿದೆ. ಆದರೂ, ಖಾಸಗಿ ಸಿಬ್ಬಂದಿಯ ಮೂಲಕವಾದರೂ ವೆಂಟಿಲೇಟರ್ ನಿರ್ವಹಿಸಲಾಗುವುದು ಎಂದವರು ಹೇಳಿದ್ದಾರೆ.

ಎರಡು ಕೊರೊನಾ ಅಲೆಗಳನ್ನು ಈಗಾಗಲೇ ಕಂಡಾಗಿದೆ. ಇನ್ನೂ ಹಲವು ಅಲೆಗಳು ಬರಲಿವೆ ಎಂದು ಸರ್ಕಾರದ ಪರಿಣಿತರು ಹೇಳುತ್ತಿದ್ದಾರೆ. ಆ ಅಲೆಗಳು ಬರುವುದರ ಒಳಗಾದರೂ ಸಿ.ಜಿ. ಆಸ್ಪತ್ರೆ ಸಿಬ್ಬಂದಿ ಕೊರತೆ ನೀಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. 

error: Content is protected !!