ಗ್ರಾಮೀಣ ಕಲಾವಿದರ ಸಿಜಿಕೆ ಹಾಗೂ ಗ್ರಾಮೀಣ ಕಲಾವಿದರುಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯರಗುಂಟೆ ಶ್ರೀ ಕ್ಷೇತ್ರದ ಶ್ರೀ ಪರಮೇಶ್ವರ ಸ್ವಾಮೀಜಿ
ದಾವಣಗೆರೆ, ನ.7- ಸಂಗೀತದಿಂದ ಶಾಂತಿ, ನೆಮ್ಮದಿ, ತಾಯಿಯಿಂದ ಶಿಸ್ತು ಕಲಿಯಲು ಸಾಧ್ಯ ಎಂದು ಯರಗುಂಟೆ ಶ್ರೀ ಕ್ಷೇತ್ರದ ಶ್ರೀ ಪರಮೇಶ್ವರ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕರ್ನಾಟಕ ರಂಗ ಪರಿಷತ್ತು ಕೇಂದ್ರ ಸಮಿತಿ, (ಬೆಂಗಳೂರು) ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ಹಮ್ಮಿಕೊಂಡಿದ್ದ ಸಿಜಿಕೆ ಹಾಗೂ ಗ್ರಾಮೀಣ ಕಲಾವಿದರುಗಳಿಗೆ ಪ್ರಶಸ್ತಿ ಪ್ರದಾನ ಮತ್ತು ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಪ್ರಶಸ್ತಿಯನ್ನು ಬೆನ್ನತ್ತಿ ಹೋಗಬಾರದು. ದುಡ್ಡು ಕೊಟ್ಟು ಪ್ರಶಸ್ತಿ ಪಡೆದುಕೊಳ್ಳುವುದು ಬೇಡ. ಮನು ಷ್ಯನಿಗೆ ಆಸೆ ಇರಬೇಕು. ಆದರೆ ದುರಾಸೆ ಇರಬಾ ರದು ಎಂದರು. ಕಲಾವಿದರು ಯಾವುದೇ ದುಶ್ಚಟ ಗಳಿಗೆ ಬಲಿಯಾಗದೆ, ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಮಾತನಾಡಿ, ವಿಶ್ವ, ರಾಜ್ಯ, ರಾಷ್ಟ್ರ, ಸಮಾಜವನ್ನು ಸುಧಾರಣೆ ಮಾಡುವ ಮೊದಲು ನಾವು ನಮ್ಮನ್ನು ಅರಿತು, ನಮ್ಮನ್ನು ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಹಣ ಮತ್ತು ಅಧಿಕಾರದಿಂದ ಭಾವೈಕ್ಯತೆ ಬೆಸೆಯಲು ಸಾಧ್ಯವಿಲ್ಲ. ಆದರೆ, ಭಾವೈಕ್ಯತೆ ಬೆಸೆಯುವ ಮಹತ್ತರ ಕೆಲಸದಲ್ಲಿ ತೊಡಗಿರುವವರು ಕಲಾವಿದರು ಮಾತ್ರ. ಅವರು ಭಾವೈಕ್ಯತೆಯ ನೇತಾರರು ಎಂದು ಪ್ರಶಂಸಿಸಿದರು.
ಕಸಾಪ ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷ ಬಿ. ವಾಮದೇವಪ್ಪ, ಸಾಹಿತಿ ಎನ್.ಟಿ. ಯರಿಸ್ವಾಮಿ, ಹೆಚ್.ಕೆ. ಸತ್ಯಭಾಮ, ಕಸಾಪ ನಿಕಟಪೂರ್ವ ಖಜಾಂಚಿ ಬಿ. ದಿಳ್ಳೆಪ್ಪ, ಕದಳಿ ವೇದಿಕೆ ನಗರಾಧ್ಯಕ್ಷರಾದ ವಿನೋದ ಅಜಗಣ್ಣನವರ್, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಮಾತನಾಡಿದರು.
ಸನ್ಮಾನಿತರ ಪರವಾಗಿ ಬಿ.ಇ. ತಿಪ್ಪೇಸ್ವಾಮಿ, ಹೆಗ್ಗೆರೆ ರಂಗಪ್ಪ, ಸತ್ತೂರು ಹನುಮಂತಪ್ಪ ಮಾತನಾಡಿದರು.
ಇದೇ ಸಂದರ್ಭದಲ್ಲಿ ರಂಗಕರ್ಮಿ ಬಿ.ಇ. ತಿಪ್ಪೇಸ್ವಾಮಿ ಅವರಿಗೆ `ಸಿಜಿಕೆ’ ಪ್ರಶಸ್ತಿ, ದಾವಣಗೆರೆ ಅರ್ಬನ್ ಬ್ಯಾಂಕ್ ಉದ್ಯೋಗಿ ಎಂ. ಬಸವರಾಜ್ ಅವರಿಗೆ ` ಕರುನಾಡ ಧ್ರುವತಾರೆ’ ಹಾಗೂ ಸತ್ತೂರು ಹನುಮಂತಪ್ಪ ಅವರಿಗೆ` ಕಾಯಕ ಜೀವಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲಾವಿದ ಕೆ. ಕುಬೇರಪ್ಪ ಪ್ರಾರ್ಥಿಸಿದರು. ನಂದಿಗುಡಿ ಬಸವೇಶ್ವರ ಮಹಿಳಾ ಕಲಾವಿದರು ಭಜನೆ ಹಾಡಿದರು. ಕುಂಬಳೂರು ಹೆಚ್.ಎಂ. ಸದಾನಂದ ಹಾಗೂ ವಾಣಿ ನಿರೂಪಿಸಿದರು. ಸ್ಫೂರ್ತಿ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ಎನ್.ಎಸ್. ರಾಜು ಸ್ವಾಗತಿಸಿದರು.