ಆಳವಾದ ಅಧ್ಯಯನದಿಂದ ಭವಿಷ್ಯದ ದಾರಿ ಸಿದ್ಧಿಸಲಿದೆ

ಬಿಎಸ್ ಸಿ ಕಾಲೇಜಿನಲ್ಲಿ ದಾವಣಗೆರೆ ವಿವಿ ಪ್ರೊ. ಗಾಯತ್ರಿ ದೇವರಾಜ ಅಭಿಮತ

ದಾವಣಗೆರೆ, ಮಾ.5- ಯಶಸ್ಸು ಕಾಣಲು ಎಲ್ಲಾ ಕ್ಷೇತ್ರ ಗಳಲ್ಲೂ ಅವಕಾಶಗಳಿದ್ದರೂ ನಿರ್ದಿಷ್ಟವಾಗಿ ಒಂದೇ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮತ್ತು ಶ್ರಮ ವಹಿಸಿದರೆ ಗಾಢವಾದ ಜಾನ ಸಂಪಾದಿಸಿ ಪರಿಪೂರ್ಣ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅವರು, ಇಂದು ನಗರದ ಎಸ್.ಎಸ್. ಬಡಾವಣೆ §ಎ¬ ಬ್ಲಾಕ್ ನಲ್ಲಿರುವ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ರಾಂಕ್ ವಿಜೇತರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಪ್ರತಿ ಜಾಗದಲ್ಲಿ ಅಗೆಯುವ ಬದಲು ಒಂದು ಜಾಗದಲ್ಲಿ ಆಳವಾಗಿ ಅಗಿದರೆ ಭೂಮಿಯಲ್ಲಿ ನೀರು ಸಿಗುತ್ತದೆ ಎಂಬಂತೆ ಎಲ್ಲಾ ಕ್ಷೇತ್ರ, ವಿಭಾಗಗಳಲ್ಲಿ ಅಲ್ಪ ಸ್ವಲ್ವ ಜಾನ ಪಡೆಯುವ ಬದಲು ಪ್ರಮುಖವಾಗಿ ನಿಮ್ಮ ಸಾಮರ್ಥ್ಯ ಅನುಸಾರ ಒಂದೇ ಕ್ಷೇತ್ರ, ವಿಭಾಗವನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬೇಕು. ಆಗ ನಿಮಗೆ ಭವಿಷ್ಯ ರೂಪಿಸಿಕೊಳ್ಳುವ ದಾರಿ ಸಿದ್ಧಿಸಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿ ಜೀವನವನ್ನು ವ್ಯರ್ಥವಾಗಿಸಿಕೊಳ್ಳದೇ, ಈ ಹಂತದಲ್ಲೇ ಉಜ್ವಲ ಭವಿಷ್ಯ ಕಟ್ಟಿಕೊಳ್ಳಲು ಅಧ್ಯಯನಶೀಲರಾಗುವುದೇ ನಿಮ್ಮ ಜವಾಬ್ದಾರಿ ಎಂಬುದನ್ನು ಮರೆಯದಿರಿ. ವಿದ್ಯಾಭ್ಯಾಸದ ಜೊತೆಗೆ ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳೂ ಸಹ ಭವಿಷ್ಯಕ್ಕೆ ಪೂರಕವಾಗಿವೆ. ಇವುಗಳಲ್ಲೂ ತೊಡಗಿಕೊಂಡು ನಿಮ್ಮ ಪ್ರತಿಭೆ ಅನಾವರಣಗೊಳಿಸಿ. ಇಷ್ಟವಾಗುವುದಾದರೆ ನಿರ್ದಿಷ್ಟವಾಗಿ ಕ್ರೀಡೆ ಅಥವಾ ಸಾಂಸ್ಕೃತಿಕ ಕ್ಷೇತ್ರವನ್ನೇ ಪ್ರಮುಖವಾಗಿಸಿಕೊಂಡು ಶ್ರಮ ವಹಿಸಿದರೆ ಪರಿಪೂರ್ಣತೆ ಸಾಧಿಸಿ ಯಶಸ್ಸಿನ ಮೆಟ್ಟಿಲೇರಬಹುದು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳು ಮಾನಸಿಕ, ದೈಹಿಕ ಸದೃಢತೆಗೆ ಸಮಯ ಮೀಸಲಿಟ್ಟು ನಿತ್ಯವು ಯೋಗ, ಧ್ಯಾನ ಮಾಡಬೇಕು. ಆತ್ಮವಿಶ್ವಾಸವಿದ್ದರೆ ಸಾಧನೆಗೆ ಯಾವುದೇ ಅಡೆ ತಡೆ ಬಂದರೂ ನಿಭಾಯಿಸಬಹುದಾಗಿರುತ್ತದೆ. ಆರೋಗ್ಯವಂತ ಮತ್ತು ವ್ಯಾಜ್ಯಗಳ ರಹಿತ ದೇಶದಲ್ಲಿ ನೆಮ್ಮದಿ ಕಾಣಲು ಸಾಧ್ಯ. ಹಾಗಾಗಿ ಯುವ ಜನತೆ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು, ಉತ್ತಮ ಚಿಂತನೆಗಳನ್ನು ಹೊಂದಿದರೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಬಹುದೆಂದು ಆಶಿಸಿದರು.

ವಿನಾಯಕ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಎನ್.ಎ. ಮುರುಗೇಶ್ ಮಾತನಾಡಿ, ಜೀವನದಲ್ಲಿ ಕಲಿಕೆ ಮತ್ತು ಆದಾಯ ಗಳಿಕೆಗೆ ಕೊನೆಯೇ ಇಲ್ಲ. ಓದಿನಲ್ಲಿ ಏಳು-ಬೀಳು ಸಹಜ. ಅನುತ್ತೀರ್ಣವೇ ಭವಿಷ್ಯಕ್ಕೆ ಅಂತಿಮವಾಗಬಾರದು. ಭಯ, ಹಿಂಜರಿಕೆ ಬಿಟ್ಟು ಸಾಧನೆಗೆ ದೃಢ ಸಂಕಲ್ಪ ಮಾಡಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಅಧ್ಯಕ್ಷ ಬಿ.ಸಿ. ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶವಿದೆ. ಕೇವಲ ಪದವಿ ಪಡೆಯಲು ಓದುವ ಮನೋಭಾವನೆ ಬಿಟ್ಟು ಪಡೆದ ಜಾನವು ಸಮಾಜಕ್ಕೆ ಒಳಿತಿನ ಕೊಡುಗೆ ನೀಡಲು ಮುಂದಾಗಿ. ಆತ್ಮಸ್ಥೈರ್ಯ, ಪ್ರಯತ್ನ, ಛಲವು ಜೀವನದ ಯಶಸ್ಸಿಗೆ ಬಹಳ ಸುಲಭ ಮಾಡಲಿದೆ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಬಿ.ಎಸ್. ಚನ್ನಬಸಪ್ಪ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಸಿ. ಗುರು ಪ್ರಾಸ್ತಾವಿಕವಾಗಿ ಮಾತನಾಡಿ, ತಾವು ಇದೇ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ, ಶಿಕ್ಷಕರಾಗಿ, ವಿಭಾಗವೊಂದರ ಮುಖ್ಯಸ್ಥರಾಗಿ, ಇದೀಗ ಪ್ರಾಂಶು ಪಾಲರಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಹರುಷ ವ್ಯಕ್ತಪಡಿಸುತ್ತಾ, ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ನುಡಿಗಳನ್ನಾಡಿದರು.  

ರಾಂಕ್ ವಿಜೇತ ವಿದ್ಯಾರ್ಥಿಗಳಾದ ಹೆಚ್.ಎಂ. ಚಂದನ, ಬಿ.ಎಸ್. ಮನೋಜ್, ಎಂ.ಎಸ್. ದೀಕ್ಷಾ, ಬಿ.ಕೆ. ಅನನ್ಯ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಇಎಸ್ ಶಾಲೆ ಅಧ್ಯಕ್ಷ ಆರ್. ವೆಂಕಟರೆಡ್ಡಿ, ಎಸ್ ಬಿಸಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಷಣ್ಮುಖ, ಅಥಣಿ ಕಾಲೇಜು ಪ್ರಾಂಶುಪಾಲ ಪ್ರೊ. ಕೆ. ರಾಜಶೇಖರ್ ಸೇರಿದಂತೆ ಇತರರು ಇದ್ದರು.

error: Content is protected !!