ದಾವಣಗೆರೆ, ನ. 8 – ಕೊರೊನಾದ ಕಾರಣದಿಂದ ಉಂಟಾದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹೋಟೆಲ್ ಉದ್ಯಮ, ಈಗ ಬೆಲೆ ಏರಿಕೆಯ ಬಿಸಿಗೂ ಸಿಲುಕಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಹೋಟೆಲ್ ಉದ್ಯಮಕ್ಕೆ ಬೆಲೆ ಏರಿಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ನಿರಂತರ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದಾಗಿ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 2 ಸಾವಿರದ ಗಡಿ ದಾಟಿದೆ. ಬಾಡಿಗೆಯಿಂದ ಹಿಡಿದು ಕಾರ್ಮಿಕರ ವೇತನದವರೆಗೆ ಹತ್ತು ಹಲವು ಹೊರೆಗಳೂ ಹೋಟೆಲ್ ಉದ್ಯಮದ ಮೇಲಿವೆ.
ಇಷ್ಟಾದರೂ ಸಹ, ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಹೋಟೆಲ್ ಉದ್ಯಮಕ್ಕೆ ಸವಾಲುಗಳಿವೆ. ಕೊರೊನಾದಿಂದ ಈಗಷ್ಟೇ ಹೋಟೆಲ್ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಈ ಹಂತದಲ್ಲಿ ಬೆಲೆ ಏರಿಕೆ ಮಾಡಿದರೆ ಗ್ರಾಹಕರು ದೂರವಾಗಬಹುದು ಎಂಬ ಕಳವಳವೂ ಇದೆ. ಹೀಗಾಗಿಯೇ ಬೆಲೆ ಏರಿಕೆ ಹೋಟೆಲ್ ಉದ್ಯಮಕ್ಕೆ ಬಿಸಿ ತುಪ್ಪದಂತಾಗಿದೆ.
ನ.8ರಿಂದ ಹೋಟೆಲ್ ತಿನಿಸಿನ ಬೆಲೆ ಹೆಚ್ಚಿಸಲಾಗು ವುದು ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘ ತಿಳಿಸಿದೆ. ಆದರೆ, ಜಿಲ್ಲೆಯಲ್ಲಿ ಹೋಟೆಲ್ಗಳು ಈ ರೀತಿಯ ಬೆಲೆ ಏರಿಕೆಗೆ ಮುಂದಾಗಿಲ್ಲ. ಕೆಲ ಹೋಟೆಲ್ಗಳು ಸೀಮಿತವಾಗಿ ಕೆಲ ತಿನಿಸುಗಳ ದರವನ್ನು ಹೆಚ್ಚಿಸುತ್ತಿವೆ. ಇಡೀ ಜಿಲ್ಲೆಯಲ್ಲಿ ಒಟ್ಟಿಗೇ ಬೆಲೆ ಹೆಚ್ಚಿಸುವ ನಿರ್ಧಾರಕ್ಕೆ ಹೋಟೆಲ್ಗಳು ಬಂದಿಲ್ಲ.
ಹೋಟೆಲ್ ತಿನಿಸುಗಳ ದರ ನಿರ್ದಿಷ್ಟ ದಿನದಂದು ಎಲ್ಲರೂ ಸೇರಿ ಏರಿಕೆ ಮಾಡುವುದು ಇಲ್ಲಿನ ಪದ್ಧತಿಯಲ್ಲ. ಪ್ರತಿಯೊಂದು ಹೋಟೆಲ್ನವರು ಪರಿಸ್ಥಿತಿ ನೋಡಿ ಕೊಂಡು ಬೆಲೆ ಹೆಚ್ಚಳದ ಬಗ್ಗೆ ತಾವೇ ನಿರ್ಧರಿಸುತ್ತಾರೆ ಎಂದು ಸ್ಥಳೀಯ ಹೋಟೆಲ್ ಉದ್ಯಮದವರು ಹೇಳಿದ್ದಾರೆ.
ನಿರಂತರ ಪೆಟ್ರೋಲ್ – ಡೀಸೆಲ್ ಬೆಲೆ ಏರಿಕೆಯಿಂದಾಗಿ ದಿನಸಿ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೆ, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 2 ಸಾವಿರದ ಗಡಿ ದಾಟಿದೆ. ಬಾಡಿಗೆಯಿಂದ ಹಿಡಿದು ಕಾರ್ಮಿಕರ ವೇತನದವರೆಗೆ ಹತ್ತು ಹಲವು ಹೊರೆಗಳೂ ಹೋಟೆಲ್ ಉದ್ಯಮದ ಮೇಲಿವೆ. ಇಷ್ಟಾದರೂ ಸಹ, ಬೆಲೆ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಲು ಹೋಟೆಲ್ ಉದ್ಯಮಕ್ಕೆ ಸವಾಲುಗಳಿವೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಹೋಟೆಲ್ ಉದ್ದಿಮೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಕೆ. ಸುಬ್ರಮಣ್ಯ, ಸಂಘದ ವತಿಯಿಂದ ಬೆಲೆ ಏರಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ಹಿಂದೆ ಸಂಘ ಯಾವತ್ತೂ ಬೆಲೆ ಏರಿಕೆಯ ಬಗ್ಗೆ ಸೂಚನೆ ನೀಡುವ ಪದ್ಧತಿ ಹೊಂದಿಲ್ಲ ಎಂದಿದ್ದಾರೆ.
ಆದರೆ, ಅಡುಗೆ ಅನಿಲ ಸಿಲಿಂಡರ್, ದಿನಸಿ ಸೇರಿದಂತೆ ಹಲವಾರು ಬೆಲೆಗಳು ಏರಿಕೆಯಾಗಿರುವು ದರಿಂದ ಹೋಟೆಲ್ಗಳ ಮೇಲಿನ ಹೊರೆ ಹೆಚ್ಚಾಗಿರುವುದು ನಿಜ. ತಿನಿಸುಗಳ ಬೆಲೆ ಏರಿಕೆಯ ಬಗ್ಗೆ ಹೋಟೆಲ್ಗಳು ತಾವೇ ನಿರ್ಧಾರ ತೆಗೆದುಕೊಳ್ಳಲಿವೆ ಎಂದಿದ್ದಾರೆ.
ಹೋಟೆಲ್ ಉದ್ದಿಮೆದಾರರ ಸಂಘದ ಗೌರವಾಧ್ಯಕ್ಷ ಅಣಬೇರು ರಾಜಣ್ಣ ಮಾತನಾಡುತ್ತಾ, ನಮ್ಮ ಹೋಟೆಲ್ನಲ್ಲಿ ಯಾವುದೇ ಬೆಲೆ ಏರಿಕೆ ಮಾಡಿಲ್ಲ. ವರ್ಷಕ್ಕೊಮ್ಮೆ ಇಲ್ಲವೇ ಎರಡು ವರ್ಷಕ್ಕೊಮ್ಮೆ ಪರಿಸ್ಥಿತಿಗೆ ಅನುಗುಣವಾಗಿ ತಿನಿಸುಗಳ ಬೆಲೆ ಹೆಚ್ಚಿಸುವುದು ನಮ್ಮ ಪದ್ಧತಿ ಎಂದಿದ್ದಾರೆ. ಬೆಂಗಳೂರು ಹಾಗೂ ಇಲ್ಲಿನ ಪರಿಸ್ಥಿತಿ ಬೇರೆಯಾಗಿದೆ. ಬೆಂಗಳೂರಿಗೆ ಸೀಮಿತವಾಗಿ ಅಲ್ಲಿನ ಹೋಟೆಲ್ನವರು ಒಂದೇ ದಿನ ಬೆಲೆ ಹೆಚ್ಚು ಮಾಡಿಕೊಂಡಿರಬಹುದು. ಇಲ್ಲಿ ಆ ರೀತಿಯ ಸಾಧ್ಯತೆ ಇಲ್ಲ ಎಂದೂ ಅವರು ಹೇಳಿದ್ದಾರೆ.
ಕೊರೊನಾದ ಲಾಕ್ಡೌನ್ ಕಾರಣದಿಂದಾಗಿ ಹೋಟೆಲ್ ವಲಯದ ಆದಾಯ ಕಡಿಮೆಯಾಗಿದೆ. ಆದರೆ, ಖರ್ಚುಗಳು ಯಾವೂ ಕಡಿಮೆಯಾಗಿಲ್ಲ. ಬಾಡಿಗೆಯಿಂದ ಹಿಡಿದು ಕೂಲಿಯವರೆಗೆ ವೆಚ್ಚಗಳು ಏರಿಕೆಯಾಗುತ್ತಲೇ ಇವೆ ಎಂದು ಕಾಂಡಿಮೆಂಟ್ಸ್ ಅಂಗಡಿಯ ಎನ್. ಶ್ರೀನಿವಾಸ್ ತಿಳಿಸಿದ್ದಾರೆ.
ಬೆಲೆ ಏರಿಕೆ ಹಾಗೂ ಗ್ರಾಹಕರನ್ನು ನಿಭಾಯಿಸುವ ಅಡಕತ್ತರಿಯಲ್ಲಿ ಹೋಟೆಲ್ ಉದ್ಯಮ ಸಿಲುಕಿದೆ. ಇತ್ತೀಚೆಗಷ್ಟೇ ತೈಲ ಬೆಲೆ ಇಳಿಕೆ ಮಾಡಿರುವುದು ಹಾಗೂ ಆರ್ಥಿಕ ಚೇತರಿಕೆ ಕಾಣುತ್ತಿರುವುದು ಹೋಟೆಲ್ ಉದ್ಯಮಕ್ಕೆ ತುಸು ಸಮಾಧಾನ ತರಬಹುದಾಗಿದೆ.