ವಂಚನೆ, ಚೀಟಿ ವ್ಯವಹಾರಗಳ ಬಗ್ಗೆ ಎಚ್ಚರವಿರಲಿ: ಡಿವೈಎಸ್ಪಿ ತಾಮ್ರಧ್ವಜ

ದಾವಣಗೆರೆ, ನ.3- ನಗರದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಆನ್‍ಲೈನ್ ವಂಚನೆ, ಅಪರಾಧ ಪ್ರಕರಣಗಳ ತಡೆ ಹಾಗೂ ಸಾರ್ವಜನಿಕರ ರಕ್ಷಣೆಗೆ ಪೊಲೀಸ್ ಇಲಾಖೆ ಆಧುನಿಕ ತಂತ್ರಜ್ಞಾನದ ಮುಖೇನ ಜನಸ್ನೇಹಿಯಾಗಿ ಜನಸೇವೆಗೆ ಕಾರ್ಯಪ್ರವೃತ್ತವಾಗಿದೆ. ಈ ವಿಚಾರದಲ್ಲಿ ಸಾರ್ವಜನಿಕರ ಸಹಭಾಗಿತ್ವ, ಜಾಗರೂಕತೆಯೂ ಪ್ರಮುಖ ಪಾತ್ರ ವಹಿಸಲಿದೆ ಎಂದು ನಗರ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ತಿಳಿಸಿದರು.

ಅವರು, ಇಂದು ನಗರದ ಶಿವಯೋಗಿ ಮಂದಿರದಲ್ಲಿ ಸಂಜೆ ಬಸವ ಕೇಂದ್ರ, ಮುರುಘ ರಾಜೇಂದ್ರ ವಿರಕ್ತ ಮಠ, ಜಗದ್ಗುರು ಮುರುಘ ರಾಜೇಂದ್ರ ಶಿವಯೋಗ ಆಶ್ರಮ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶರಣ ಸಂಗಮದಲ್ಲಿ ಜನಸಾಮಾನ್ಯರಿಗಾಗಿ ಕಾನೂನು ಅರಿವು ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನಗರದಲ್ಲಿ ಆನ್‍ಲೈನ್ ವಂಚನೆ, ಸರಗಳ್ಳತನ, ಬೈಕ್‍ಗಳ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ. ಬೆಳೆಗ್ಗೆ ರಂಗೋಲಿ ಹಾಕುವ ಸಮಯದಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣಗಳು ನಡೆಯುತ್ತಿವೆ. ಈ ರೀತಿಯ ಸರಗಳ್ಳತನ ಮಾಡುವವರು ಹೊರ ರಾಜ್ಯದವರಾಗಿದ್ದು, ನಾಗರಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕಿವಿಮಾತು ಹೇಳಿದರು.

ಚನ್ನಗಿರಿ ತಾಲ್ಲೂಕಿನಲ್ಲಿ ಕಳ್ಳರನ್ನು ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನೆ ಇದೆ. ಸರಗಳ್ಳತನವಾದ 5-10 ನಿಮಿಷಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಲ್ಲಿ ಅವರನ್ನು ಬಂಧಿಸಲು ಅನುಕೂಲ ಆಗುತ್ತದೆ. ಬ್ಯಾಂಕ್ ಅಧಿಕಾರಿಗಳ ಸೋಗಿನಲ್ಲಿ ಸಾರ್ವಜನಿಕರಿಂದ ಬ್ಯಾಂಕ್ ಖಾತೆಯ ಮಾಹಿತಿ ಪಡೆದು ಹಣ ದೋಚಲಾಗುತ್ತಿದೆ. ಲಸಿಕೆ ಹಾಕುತ್ತೇವೆ ಎಂಬ ನೆಪದಲ್ಲಿ ಓಟಿಪಿ ಸಂಖ್ಯೆ ಪಡೆದು ಹಣ ಕದಿಯಲಾಗುತ್ತಿದೆ. ಹೀಗೆ ನಾನಾ ವಿಧಾನಗಳ ಮೂಲಕ ವಂಚಿಸಲಾಗುತ್ತಿದೆ. ಅಪರಿಚಿತರು ಬ್ಯಾಂಕ್‍ನ ಖಾತೆ ಮಾಹಿತಿ, ಯಾವುದೇ ಓಟಿಪಿ ಕೇಳಿದಾಗ ಕೊಡದೇ ಎಚ್ಚರ ವಹಿಸಬೇಕು. ಬ್ಯಾಂಕ್ ಹೆಸರು ಹೇಳಿ ಕರೆ ಮಾಡಿದರೂ ಕಿವಿಗೊಡಬಾರದು ಎಂದು ಹೇಳಿದರು.

ಖಾಸಗಿ ಚೀಟಿ ವ್ಯವಹಾರಕ್ಕೆ ಮನಸೋಲದಿರಿ: ಖಾಸಗಿ ಚೀಟಿ ವಹಿವಾಟಿಗೆ ಜನರು ಮನಸೋಲಬಾರದು. ಬಡ್ಡಿ, ಚಕ್ರಬಡ್ಡಿ ಆಸೆ ತೋರಿಸಿ ಕೆಲವರು ಹಣ ಎತ್ತಿಕೊಂಡು ಓಡಿಹೋದ ಘಟನೆಯೂ ಇವೆ. ಆದ್ದರಿಂದ ಖಾಸಗಿಯಾಗಿ ಯಾವುದೇ ಚೀಟಿ ವ್ಯವಹಾರ ಮಾಡದೇ, ಸರ್ಕಾರದ ಅಧೀನದ ಸಂಸ್ಥೆಗಳಲ್ಲಿ ಹಣವನ್ನು ಹೂಡುವುದರಿಂದ ಮೋಸ ಆಗುವುದಿಲ್ಲ. ಹಾಗೇನಾದರೂ ಮೀಟರ್ ಬಡ್ಡಿ, ಚಕ್ರಬಡ್ಡಿ ವ್ಯವಹಾರ ಕಂಡು ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ನರಸಿಂಹ ವಿ. ತಾಮ್ರಧ್ವಜ ಎಚ್ಚರಿಸಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಸಮಾಜದ ಪ್ರತಿಯೊಬ್ಬರೂ ಕಾನೂನಿನ ಅರಿವು ಹೊಂದಬೇಕು. ಯಾರಿಗೆ ಕಾನೂನಿನ ಜ್ಞಾನವಿದೆಯೋ ವಂಚನೆಗೆ ಒಳಗಾಗುವುದಿಲ್ಲ. ಕಾನೂನು ತಿಳಿದಿದ್ದಲ್ಲಿ ತಮ್ಮ ಜೀವನ ಉತ್ತಮವಾಗಿ ನಡೆದುಕೊಂಡು ಹೋಗಲು ಕಾರಣ ಆಗುತ್ತದೆ. ದೇಶದಲ್ಲಿ ಶಾಂತಿ ನೆಲೆಸಲು ಕಾನೂನು ಪಾಲನೆ ಅಗತ್ಯ ಎಂದರು.

ಆರ್‍ಎಲ್ ಕಾನೂನು ಕಾಲೇಜಿನ ಪ್ರಾಚಾರ್ಯ ಡಾ. ಎಂ. ಸೋಮಶೇಖರಪ್ಪ ಉಪನ್ಯಾಸ ನೀಡಿದರು. ಸಹಾಯಕ ಪ್ರಾಧ್ಯಾಪಕರಾದ ಬಿ.ಪಿ. ಬಸವನಗೌಡ ಪಾಟೀಲ್, ಟಿ. ವಿದ್ಯಾಧರ ವೇದವರ್ಮ, ಕಾನೂನು ನೆರವು ಘಟಕದ ವಿದ್ಯಾರ್ಥಿ ಸಂಚಾಲಕ ಕೆ. ಸಿದ್ಧನಗೌಡ ಮತ್ತಿತರರಿದ್ದರು. ಬಸವ ಕಲಾ ಲೋಕದಲ್ಲಿ ವಚನ ಗಾಯನ. ಶರಣಬಸವ ಸ್ವಾಗತಿಸಿದರು. ರೋಷನ್ ಕಾರ್ಯಕ್ರಮ ನಿರೂಪಿಸಿದರು. ಕುಂಟೋಜಿ ಚನ್ನಪ್ಪ ವಂದಿಸಿದರು.

error: Content is protected !!