ಪಟಾಕಿ ವ್ಯಾಪಾರ ಕಡಿಮೆ
ನಗರದ ಹೈಸ್ಕೂಲ್ ಮೈದಾನದಲ್ಲಿ 52 ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅವಕಾಶ ನೀಡಲಾಗಿದೆ. ಬುಧವಾರ ಪಟಾಕಿ ಖರೀದಿಗೆ ಅಷ್ಟಾಗಿ ಗ್ರಾಹಕರು ಮುಂದಾಗಿರಲಿಲ್ಲವಾದರೂ, ಶುಕ್ರವಾರ ಬಲಿಪಾಡ್ಯ ಇರುವುದರಿಂದ ಮುಂದಿನ ಎರಡು ದಿನಗಳು ಪಟಾಕಿ ಖರೀದಿ ಹೆಚ್ಚಾಗುವ ನಿರೀಕ್ಷೆ ಇದೆ.
ಎಂ.ಆರ್.ಪಿ. ದರಕ್ಕಿಂತ ಶೇ.50ರಷ್ಟು ಕಡಿಮೆ ದರಕ್ಕೆ ಪಟಾಕಿ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶವಿದೆಯಾದರೂ, ಪಾಲನೆಯಾಗದೇ ಇರುವುದು ಕಂಡು ಬಂತು.
ದಾವಣಗೆರೆ, ನ.3- ಹಣತೆ ಹಚ್ಚಿ, ಪಟಾಕಿ ಸಿಡಿಸಿ ಸಂಭ್ರಮಿ ಸುವ ದೀಪಾವಳಿ ಹಬ್ಬಕ್ಕೆ ಎಲ್ಲೆಡೆ ಭರದ ಸಿದ್ಧತೆ ಆರಂಭಗೊಂಡಿದೆ. ನರಕ ಚತುರ್ದಶಿಯನ್ನು ಬುಧವಾರ ಆಚರಿಸಿರುವ ಜಿಲ್ಲೆಯ ಜನತೆ, ದೀಪಾವಳಿ ಸಂಭ್ರಮಿಸಲು ಅಗತ್ಯ ತಯಾರಿ ನಡೆಸಿದ್ದಾರೆ.
ಖರೀದಿ ಜೋರು: ದೀಪಾವಳಿ ಹಬ್ಬಕ್ಕೆ ಬೇಕಾದ ಕಾಚಿಕಡ್ಡಿ, ಮಾವಿನ ಸೊಪ್ಪು, ಬಾಳೆ ಕಂಬ, ಹೂ ಮತ್ತಿತರೆ ವಸ್ತುಗಳ ಮಾರಾಟ ಬುಧವಾರ ತಡರಾತ್ರಿ ವರೆಗೂ ನಡೆಯಿತು. ಮಂಡಿಪೇಟೆ, ಚಾಮರಾಜ ವೃತ್ತ, ಹೈಸ್ಕೂಲ್ ಮೈದಾನ, ಪಿ.ಬಿ. ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಿ ದೇವಸ್ಥಾನ ಬಳಿ, ಹೊಂಡದ ವೃತ್ತ, ಜಿಲ್ಲಾ ಕ್ರೀಡಾಂಗಣದ ಬಳಿ ಸೇರಿ ದಂತೆ ಪ್ರಮುಖ ವೃತ್ತಗಳಲ್ಲಿ ವ್ಯಾಪಾರದ ಭರಾಟೆ ಹೆಚ್ಚಾಗಿತ್ತು.
ಪ್ರಮುಖ ವೃತ್ತ ಹಾಗೂ ರಸ್ತೆಗಳ ಬದಿಯಲ್ಲಿಯೇ ಹಳ್ಳಿಗರು ಅಗತ್ಯ ವಸ್ತುಗಳ್ನು ಮಾರಾಟಕ್ಕೆ ಇಟ್ಟಿದ್ದರಿಂದ ಆರ್.ಹೆಚ್. ಛತ್ರ ಹಾಗೂ ಜಿಲ್ಲಾ ಕ್ರೀಡಾಂಗಣದ ಬಳಿ ಸಂಜೆ ವಾಹನ ಸಂಚಾರಕ್ಕೆ ಅಡೆ ತಡೆಯುಂಟಾಗುತ್ತಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ವಾಹನ ಸಂಚಾರ ಹೆಚ್ಚಾಗಿತ್ತು.
ರಿಯಾಯಿತಿ ಆಕರ್ಷಣೆ: ಮೊಬೈಲ್, ಎಲೆಕ್ಟ್ರಾನಿಕ್ಸ್ ಅಂಗಡಿಗಳು, ಬಟ್ಟೆ ಅಂಗಡಿಗಳು, ಚಿನ್ನದ ಅಂಗಡಿಗಳಲ್ಲಿ ಹಬ್ಬಕ್ಕಾಗಿ ವಿಶೇಷ ರಿಯಾಯಿತಿ ಘೋಷಿಸಿದ್ದವು. ಅಂಗಡಿ ಮಳಿಗೆಗಳ ಮುಂಭಾಗ ಬಲೂನು, ವಿದ್ಯುತ್ ದೀಪಗಳಿಂದ ಅಲಂಕರಿಸಿ, ಗ್ರಾಹಕರನ್ನು ಸೆಳೆಯುತ್ದಿದ್ದರು. ಆದರೆ ಗ್ರಾಹಕರ ಸಂಖ್ಯೆ ವಿರಳವಾಗಿತ್ತು.
ಆಕಾಶ ಬುಟ್ಟಿಗಳ ಆಕರ್ಷಣೆ: ಮನೆಗಳ ಮುಂಭಾಗ ಅಂದದ ಆಕಾಶ ಬುಟ್ಟಿಗಳನ್ನು ತೂಗು ಹಾಕಲಾಗಿತ್ತು. ಅಂಗಡಿಗಳಲ್ಲಿ ವಿವಿಧ ಬಗೆಯ ಆಕಾಶಬುಟ್ಟಿಗಳ ಮಾರಾಟವೂ ನಡೆಯಿತು. ಬೀದಿ ಬದಿಗಳಲ್ಲಿ, ಮಾರುಕಟ್ಟೆಗಳಲ್ಲಿ ಹಣತೆ ಖರೀದಿ ಜೋರಾಗಿದೆ. ಬಗೆಬಗೆಯ ಹಣತೆ, ಗೂಡು ದೀಪಗಳು ಲಭ್ಯವಿದ್ದರೂ ಪರಿಸರಸ್ನೇಹಿ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ.
ಬಟ್ಟೆ ಅಂಗಡಿಗಳಲ್ಲಿ ಖರೀದಿ ಹೆಚ್ಚು: ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ತೊಡುವುದು ವಾಡಿಕೆ. ಅಲ್ಲದೆ ಹಿರಿಯರ ಪೂಜೆ ಮಾಡುವ ಪದ್ಧತಿ ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. ಸಂಜೆ ಮಳೆ ಆರಂಭವಾಗಿದ್ದರಿಂದ ವ್ಯಾಪಾರಕ್ಕೆ ತುಸು ತೊಂದರೆಯಾಗಿತ್ತು.