ಸುಲಭ, ಶೀಘ್ರ, ಶುಲ್ಕ ರಹಿತ ಪ್ರಕರಣ ಇತ್ಯರ್ಥ: ನ್ಯಾ. ಗೀತಾ
ದಾವಣಗೆರೆ, ಮಾ. 5 – ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಲಭ, ಶೀಘ್ರ ಹಾಗೂ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಳ್ಳಲು ನಡೆಸಲಾಗುವ ಬೃಹತ್ ಲೋಕ್ ಅದಾಲತ್ ಮಾರ್ಚ್ 27ರ ಶನಿವಾರದಂದು ನಡೆಯಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯ ಮೂರ್ತಿ ಕೆ.ಬಿ. ಗೀತಾ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿರುವ ಅವರು, ಕಳೆದ ಎರಡು ಬೃಹತ್ ಲೋಕ್ ಅದಾಲತ್‌ಗಳ ಸಮಯದಲ್ಲಿ ಕೊರೊನಾ ನಿರ್ಬಂಧಗಳಿದ್ದವು. ಈ ಬಾರಿ ನಿರ್ಬಂಧಗಳನ್ನು ಬಹುತೇಕ ಸಡಿಲಿಸಿರುವುದರಿಂದ ಹೆಚ್ಚಿನ ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ಕೊರೊನಾದಿಂದಾಗಿ 2020ರಲ್ಲಿ ನಡೆದ ಎರಡು ಲೋಕ್ ಅದಾಲತ್‌ಗಳನ್ನು ಆನ್‌ಲೈನ್ ಮೂಲಕ ನಡೆಸಲಾಗಿತ್ತು. ಆದರೂ, ಸೆಪ್ಟೆಂಬರ್ 19ರಂದು ನಡೆದ ಇ – ಲೋಕ್ ಅದಾಲತ್‌ನಲ್ಲಿ ಜಿಲ್ಲೆಯಲ್ಲಿ 4.47 ಕೋಟಿ ರೂ. ಮೌಲ್ಯದ 4,921 ಪ್ರಕರಣಗಳು ಇತ್ಯರ್ಥವಾಗಿದ್ದವು. ಡಿಸೆಂಬರ್ 19ರಂದು ನಡೆದ ಇ- ಲೋಕ್ ಅದಲಾತ್‌ನಲ್ಲಿ 10.16 ಕೋಟಿ ರೂ. ಮೌಲ್ಯದ 3,988 ಪ್ರಕರಣಗಳು ಇತ್ಯರ್ಥಗೊಂಡಿದ್ದವು ಎಂದವರು ತಿಳಿಸಿದರು.
ಶುಲ್ಕ, ಮೇಲ್ಮನವಿ ಇಲ್ಲ
ಲೋಕ್ ಅದಾಲತ್‌ನಲ್ಲಿ ಉಭಯ ಪಕ್ಷಗಾರರಿಗೆ ಒಪ್ಪಿಗೆ ಇದ್ದರೆ ಮಾತ್ರ ಇತ್ಯರ್ಥಪಡಿಸಲಾಗುತ್ತದೆ. ಇಂತಹ ತೀರ್ಪುಗಳನ್ನು ಮತ್ತೆ ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸುವಂತಿಲ್ಲ. ಲೋಕ್ ಅದಾಲತ್ ಎದುರು ಪ್ರಕರಣ ತರಲು ಶುಲ್ಕವೂ ಇಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಮೂರ್ತಿ ಕೆ.ಬಿ. ಗೀತಾ ತಿಳಿಸಿದ್ದಾರೆ. ಅಪಘಾತಕ್ಕೆ ಸಂಬಂಧಿಸಿದ ಪರಿಹಾರ ಪ್ರಕರಣಗಳು, ಪಾಲು ವಿಭಾಗದ ದಾವೆ, ಹಣ ವಾಪಸಾತಿ, ಬಾಡಿಗೆ ವಿವಾದ, ಸಿವಿಲ್ ವ್ಯಾಜ್ಯಗಳು, ರಾಜೀ ಮಾಡಿಕೊಳ್ಳಬಹು ದಾದ ಕ್ರಿಮಿನಲ್ ಪ್ರಕರಣಗಳು, ಚೆಕ್ ಬೌನ್ಸ್, ಜೀವನಾಂಶ ಪ್ರಕರಣಗಳು ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಲೋಕ್ ಅದಾಲತ್‌ನಲ್ಲಿ ಇತ್ಯರ್ಥಪಡಿಸಿ ಕೊಳ್ಳಬಹುದು. ಕೌಟುಂಬಿಕ ಕಲಹಗಳ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾದರೂ ವಿಚ್ಛೇದನ ಪ್ರಕರಣಗಳಿಗೆ ಅವಕಾಶವಿಲ್ಲ.
ಹೆಚ್ಚಿನ ವಿವರಗಳಿಗಾಗಿ [email protected] ಇ-ಮೇಲ್ ತಾಣ ಸಂಪರ್ಕಿಸಬಹುದು. 08192 – 296364, 99649 24792ಗೆ ಕರೆ ಮಾಡಬಹುದು.
ಮಾ. 27ರಂದು ನಡೆಯಲಿರುವ ಲೋಕ್ ಅದಾಲತ್‌ನಲ್ಲಿ ಹೆಚ್ಚಿನ ನಿರ್ಬಂಧಗಳು ಇರುವುದಿಲ್ಲ. ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಕೆ ನಿರ್ಬಂಧಗಳು ಮಾತ್ರ ಇರುತ್ತವೆ. ಕಕ್ಷಿದಾರರು ನ್ಯಾಯಾಲಯಕ್ಕೆ ಬರಬಹುದು ಅಥವಾ ಬಾರದೆಯೂ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಪ್ರಕರಣ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ ಎಂದು ನ್ಯಾಯಮೂರ್ತಿ ಗೀತಾ ವಿವರಿಸಿದ್ದಾರೆ.
ಹೀನ ಅಪರಾಧಗಳಂತಹ ಗಂಭೀರ ಕೃತ್ಯಗಳಿಗೆ ಲೋಕ್ ಅದಾಲತ್‌ನಲ್ಲಿ ಅವಕಾಶ ಇರುವುದಿಲ್ಲ. ವಿಚ್ಛೇದನ ಪ್ರಕರಣಗಳನ್ನೂ ಇಲ್ಲಿ ಇತ್ಯರ್ಥಪಡಿಸುವುದಿಲ್ಲ ಎಂದು ಹೇಳಿದರು.
ಕೊರೊನಾ ಸಂದರ್ಭದಲ್ಲಿ ಜನರ ಆದಾಯ ಕಡಿಮೆ ಇದೆ. ಇಂತಹ ಸಂದರ್ಭದಲ್ಲಿ ಲೋಕ್ ಅದಾಲತ್ ಬಳಸಿಕೊಂಡರೆ ಕಕ್ಷಿದಾರರಿಗೆ ಹಾಗೂ ವಕೀಲರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಇಲ್ಲಿ ರಾಜೀ ಮಾಡಿಕೊಳ್ಳುವ ಪ್ರಕರಣಗಳ ನ್ಯಾಯಾಲಯಗಳ ಶುಲ್ಕ ಮರುಪಾವತಿ ಮಾಡಲಾಗುವುದು ಎಂದವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್ ನ್ಯಾಯಮೂರ್ತಿ ಪ್ರವೀಣ್ ನಾಯಕ್ ಮಾತನಾಡಿ, ಪ್ರಕರಣಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಇತ್ಯರ್ಥಪಡಿಸಲು ಈಗಾಗಲೇ ಪೊಲೀಸರು, ಬ್ಯಾಂಕ್ ಅಧಿಕಾರಿಗಳು ಮತ್ತಿತರರ ಜೊತೆ ಚರ್ಚೆಗಳನ್ನು ನಡೆಸಲಾಗಿದೆ. ಪ್ರಕರಣ ವಿಲೇವಾರಿಗೆ ಗರಿಷ್ಠ ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದ್ದಾರೆ.