ದಾವಣಗೆರೆ, ನ. 8- ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸರಸ್ವತಿ ಚಿಮ್ಮಲಗಿ ಅವರು ಸ್ಪರ್ಧಿಸಿದ್ದು, ಈ ಬಾರಿ ಮಹಿಳೆಗೆ ಅಧ್ಯಕ್ಷ ಸ್ಥಾನ ಸಿಗಲಿ ಎಂದು ಮಾಜಿ ಸಚಿವರೂ ಆಗಿರುವ ಹಿರಿಯ ಲೇಖಕಿ ಬಿ.ಟಿ. ಲಲಿತಾನಾಯ್ಕ್ ಸುದ್ದಿಗೋಷ್ಠಿಯಲ್ಲಿ ತಮ್ಮ ಆಶಯ ವ್ಯಕ್ತಪಡಿಸಿದರು.
ಸರಸ್ವತಿ ಚಿಮ್ಮಲಗಿ ಅವರು ದಕ್ಷತೆಯಿಂದ ಆಡಳಿತ ನಡೆಸಲು ಸಮರ್ಥರಿದ್ದಾರೆ. ಪದವೀಧರರಾಗಿದ್ದು ರಂಗಭೂಮಿ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಅವರಿಗೆ ಈ ಬಾರಿ ಕಸಾಪ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡಾ. ಸರಸ್ವತಿ ಚಿಮ್ಮಲಗಿ ಮಾತನಾಡಿ, ಈ ಬಾರಿ ಮಹಿಳೆ ಅಧ್ಯಕ್ಷರಾಗಲಿ ಎಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ತಮ್ಮ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
107 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಇದುವರೆಗೂ ಮಹಿಳೆಯರು ಸ್ಪರ್ಧಿಸಿರಲಿಲ್ಲ. ತಾವು ಮೊದಲ ಬಾರಿಗೆ ಸ್ಪರ್ಧಿಸಿದ್ದೇನೆ ಎಂದರು.
ಮಹಿಳೆ ಏನೆಲ್ಲಾ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಸಂಸ್ಕೃತಿ ಎಂದರೆ ಮಹಿಳೆ. ಕನ್ನಡ ನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮಹಿಳಾ ಸ್ಪರ್ಧಿಯಾಗಿ ಕಣಕ್ಕಿಳಿದಿದ್ದೇನೆ. ಮತದಾರರು ನನ್ನನ್ನು ಬೆಂಬಲಿಸುವ ಮೂಲಕ ಗೆಲುವಿಗೆ ಕಾರಣರಾಗುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಾಹಿತಿ ಹೆಚ್.ಕೆ. ಸತ್ಯಭಾಮ, ಡಾ. ಪಾರ್ವತಿ, ಡಾ. ಬಿ. ವಾಸುದೇವ್, ಅರುಣಕುಮಾರಿ ಬಿರಾದಾರ್, ಅಬ್ದುಲ್ ಮಜೀದ್, ಅನ್ನಪೂರ್ಣ ಪಾಟೀಲ್ ಉಪಸ್ಥಿತರಿದ್ದರು.