ಮೌಲ್ಯಗಳ ದಾರಿ ಹಿಡಿದರೆ ಸಂತೃಪ್ತ ಜೀವನ ಸಾಧ್ಯ

ಮೌಲ್ಯಗಳ ದಾರಿ ಹಿಡಿದರೆ ಸಂತೃಪ್ತ ಜೀವನ ಸಾಧ್ಯ - Janathavaniಸಾಣೇಹಳ್ಳಿ, ನ.3- ಅಪಮೌಲ್ಯಗಳ ದಾರಿಯನ್ನು ಬಿಟ್ಟು ಮೌಲ್ಯಗಳ ದಾರಿ ಹಿಡಿದರೆ ಸಂತೃಪ್ತ ಜೀವನ ನಡೆಸಲು ಸಾಧ್ಯವಿದೆ. ತಾವೂ ಬದುಕಿ ಇನ್ನೊಬ್ಬರನ್ನು ಬದುಕಲು ಬಿಡುವುದೇ ಮೌಲ್ಯ. ಆದರೆ ಮೌಲ್ಯಯುತ ಬದುಕು ಕಟ್ಟಿಕೊಳ್ಳುವಲ್ಲಿ ಸೋಲುತ್ತಿದ್ದೇವೆ ಎಂದು ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಸಾಣೇಹಳ್ಳಿಯಲ್ಲಿ ನಾಟಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ `ಪ್ರಾರ್ಥನೆ, ಧ್ಯಾನ, ಮೌನ’ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಶರಣರು ತಮ್ಮ ವಚನಗಳಲ್ಲಿ ಕಣ್ಣಿಗೆ ಕಾಣುವ ಉದಾಹರಣೆ ಗಳ ಮೂಲಕ ಮೌಲ್ಯಗಳನ್ನು ವಿಭಿನ್ನವಾಗಿ ಸಾರಿದ್ದಾರೆ. ಪೂಜೆಗೆ ಪುಷ್ಪ, ನೀರು, ಧೂಪ, ದೀಪ ಮುಂತಾದವುಗಳನ್ನು ಬಳಸುವುದಕ್ಕಿಂತ, ಶುದ್ಧ ಮನಸ್ಸಿನಿಂದ ಮಾಡುವ ಪ್ರಾರ್ಥನೆ ದೇವರಿಗೆ ಮುಟ್ಟುತ್ತದೆ. ಮನುಷ್ಯನ ಮೂಲ ಉದ್ದೇಶ ಮಾನವತ್ವದಿಂದ ಸಾಗಿ ದೈವತ್ವವನ್ನು ರೂಢಿಸಿಕೊಳ್ಳುವುದು. ಅದಕ್ಕೆ ಮಾನವೀಯ ಮೌಲ್ಯಗಳೇ ಮೆಟ್ಟಿಲುಗಳಿದ್ದಂತೆ ಎಂದರು.

ಮಾನವ ಸ್ವಾರ್ಥದ ಗೋಡೆಯನ್ನು ನಿರ್ಮಿಸಿಕೊಂಡಿದ್ದಾನೆ. ಅಧಿಕಾರ, ಅಂತಸ್ತು, ಪದವಿ, ಪ್ರತಿಷ್ಠೆಗಳನ್ನೇ ಮೌಲ್ಯ ಎಂದು ತಿಳಿದು, ವ್ಯಾಮೋಹಕ್ಕೆ ಒಳಗಾಗಿದ್ದಾನೆ. ಅಂತಹ ಗೋಡೆಯಿಂದ ಹೊರಬರುವು ದೇ ನಿಜವಾದ ಮೌಲ್ಯ ಎಂದು ಹೇಳಿದರು. ಪ್ರಸ್ತುತ ರಾಜಕಾರಣಿಗಳು, ಸ್ವಾಮಿಗಳು, ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಮೌಲ್ಯಗಳ ಅಗತ್ಯವಿದೆ ಎಂದರು.

`ಮಾನವೀಯ ಮೌಲ್ಯಗಳು’ ಕುರಿತು ಮಾತನಾಡಿದ ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು, ವ್ಯಕ್ತಿಯ ವ್ಯಕ್ತಿತ್ವ ನಿಜವಾದ ಸಂಪತ್ತು. ವ್ಯಕ್ತಿತ್ವ ಸರಿಯಿದ್ದರೆ ಮಾತ್ರ ಆತನಿಗೆ ಬೆಲೆ ಬರುವುದು. ಸತ್ಯ, ಧರ್ಮ, ನ್ಯಾಯವನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆಯುವವರೇ ಮಾನವರು ಎಂದು ಹೇಳಿದರು.

ಜ್ಯೋತಿ ಮತ್ತು ಹೆಚ್.ಎಸ್. ನಾಗರಾಜ್ ಸಂಗಡಿಗರು ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ಹಿಮಶ್ರೀ ನಿರೂಪಿಸಿ ದರು. ವಿದ್ಯಾರ್ಥಿಗಳು, ನೌಕರರು, ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!