ದಾವಣಗೆರೆ, ನ.8- ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಪುಣ್ಯತಿಥಿ ಅಂಗವಾಗಿ ನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ನಗರದಲ್ಲಿ ಇಂದು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡುವ ಮುಖೇನ ಪುನೀತ್ ನಡೆಯಂತೆ ಸಾಮಾಜಿಕ ಸೇವಾ ಕಾರ್ಯ ಮಾಡುವ ಮುಖೇನ ಸ್ಮರಿಸಿದರು.
ನಗರ ಪಾಲಿಕೆ ಮುಂಭಾಗದಲ್ಲಿ ಕಾಂಗ್ರೆಸ್ ನ ನಗರ ಪಾಲಿಕೆ ಸದಸ್ಯರೊಡಗೂಡಿ ಆಯೋಜಿಸಿದ್ದ ಅನ್ನ ಸಂತರ್ಪಣೆಗೆ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಸಾರ್ವಜನಿಕರಿಗೆ ಬಿಸಿ ಬೇಳೆ ಬಾತ್, ಮೊಸರನ್ನ ವಿತರಿಸುವ ಮುಖೇನ ಚಾಲನೆ ನೀಡಿದರು.
ನಂತರ ಮಾತನಾಡಿದ ಎಸ್ಸೆಸ್, ರಾಜ್ಯಾದ್ಯಂತ 11ನೇ ದಿನದ ಪುಣ್ಯತಿಥಿ ಆಚರಿಸುತ್ತಿದ್ದು, ಈ ಸಂದರ್ಭದಲ್ಲಿ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರು ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಆಯೋಜಿಸಿರುವುದು ಒಳ್ಳೆಯ ಕೆಲಸ ಎಂದು ಶ್ಲ್ಯಾಘಿಸಿದರು.
ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, ಪುನೀತ್ ರಾಜಕುಮಾರ್ ಸಮಾಧಿ ಬಳಿ ಅವರ ಕುಟುಂಬದ ವತಿಯಿಂದ ಪುಣ್ಯತಿಥಿ ಮಾಡುತ್ತಿರುವುದರಿಂದ, ದಾವಣಗೆ ರೆಯಲ್ಲಿ ನಗರಪಾಲಿಕೆ ಕಾಂಗ್ರೆಸ್ ಸದಸ್ಯರು ಸೇರಿ ಅನ್ನ ಸಂತರ್ಪಣೆ ಆಯೋಜಿಸಿದ್ದೇವೆ. ಒಂದು ಸಾವಿರ ಜನರಿಗೆ ಬಿಸಿ ಬೇಳೆ ಬಾತು, ಮೊಸರನ್ನ ಮತ್ತು ಕುಡಿಯುವ ನೀರಿನ ಬಾಟಲ್ ನೀಡುತ್ತಿದ್ದೇವೆ ಎಂದು ತಿಳಿಸಿದರು.
ರಿಂಗ್ ರಸ್ತೆಗೆ ಪುನೀತ್ ಹೆಸರು ನಾಮಕರಣಕ್ಕೆ ಒತ್ತಾಯ: ನಗರ ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ, ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ನಗರದ ಒಂದು ಪ್ರಮುಖ ವೃತ್ತ ಹಾಗೂ ಬಿಎಸ್ಎನ್ಎಲ್ ಕಚೇರಿಯಿಂದ ಬಾಪೂಜಿ ಸಮುದಾಯ ಭವನದವರೆಗೆ ಸಂಪರ್ಕ ಕಲ್ಪಿಸುವ ರಿಂಗ್ ರಸ್ತೆಗೆ ಪುನೀತ್ ರಾಜ ಕುಮಾರ್ ಹೆಸರು ನಾಮಕರಣ ಮಾಡಬೇಕು. ಈ ಸಂಬಂಧ ಮುಂದಿನ ನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ತಾವು ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದರು.
ನನ್ನ ಕಾಲಿಗೆ ಪುನೀತ್ ನಮಸ್ಕರಿಸಿದ್ದು ಮರೆಯಲಾಗಲ್ಲ
ನಟ ಪುನೀತ್ ರಾಜಕುಮಾರ್ ದೊಡ್ಡವರಿಗೆ ಭಾರೀ ಗೌರವ ಕೊಡುತ್ತಿದ್ದರು. ಸರಳ ವ್ಯಕ್ತಿ, ವಿನಯವಂತ, ಗುಣವಂತ. ಅಂತಹ ಗುಣವಂತನನ್ನು ಕಳೆದುಕೊಂಡ ಸಿನಿಮಾ ಕ್ಷೇತ್ರ ಹಾಗೂ ಕರ್ನಾಟಕ ರಾಜ್ಯ ಬಡವಾಗಿದೆ. ಪುನೀತ್ ಅವರು ಹಿರಿಯರನ್ನು ಕಂಡರೆ ಗೌರವಿಸುವ ಸಂಸ್ಕಾರ ಇಂದಿನ ಯುವಕರಲ್ಲಿ ಬರಬೇಕಾಗಿದೆ. ನಿಧನಕ್ಕೂ 10 ದಿನಗಳ ಮುನ್ನ ನಾನು ಬೆಂಗಳೂರಿನಲ್ಲಿ ಸಿಕ್ಕ ಸಂದರ್ಭದಲ್ಲಿ ಪುನೀತ್ ಅವರು ನನ್ನ ಬಳಿ ಬಂದು, ನನ್ನ ಕಾಲಿಗೆ ನಮಸ್ಕರಿಸಿ ಗೌರವಿಸಿ ದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಎಸ್ಸೆಸ್ ನೆನಪಿಸಿಕೊಂಡರು.
ಪುನೀತ್ ಗೆ ಮರಣೋತ್ತರ ಭಾರತ ರತ್ನ ನೀಡಲು ಆಗ್ರಹ: ಶಾಂತಿಧಾಮದ 1800 ಮಕ್ಕಳಿಗೆ ವಿದ್ಯಾಭ್ಯಾಸ, 26 ಅನಾಥಾಶ್ರಮ, 16 ವೃದ್ಧಾಶ್ರಮ ಸೇರಿದಂತೆ, ಸಮಾಜ ಸೇವೆಯಲ್ಲಿ ಪುನೀತ್ ಅಗ್ರಸ್ಥಾನದಲ್ಲಿದ್ದು, ಅವರಿಗೆ ಮರಣೋತ್ತರ ಭಾರತ ರತ್ನ ಅಥವಾ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ನಗರಪಾಲಿಕೆ ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಸವಿತಾ ಗಣೇಶ್ ಹುಲ್ಮನಿ, ಸುಧಾ ಇಟ್ಟಿಗುಡಿ, ಆಶಾ ಉಮೇಶ್, ಅಬ್ದುಲ್ ಲತೀಫ್ ಸಾಬ್, ಕಲ್ಲಳ್ಳಿ ನಾಗರಾಜ್, ಜಾಕೀರ್ ಅಲಿ, ಕಾಂಗ್ರೆಸ್ ಮುಖಂಡರಾದ ಬಿ.ಹೆಚ್. ವೀರಭದ್ರಪ್ಪ, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಎಸ್. ಮಲ್ಲಿಕಾರ್ಜುನ್, ಸೈಯದ್ ಖಲೀಲ್ ಪೈಲ್ವಾನ್, ಉಮೇಶ್, ಜಗದೀಶ್, ಟಿ. ಯುವರಾಜ್, ಎಲ್.ಎಂ.ಎಚ್. ಸಾಗರ್, ಕವಿತಾ ಚಂದ್ರಶೇಖರ್, ಅನಿತಾಬಾಯಿ ಮಾಲತೇಶ್ ಜಾಧವ್, ದ್ರಾಕ್ಷಾಯಣಮ್ಮ, ರಾಜೇಶ್ವರಿ, ಗೀತಾ ಚಂದ್ರಶೇಖರ್, ಶುಭ ಮಂಗಳ, ಜಯಶ್ರೀ, ಆಶಾ ಮುರುಳಿ, ಮಂಗಳಮ್ಮ ಸೇರಿದಂತೆ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.