ಸಾಣೇಹಳ್ಳಿ, ನ.3- 18 ವರ್ಷದಿಂದ 35 ವರ್ಷದದೊಳಗಿನವರನ್ನು ಮಾತ್ರ ಯುವಪೀಳಿಗೆ ಎಂದು ತಿಳಿಯುವುದು ತಪ್ಪು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ನಾಟಕೋತ್ಸವದ ನೇತೃತ್ವ ವಹಿಸಿ ಮಾತನಾಡಿದ ಶ್ರೀಗಳು, ಹಳೆ ಬೇರು, ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ವಿಜ್ಞಾನ, ತತ್ವಜ್ಞಾನ ಮೈಗೂಡಿಸಿಕೊಂಡು ಆದರ್ಶ ಪಥ ದಲ್ಲಿ ನಡೆಯುವ ಹೊಣೆಗಾರಿಕೆ ಯುವಪೀಳಿಗೆ ಯದು. ಇಂತಹ ಯುವ ಪೀಳಿಗೆಗೆ ಬಸವಣ್ಣ ನವರಂತಹ ನಾಯಕರ ಅಗತ್ಯವಿದೆ ಎಂದು.
ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಕೃಷಿ ಮತ್ತಿತರೆ ಕ್ಷೇತ್ರಗಳಲ್ಲಿರುವ ಹಲವು ಅಪಸವ್ಯಗಳನ್ನು ಹೋಗಲಾಡಿಸುವ ಜವಾ ಬ್ದಾರಿಯನ್ನು ಯುವಪೀಳಿಗೆ ತೆಗೆದುಕೊಳ್ಳ ಬೇಕಿದೆ. ಇಂದಿನ ಯುವ ಪೀಳಿಗೆಯೇ ಮುಂದಿನ ನಾಯಕರು. ಅವರು ಸನಾತನತೆಯ ಸಂದೇಶ ವಾಹಕರಾಗಬೇಕು. ವ್ಯಕ್ತಿಗತ ದೌರ್ಬಲ್ಯ, ದುಶ್ಚಟ, ದುರಭ್ಯಾಸಗಳಿಂದ ಹೊರಬರಬೇಕು. ಎಷ್ಟೋ ಯುವ ಪೀಳಿಗೆ ಮೂಗುದಾರವಿಲ್ಲದ ಗೂಳಿಯಂತಾಗುತ್ತಿದ್ದಾರೆ. ಅವರನ್ನು ಸರಿದಾರಿ ಯಲ್ಲಿ ಕರೆದೊಯ್ಯುವ ಜವಾಬ್ದಾರಿಯನ್ನು ಮನೆ, ಮಠ ಮತ್ತು ಸಮಾಜದ ಹಿರಿಯರು ನಿರ್ವಹಿಸಬೇಕು ಎಂದು ಹೇಳಿದರು.
ಯುವಶಕ್ತಿಯ ಸದ್ಬಳಕೆ ಆದರೆ ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅದ್ಭುತ ಪ್ರಗತಿ ಸಾಧಿಸಬಹುದು. ಅವರು ಮನೆ, ಮಠ, ಸಮಾಜದ ಜವಾಬ್ದಾರಿಯನ್ನು ನಿರ್ವಹಿ ಸುವ ರೀತಿಯಲ್ಲಿ ಬಾಲ್ಯದಿಂದಲೇ ಸಂಸ್ಕಾರವಂತ ರನ್ನಾಗಿಸಬೇಕು. ಆಧುನಿಕ ತಂತ್ರಜ್ಞಾನದ ದಾಸರಾಗಿ ಅವರು ತಮ್ಮತನ ಕಳೆದುಕೊಳ್ಳದ ಹಾಗೆ ಎಚ್ಚರಿಸಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ನಾಗನೂರು-ಬೆಳಗಾವಿ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ಪಂಡಿತಾರಾಧ್ಯ ಶ್ರೀಗಳು ರಂಗಭೂಮಿ ನಶಿಸುತ್ತಿರುವ ಸಂದರ್ಭದಲ್ಲಿ ಅದಕ್ಕೆ ಪುನಶ್ಚೇತನ ನೀಡಿದ 25 ವರ್ಷಗಳ ಸಾರ್ಥಕ ಕಾರ್ಯ ಹೆಮ್ಮೆಪಡುವಂಥದ್ದು.
ಶಿವಸಂಚಾರ ನಾಡಿನ ಹೆಮ್ಮೆಯ ತಂಡ. ಪೂಜ್ಯರು ನಮ್ಮಂಥ ಯತಿಗಳಿಗೆ ಆದರ್ಶಪ್ರಾಯರು. ಕುಂಟುತ್ತಿರುವ ಸಮಾಜವನ್ನು ಮತ್ತೆ ಸರಿಮಾಡುವ ಕೆಲಸವನ್ನು ಪೂಜ್ಯರು ಮಾಡುತ್ತಿದ್ದಾರೆ. ಲಿಂಗಾಯತ ಧರ್ಮಕ್ಕೆ ಬದ್ಧತೆಯಿಂದ ಇರುವವರು ಪಂಡಿತಾರಾಧ್ಯ ಸ್ವಾಮೀಜಿಗಳು ಎಂದರು.
`ಯುವ ಪೀಳಿಗೆಯ ಜವಾಬ್ದಾರಿ’ ಕುರಿತು ಉಪನ್ಯಾಸ ನೀಡಿದ ಸಿಐಡಿ ಎಸ್‍ಪಿ ರವಿ ಡಿ. ಚೆನ್ನಣ್ಣನವರ್ ಮಾತನಾಡಿ, ಹಿಂದೆ ಖಡ್ಗ ಜಗತ್ತನ್ನು ಆಳುತ್ತಿದ್ದರೆ, ಇಂದು ಜ್ಞಾನ ಆಳುತ್ತಿದೆ. ಸಾಹಿತ್ಯವನ್ನು ಓದುವುದರ ಜೊತೆಗೆ ಅದರ ಆಳಕ್ಕೆ ಇಳಿದು ನಮ್ಮೊಡನೆ ಸಮೀಕರಿಸಿ ಕೊಳ್ಳಬೇಕು. ದೇಹಕ್ಕೆ ಆಹಾರ ಕೊಡುವಂತೆ ಪಂಚೇಂದ್ರಿಯಗಳಿಗೂ ಆಹಾರ ಕೊಡಬೇಕು. ಕೀಳರಿಮೆಯನ್ನು ಕಳೆದುಕೊಳ್ಳುವುದು ಯಶಸ್ಸಿನ ಮೊದಲ ಹೆಜ್ಜೆ. ಇಂಥ ಕಾರ್ಯಕ್ರಮಗಳು ನಮ್ಮ ಲೈಫ್ ಎನ್ನುವ ಬ್ಯಾಟರಿ ಚಾರ್ಜ್ ಮಾಡಲು ಅವಕಾಶ ಮಾಡಿಕೊಡುತ್ತವೆ ಎಂದರು.
ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ನಾಟಕಗಳ ಮೂಲಕ ಸಮಾಜ ತಿದ್ದುವ ಕೆಲಸ ಸಾಧ್ಯ. ಆದರೆ ಇತ್ತೀಚಿನ ಆಧುನಿಕ ತಂತ್ರಜ್ಞಾನಗಳ ಪ್ರಭಾವ ನಾಟಕ ಕ್ಷೇತ್ರವನ್ನು ಕ್ಷೀಣಿಸುವಂತೆ ಮಾಡಿದೆ ಎಂದರು.
ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಪ್ರಪಂಚವೇ ಮೆಚ್ಚುವಂಥದ್ದು ಭಾರತೀಯ ಸಂಸ್ಕೃತಿ. ಈ ಸಂಸ್ಕೃತಿಗೆ ಎಂದೂ ಕೂಡ ಅಂತ್ಯವಿಲ್ಲ ಎಂದರು.
ತರೀಕೆರೆ ಶಾಸಕ ಡಿ.ಎಸ್. ಸುರೇಶ್, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಮಾತನಾಡಿದರು. ಎಸ್.ಜಿ. ಸಿದ್ಧರಾಮಯ್ಯ ನವರು ಸಂಪಾದಿಸಿದ `ಕ್ರಾಂತಿಯ ಹೆಜ್ಜೆಗಳು’ ಕೃತಿಯನ್ನು ನಾಗನೂರು-ಬೆಳಗಾವಿ ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.