ದಾವಣಗೆರೆ, ನ.11- ಅತ್ಯಂತ ತರಾತುರಿಯಲ್ಲಿ ಎನ್‍ಇಪಿ-2020ರ ಹೇರಿಕೆ ಖಂಡಿಸಿ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ಒದಗಿಸಲು ಆಗ್ರಹಿಸಿ ನಗರದಲ್ಲಿಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್‍ಓ) ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಯದೇವ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳು, ಎಐಡಿಎಸ್‍ಓ ಪದಾಧಿಕಾರಿಗಳು, ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಪ್ರತಿಭಟನಾ ದಿನದ ಅಂಗವಾಗಿ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಯಿಂದ ಜಿಲ್ಲಾಧಿಕಾರಿಗಳ ಮುಖಾಂ ತರ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಜಾರಿಗೆ ತರುತ್ತಿರುವ ರಾಜ್ಯ ಸರ್ಕಾರ ಹಿಂದಿನ ಶೈಕ್ಷಣಿಕ ನೀತಿಯಲ್ಲಿ ಯಾವ ಲೋಪ-ದೋಷಗಳಿದ್ದವು, ಯಾವ ಕಾರಣಕ್ಕೆ ನೂತನ ನೀತಿಯ ಅನುಷ್ಠಾನ ಆಗುತ್ತಿದೆ ಎಂಬ ವಿಷಯಗಳ ಬಗ್ಗೆ ಯಾವುದೇ ಉತ್ತರ ನೀಡಿಲ್ಲ. ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯದಲ್ಲಿ ಎನ್‍ಇಪಿ-2020 ಅನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. ಈ ನೀತಿಯನ್ನು ರಾಜ್ಯದ ಶಿಕ್ಷಣ ತಜ್ಞರು, ಉಪನ್ಯಾಸಕರು, ಸಾಹಿತಿಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ವ್ಯಾಪಕವಾಗಿ ವಿರೋಧಿಸಿದರೂ ಅಪ್ರಜಾತಾಂತ್ರಿಕವಾಗಿ, ತರಾತುರಿಯಲ್ಲಿ ಶಿಕ್ಷಣ ನೀತಿಯನ್ನು ಸರ್ಕಾರ ಜಾರಿ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಯಾವುದೇ ಪೂರ್ವಭಾವಿ ತಯಾರಿ ಇಲ್ಲದೇ ಏಕಾಏಕಿ ಎನ್‍ಇಪಿ-2020ರ ಭಾಗವಾಗಿರುವ ನಾಲ್ಕು ವರ್ಷದ ಪದವಿ ಕೋರ್ಸ್ ಅನ್ನು ಅನುಷ್ಠಾನಕ್ಕೆ ತಂದಿದ್ದು, ತರಗತಿಗಳು ಆರಂಭವಾಗಿದ್ದರೂ ಸಹ ಸರ್ಕಾರದ ಬಳಿ ಪಠ್ಯಕ್ರಮ ತಯಾರಿಲ್ಲ, ಪಠ್ಯಪುಸ್ತಕಗಳು ಇಲ್ಲ. ಆ ಮೂಲಕ ರಾಜ್ಯದ ಶಿಕ್ಷಕ ವರ್ಗ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅಂಧಕಾರದಲ್ಲಿದೆ ಎಂದು ಎಐಡಿಎಸ್‍ಓನ ಪೂಜಾ ನಂದಿಹಳ್ಳಿ ಅಭಿಪ್ರಾಯಪಟ್ಟರು.
ಈ ನೀತಿಯಲ್ಲಿ ಪ್ರಸ್ತಾಪವಾಗಿರುವ ಹಲವು ಅಂಶಗಳು ನೇರವಾಗಿ ಶಿಕ್ಷಣದ ಖಾಸಗೀಕರಣ, ಕೇಂದ್ರೀಕರಣ ಹಾಗೂ ಕೋಮುವಾದಿಕರಣಕ್ಕೆ ಕಾರಣವಾಗುತ್ತದೆ ಎಂಬುದರ ಕುರಿತು ಅಭಿಪ್ರಾಯಗಳು ಬಂದಿವೆ. ಈ ಎಲ್ಲ ಕಾರಣಗಳಿಂದ, ರಾಜ್ಯ ಸರ್ಕಾರ ಶಿಕ್ಷಣದಲ್ಲಿ ಹೇರಿರುವ ಎನ್‍ಇಪಿ-2020 ಅನ್ನು ವಾಪಸ್ ಪಡೆಯಬೇಕು. ಸರ್ಕಾರ ಶಾಲಾ ಕಾಲೇಜು ಶುಲ್ಕದ ಜೊತೆ ಬಸ್‍ಪಾಸ್ ಶುಲ್ಕವನ್ನು ಕಟ್ಟಬೇಕು ಎಂಬ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸಬಾರದು. ಈ ವರ್ಷ ಎಲ್ಲ ವಿದ್ಯಾರ್ಥಿಗಳಿಗೂ ಬಸ್‍ಪಾಸ್ ಉಚಿತವಾಗಿ ನೀಡಬೇಕು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು, ಎಐಡಿಎಸ್‍ಓ ಪದಾಧಿಕಾರಿಗಳು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಕಾವ್ಯ, ಸೆಕ್ರೆಟರಿಯೇಟ್ ಸದಸ್ಯೆ ಪುಷ್ಪ, ತಿಪ್ಪೇಸ್ವಾಮಿ, ವಿದ್ಯಾರ್ಥಿಗಳಾದ ನವೀನ್, ವಿನೋದ್, ದರ್ಶನ್ ಸೇರಿದಂತೆ ಇತರರು ಭಾಗವಹಿಸಿದ್ದರು.