`ನಮ್ಮ ಕೆರೆಗಳು ಸಾಂಪ್ರದಾಯಿಕ ಜಲಕನ್ನಡಿಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಾಹಿತಿ ಡಾ.ಎಂ.ಜಿ. ಈಶ್ವರಪ್ಪ
ದಾವಣಗೆರೆ, ನ.7- ನದಿಯ ಅಥವಾ ಕೆರೆಗಳ ನೀರಿನ ಆಸರೆ ಇರುವ ಹೊಲಗಳನ್ನು `ನದಿ ಮಾತೃಕೆ’ ಎಂದೂ, ಬರೀ ಮಳೆಯನ್ನೇ ನಂಬಿಕೊಂಡಿರುವ ಹೊಲಗಳನ್ನು `ದೇವ ಮಾತೃಕೆ’ ಎಂದೂ ಕರೆಯಲಾಗುತ್ತದೆ. ಆದರೆ ಈಗ ನದಿ ಮಾತೃಕೆಗಳು ಬೋರ್ವೆಲ್ ಮಾತೃಕೆಗಳಾಗಿವೆ. ಭೂಮಿ ಒಳಗಿನ ಜಲವನ್ನು ಹೊರಕ್ಕೆ ತೆಗೆದು ವ್ಯವಸಾಯ ಮಾಡುವ ಮೂಲಕ ದೇವಮಾತೃಕೆಯ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಜನಪದ ಸಾಹಿತಿಗಳೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಡಾ.ಎಂ.ಜಿ ಈಶ್ವರಪ್ಪ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಶ್ರೀ ಸಿದ್ಧಗಂಗಾ ವಿದ್ಯಾ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ `ನಮ್ಮ ಕೆರೆಗಳು ಸಾಂಪ್ರದಾಯಿಕ ಜಲಕನ್ನಡಿಗಳು’ ದಾವಣಗೆರೆ ಜಿಲ್ಲೆಯ ಕೆರೆಗಳ ಸಮಗ್ರ ಸಂಪುಟ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪುರಾತನ ಶಾಸನವೊಂದರಲ್ಲಿ `ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ ಜ್ಜರೆಯೊಳ್ ಸಿಲ್ಕಿದನಾಥರಂ ಬಿಡಿಸು’ ಎಂದು ತಾಯಿಯೊಬ್ಬಳು ತನ್ನ ಮಗುವಿಗೆ ಹೇಳುತ್ತಾಳೆ. ಹಳ್ಳಿಗಳಲ್ಲಿ ಕೆರೆಗಳು ಸಹಜ ಹಾಗೂ ಸರಳವಾದವು. ಗೌಡ್ರು, ರಾಜರು, ಪಾಳೆಯಗಾರರು, ಸಾಮಂತರು ಕೆರೆಗಳನ್ನು ಕಟ್ಟಿಸುತ್ತಿದ್ದರು. ಕೆರೆ ಕಟ್ಟಿಸುವುದು ಸಮಾಜದಲ್ಲಿ ಮಾಡಬೇಕಾದ ಉತ್ತಮ ಕೆಲಸ ಎಂದು ಈಶ್ವರಪ್ಪ ಪ್ರತಿಪಾದಿಸಿದರು.
ತಮಗೆ ಬೇಕಾದ ವಸ್ತುವನ್ನು ಸಾಹಿತ್ಯವಾಗಿ ಮಾರ್ಪಡಿಸಿ ಅಕ್ಷರ ರೂಪಕ್ಕೆ ತಂದರೆ ಅದು ಸಾಹಿತ್ಯವಾಗುತ್ತದೆ. ಹಾಗೆಯೇ ಬಸವರಾಜ ಕುಂಚೂರು ಅವರು ಕೆರೆಗಳ ಸಾಹಿತ್ಯವನ್ನು ಉಣಬಡಿಸಿದ್ದಾರೆ. ಇಂಜಿನಿಯರಿಂಗ್ ಪದವೀಧರ ರಾಗಿ ಅವರು ಇಂತಹದ್ದೊಂದು ಮಹತ್ತರವಾದ ಕೃತಿ ರಚಿಸಿರುವುದು ಮಾಡಿದ್ದು ನಮಗೆ ಆಶ್ಚರ್ಯವನ್ನೂ ಸಂತೋಷವನ್ನೂ ಉಂಟು ಮಾಡಿದೆ ಎಂದರು.
ಕರ್ನಾಟಕದಲ್ಲಿ 36 ಸಾವಿರ ಕೆರೆಗಳನ್ನು ಗುರುತು ಮಾಡಿದ್ದ ಮೇಜರ್ ಸ್ಯಾಂಕಿ, ಪುರಾತತ್ವ ಸಂಶೋಧನೆಗಳಲ್ಲಿ ಬಿ.ಎಲ್. ರೈಸ್, ಹಿಂದಿನವರ ಕೃಷಿ, ನೀರಿನ ಸದ್ಭಳಕೆ, ವ್ಯಾಪಾರದ ಚತುರತೆ, ಧಾರ್ಮಿಕ ಪದ್ಧತಿ ಬಗ್ಗೆ ಸಂಶೋಧನೆ ನಡೆಸಿದ್ದ ಫ್ರಾನ್ಸ್ನ ಬುಕ್ಕನನ್ ಅವರು ಮಾಡಿದಂತಹ ಕೆಲಸವನ್ನು ಬಸವರಾಜ ಕುಂಚೂರು ಮಾಡಿದ್ದಾರೆ ಎಂದು ಶ್ಲ್ಯಾಘಿಸಿದರು.
ಕೆರೆಗಳ ಚೌಕಟ್ಟುಗಳನ್ನು ಅಧ್ಯಯನ ಮಾಡಿ, ಅದರ ಆಳ ಅಗಲ, ವಿಸ್ತೀರ್ಣ, ಐತಿಹ್ಯಗಳನ್ನು ಫೋಟೋಗಳ ಸಹಿತ ನಿಖರವಾಗಿ ಕೃತಿಯಲ್ಲಿ ನೀಡಲಾಗಿದೆ. ಕುಂಚೂರು ಅವರ ಅಗಾಧ ಪರಿಶ್ರಮ, ತಪ್ಪಿನ ಫಲವೇ ಈ ಕೃತಿ. ಕೆರೆಗಳ ಅಧ್ಯಯನ ಸುಲಭವಾದ ಮಾತಲ್ಲ. ನಿರಂತರಶ್ರಮದಿಂದ ಮಾಡುವ ಕೆಲಸವಾಗದ್ದು, ಅಂತಹ ಕೆಲಸವನ್ನು ಅವರು ಮಾಡಿದ್ದಾರೆ. ಅವರನ್ನು ವಿಶ್ವವಿದ್ಯಾಲಯಗಳು ಗುರುತಿಸಿ ಗೌರವಿಸಲಿ ಎಂದು ಆಶಿಸಿದರು.
ಲೇಖಕ ಬಸವರಾಜ ಕುಂಚೂರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಹಳ್ಳಿಗಳಿಗೆ ಕೆರೆಗಳೇ ಕಾಮಧೇನು, ಕಲ್ಪವೃಕ್ಷ. ಕೆರೆಗಳು ತುಂಬಿ ಕೋಡಿ ಬಿದ್ದರೆ ಅದೇ ದೊಡ್ಡ ಸಂಭ್ರಮ. ದೇಶೀಯ ಸಂಸ್ಕೃತಿಕ ರಚನೆ, ಹಳ್ಳಿಗಳಿಗೆ ಬೇಕಾದ ತಂತ್ರಜ್ಞಾನ ಕೆರೆಗಳಲ್ಲಿದೆ ಎಂದರು. ಕೆರೆಗಳ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಡಾ.ಮಂಜುನಾಥ ಗೌಡ್ರ ಅವರನ್ನು ಸ್ಮರಿಸಿದರು.
ಕ.ಸಾ.ಪ. ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಹಿರಿಯ ಸಾಹಿತಿಗಳನ್ನು, ವಿದ್ವಾಂಸರನ್ನು ಗೌರವಿಸುವ ಕೆಲಸವನ್ನು ಕ.ಸಾ.ಪ. ಮಾಡುತ್ತದೆ ಎಂದರು.
ಹಿರಿಯ ಸಾಹಿತಿಗಳೂ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ ಆದ ಪ್ರೊ.ಎಸ್.ಬಿ. ರಂಗನಾಥ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಕರ್ತ ಬಿ.ಎನ್. ಮಲ್ಲೇಶ್, ಸಾಹಿತಿ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಡಾ.ಬುರುಡೆಕಟ್ಟೆ ಮಂಜಪ್ಪ ಅವರುಗಳು ಕೆರೆಗಳ ಕೆರೆಗಳ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ಡಾ.ಪ್ರಭಾ ಮಲ್ಲಿಕಾರ್ಜುನ್, ದಿ.ಡಾ.ಮಂಜುನಾಥಗೌಡ ಅವರ ಪತ್ನಿ ಶ್ರೀಮತಿ ಮಂಜುಳ, ಸಾಹಿತಿ ಹಿ.ಗೂ. ದುಂಡ್ಯಪ್ಪ, ಪಾಲಿಕೆ ಸದಸ್ಯ ಎಸ್.ಬಿ. ರುದ್ರಗೌಡ ಉಪಸ್ಥಿತರಿದ್ದರು. ಕೆ.ಹೆಚ್. ಸದಾಶಿವ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕ ಕೆ.ಸಿದ್ದಪ್ಪ ನಿರೂಪಿಸಿದರು. ಸಿದ್ಧಗಂಗಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಸೃಷ್ಟಿ, ಸಿಂಚನ, ಕಾವ್ಯ ಪ್ರಾರ್ಥಿಸಿದರು.