ದಾವಣಗೆರೆ, ನ.3- ನಗರದ ರೋಟರಿ ಬಾಲಭವನದಲ್ಲಿ ಬೆಂಗಳೂರಿನ ಸಮರ್ಥನಂ ಸಂಸ್ಥೆ, ಕರ್ನಾಟಕ ರಾಜ್ಯ ವಿಕಲಚೇತನರ ಆರ್ಪಿಡಿ ಟಾಸ್ಕ್ಪೋರ್ಸ್ ಸಂಘ-ಸಂಸ್ಥೆಗಳ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 250 ವಿಕಲಚೇತನರಿಗೆ ಫುಡ್ಕಿಟ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ವಿಕಲಚೇತನರು ಕೊರೊನಾ ಲಸಿಕೆ ಹಾಕಿಸಿಕೊಳ್ಳದಿರುವವರು ಮಹಾನಗರ ಪಾಲಿಕೆಗೆ ಮಾಹಿತಿ ನೀಡಿದರೆ ಅಂತವರ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗುವುದು ಎಂದರು.
ಲಸಿಕಾ ಕೇಂದ್ರಕ್ಕೆ ಬರಲು ಸಾಧ್ಯವಾಗದ ವಿಕಲಚೇ ತನರು ಮಾಹಿತಿ ನೀಡಬೇಕು. ಅವರಿಗೆ ಪಾಲಿಕೆಯಿಂದ ಲಸಿಕೆ ಹಾಕಲಾಗುವುದು. ಪಾಲಿಕೆಯಿಂದ ಸಿಗಬಹು ದಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ವೀರೇಶ್ ತಿಳಿಸಿದರು.
ಪ್ರತಿಯೊಬ್ಬ ವಿಕಲಚೇತನರಲ್ಲೂ ವಿಶೇಷ ಪ್ರತಿಭೆ ಅಡಗಿರುತ್ತದೆ. ಅದನ್ನು ಹೊರ ಹಾಕುವ ಪ್ರಯತ್ನವನ್ನು ಮಾಡಬೇಕು ಎಂದು ಸಲಹೆ ನೀಡಿದರು.
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಕೆ.ಕೆ. ಪ್ರಕಾಶ್ ಮಾತನಾಡಿ, ವಿಕಲಚೇತನರ ಬಳಿ ಅಂಗವಿಕಲರ ಪ್ರಮಾಣಪತ್ರವಿದ್ದರೂ, ಯುಡಿಐಡಿ ಕಾರ್ಡ್ ಇಲ್ಲದಿದ್ದರೆ, ಸರ್ಕಾರ ನಿಮ್ಮನ್ನು ಅಂಗವಿಕಲರು ಎಂದು ಪರಿಗಣಿಸುವುದಿಲ್ಲ. ಆದ್ದರಿಂದ ಕಡ್ಡಾಯವಾಗಿ ಕಾರ್ಡ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದರು.
ಒಕ್ಕೂಟದ ಕೆ.ಎಂ. ನಟರಾಜ್, ರಾಜ್ಯ ಉಪಾಧ್ಯಕ್ಷೆ ಎಂ. ವಿಜಯಲಕ್ಷ್ಮಿ, ಸಮರ್ಥನಂ ಸಂಸ್ಥೆಯ ದೇವರಾಜ್, ಗೋಪಾಲಪ್ಪ, ವರದಿಗಾರರ ಕೂಟದ ಪಿಆರ್ಓ ಡಿ. ರಂಗನಾಥರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಹನಾ ಪ್ರಾರ್ಥಿಸಿದರು. ರಾಘವೇಂದ್ರ ಸ್ವಾಗತಿಸಿದರು. ಮಂಜುಳಾ ಹಿರೇಮಠ ನಿರೂಪಿಸಿದರು.