ಹಳ್ಳಿಗಳಲ್ಲಿ ಜಲಜೀವನ ಮಿಷನ್ ಯೋಜನೆಗೆ ವಿರೋಧ

ಗ್ರಾಮೀಣರ  ಮನವೊಲಿಸುವಂತೆ ಅಧಿಕಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ

ಸರ್ಕಾರದ ಯಾವುದೇ ವಸತಿ ಯೋಜನೆಗಳಡಿ ಮನೆ ಮಂಜೂರು ಮಾಡಲು ಯಾರೂ ಕೂಡ ಹಣ ನೀಡಬಾರದು.  ಮನೆ ಮಂಜೂರಾತಿಗೆ ಹಣ ನೀಡುವಂತೆ ಯಾವುದೇ ಅಧಿಕಾರಿ ಅಥವಾ ಯಾವುದೇ ವ್ಯಕ್ತಿಗಳು  ಹಣದ ಬೇಡಿಕೆ ಇಟ್ಟರೆ, ಜಿಲ್ಲಾಧಿಕಾರಿ,  ಜಿ.ಪಂ. ಸಿಇಒ, ಶಾಸಕರು ಅಥವಾ ನನಗೆ ಮಾಹಿತಿ ನೀಡಿ.  ಅಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು.      

– ಜಿ.ಎಂ. ಸಿದ್ದೇಶ್ವರ, ಸಂಸದ

ದಾವಣಗೆರೆ, ನ.2- ಗ್ರಾಮೀಣ ಭಾಗದಲ್ಲಿನ ಪ್ರತಿ ಮನೆಗೂ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಜಲಜೀವನ ಮಿಷನ್ ಯೋಜನೆಗೆ ವಿರೋಧ ವ್ಯಕ್ತಪಡಿಸುವ ಗ್ರಾಮಗಳಲ್ಲಿ ನೀರಿನ ಮಹತ್ವದ ಬಗ್ಗೆ ಅರಿವು ಮೂಡಿಸಿ,  ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಮನವೊಲಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ್ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ  ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಮೂಲ್ಯವಾದ ನೀರನ್ನು ಅನಗತ್ಯವಾಗಿ ಪೋಲು ಮಾಡಬಾರದು ಹಾಗೂ ಪ್ರತಿಯೊಬ್ಬರ ಮನೆಗೂ ಕುಡಿಯುವ ನೀರು ಸಿಗಬೇಕೆಂಬ ದೃಷ್ಟಿಯಿಂದ ಜಲಜೀವನ್ ಯೋಜನೆಯಡಿ ನಲ್ಲಿ ಸಂಪರ್ಕ ಕಲ್ಪಿಸಿ ಮೀಟರ್ ಅಳವಡಿಸಲಾಗುತ್ತದೆ. ಈ ಬಗ್ಗೆ ಗ್ರಾಮಸ್ಥರಿಗೆ ತಿಳಿ ಹೇಳಬೇಕು ಎಂದರು.

ಯೋಜನೆಗೆ ವಿರೋಧ ವ್ಯಕ್ತಪಡಿಸುವ ಗ್ರಾಮಗಳ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿ, ದಿಶಾ ಸಮಿತಿ ಸದಸ್ಯರು, ಸ್ಥಳೀಯ ಶಾಸಕರುಗಳ ಸಹಾಯದಿಂದ ಗ್ರಾಮಸ್ಥರ ಮನವೊಲಿಸುವಂತೆಯೂ ಹಾಗು ತಾವೂ ಸಹ ಪರಿಶೀಲಿಸುವುದಾಗಿ ಹೇಳಿದರು.

ಇದಕ್ಕೂ ಮುನ್ನ ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಮಹಾಂತೇಶ ದಾನಮ್ಮನವರ್ ಮಾತನಾಡಿ, ಅನೇಕ ಗ್ರಾಮಗಳಲ್ಲಿ ಯೋಜನೆಗೆ ವಿರೋಧ ವ್ಯಕ್ತವಾಗುತ್ತಿದೆ.  ಮೀಟರ್ ಅಳವಡಿಸಿದರೆ ಹಣ ಕಟ್ಟಬೇಕಾಗುತ್ತದೆ ಎಂದು ಕೆಲವರ ವಿರೋಧ ವಿದೆ.  ನಲ್ಲಿ ಸಂಪರ್ಕ ಕಲ್ಪಿಸಲು ಈಗಿರುವ ಸಿಸಿ ರಸ್ತೆಯನ್ನು ಒಡೆಯಲು ಕೆಲ ಕಡೆ ವಿರೋಧವಿದೆ. ಮತ್ತೊಂದೆಡೆ ರಸ್ತೆ ಹಾಗೂ ಮನೆಗಳ ಮುಂದೆ ತೆಂಗಿನ ಮರಗಳಿರುವುದರಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ದಿಶಾ ಸಮಿತಿ ಸದಸ್ಯ ಅಣ್ಣೇಶ್ ಐರಣಿ ಮಾತನಾಡಿ, ರಸ್ತೆ ತುಂಡರಿಸಿ ಪೈಪ್ ಲೈನ್ ಅಳವಡಿಸುವ ಗುತ್ತಿಗೆದಾರರು ಸರಿಯಾಗಿ ಮುಚ್ಚುತ್ತಿಲ್ಲ ಎಂದು ಆರೋಪಿಸಿದರು. ತುಂಡರಿಸಿದ ರಸ್ತೆಯನ್ನು ಮೊದಲಿನಂತೆ ರಿಪೇರಿ ಮಾಡುವುದು ಗುತ್ತಿಗೆದಾರರ ಕರ್ತವ್ಯವಾಗಿದ್ದು, ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಂಸದ ಸಿದ್ದೇಶ್ವರ ಸೂಚಿಸಿದರು.

ಟಿವಿ ಸ್ಟೇಷನ್ ಕೆರೆ ಅಭಿವೃದ್ಧಿ ಪಡಿಸಿ: ಕುಂದುವಾಡ ಕೆರೆ ಅಭಿವೃದ್ಧಿಪಡಿಸುತ್ತಿರುವಂತೆ ನಗರದ ಟಿವಿ ಸ್ಟೇಷನ್ ಕೆರೆಯನ್ನೂ ಅಭಿವೃದ್ಧಿ ಪಡಿಸುವಂತೆ ದಿಶಾ ಸಮಿತಿ ಸದಸ್ಯ ಜಿ.ಪಿ. ಮುದ್ದಣ್ಣ ಒತ್ತಾಯಿಸಿದರು. ಕೆರೆ ಆವರಣದಲ್ಲಿ ಯೋಗ ಮಂದಿರ ನಿರ್ಮಿಸುವಂತೆ, ಕೆರೆಯ ಸುತ್ತ ವಿದ್ಯುತ್ ದೀಪ ಅಳವಡಿಸುವಂತೆ ಹೇಳಿದರು.

ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಹಾಗೂ ಆಯುಕ್ತ ವಿಶ್ವನಾಥ ಮುದಜ್ಜಿ, ಈಗಾಗಲೇ ಕೆರೆ ಅಭಿವೃದ್ಧಿಗೆ ದೂಡಾದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಯೋಗ ಮಂದಿರಕ್ಕೆ ಸೂಕ್ತ ಜಾಗದ ಕೊರತೆ ಇದೆ ಎಂದರು.

ತ್ಯಾಜ್ಯ ಸದ್ವಿನಿಯೋಗಕ್ಕೆ ಸಲಹೆ: ನಗರ ವೇಗವಾಗಿ ಬೆಳೆಯುತ್ತಿದ್ದು, ತ್ಯಾಜ್ಯವೂ ಹಚ್ಚಾಗುತ್ತಿದೆ.  ಬೇರೆಯವರಿಗೆ ಉಚಿತವಾಗಿ ತ್ಯಾಜ್ಯ ಕಳುಹಿಸುವ ಬದಲು  ಹಸಿ ಹಾಗೂ ಒಣ ತ್ಯಾಜ್ಯದಿಂದ ಗೊಬ್ಬರ, ಇಂಧನ ಉತ್ಪತ್ತಿ ಮಾಡುವ  ಬಗ್ಗೆ ಚಿಂತಿಸಿ, ಪ್ರಸ್ತಾವನೆ ಸಲ್ಲಿಸುವಂತೆ ಪಾಲಿಕೆ ಆಯುಕ್ತರಿಗೆ ಸಂಸದರು ಸೂಚಿಸಿದರು.

ಕಳೆದ ಸಭೆಯಲ್ಲಿ ಹಂದಿ ನಿರ್ಮೂಲನೆಗೆ 15 ದಿನಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, 6 ತಿಂಗಳಾದರೂ ಏಕೆ ಕ್ರಮಕೈಗೊಂಡಿಲ್ಲ ಎಂದು ಸಂಸದರು ಆಯುಕ್ತರನ್ನು ಪ್ರಶ್ನಿಸಿದರು. 

ಹೆಬ್ಬಾಳ್ ಗ್ರಾಮದ ಬಳಿ ಹಂದಿಗಳನ್ನು ಸ್ಥಳಾಂತರಿಸಲು ಯೋಜಿಸಿದ ಜಮೀನು ಆ.11 ರಂದು ಪಾಲಿಕೆಗೆ ಹಸ್ತಾಂತರಗೊಂಡಿದ್ದು, ಕಾಂಪೌಂಡ್ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಿ, ಟೆಂಡರ್ ಕರೆದು ಕಾಮಗಾರಿ ಆರಂಭವಾಗಿದೆ. ಇನ್ನು 3 ತಿಂಗಳೊಳಗೆ ಪೂರ್ಣವಾಗಲಿದೆ ಎಂದು ಹೇಳಿದರು. ಕೆಲವರಿಂದ ವಿರೋಧ ವ್ಯಕ್ತವಾದದ್ದರಿಂದ ವಿಳಂಬವಾಯಿತು ಎಂದು ಸಮಜಾಯಿಷಿ ನೀಡಿದರು.

ಶಾಲಾ ಕಾಂಪೌಂಡ್ ಶೀಘ್ರ ನಿರ್ಮಿಸಿ: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್‌ಗಳನ್ನು ಶೀಘ್ರವಾಗಿ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೂ ಮುನ್ನ ಮಾತನಾಡಿದ ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಜಿಲ್ಲೆಯಲ್ಲಿ 193 ಶಾಲೆಗಳ ಕಾಂಪೌಂಡ್ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದ್ದು, 16 ಕಾಮಗಾರಿಗಳನ್ನು ಆರಂಭಿಸಲಾಗಿದೆ ಎಂದು ಹೇಳಿದರು.

ಆಶ್ರಯ ಮನೆ-ಒತ್ತಡಕ್ಕೆ ಮಣಿಯದಿರಿ: ನಾನೇ ಆಗಲಿ, ಶಾಸಕರು ಅಥವಾ ಅಧಿಕಾರಿಗಳೇ ಆಗಲಿ ಒತ್ತಡ ಅಥವಾ ಶಿಫಾರಸ್ಸು ಮಾಡಿದರೆ ಮನೆ ಇದ್ದವರಿಗೆ ಆಶ್ರಯ ಮನೆಗಳನ್ನು ನೀಡಬಾರದು. ಈ ಬಗ್ಗೆ ಗ್ರಾ.ಪಂ. ಅಧ್ಯಕ್ಷರು, ಕಾರ್ಯದರ್ಶಿಗಳು, ಪಿಡಿಒಗಳು ಗಮನ ಹರಿಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಲಾಭ ದೊರೆಯುವಂತೆ ಮಾಡಬೇಕು ಎಂದು ಹೇಳಿದರು.

ಅರ್ಹರಿಗೆ ಮನೆಗಳು ಸಿಗಲೆಂಬ ಉದ್ದೇಶದಿಂದ ಜನಪ್ರತಿನಿಧಿಗಳ ಮನ ವೊಲಿಸುವಂತೆಯೂ, ಒತ್ತಡಗಳಿಗೆ ಮಣಿಯಬಾರದು ಎಂದು ಜಿಲ್ಲಾಧಿಕಾರಿಗಳೂ ಸಹ ಅಧಿಕಾರಿಗಳಿಗೆ ಮನವಿ ಮಾಡಿದರು.

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಕಳೆದ ಬಾರಿ 17127 ರೈತರು ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ ಹೆಚ್ಚಿನ ಪ್ರಚಾರ ಮಾಡಿದ್ದರ ಹಿನ್ನೆಲೆಯಲ್ಲಿ 21514 ರೈತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ದಿಶಾ ಸಮಿತಿ ಸದಸ್ಯ ಜೆ.ಪಿ. ಮುಪ್ಪಣ್ಣ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 23685 ಗರ್ಭಿಣಿಯರ ನೋಂದಣಿಯಾಗಿದ್ದು, ಈ ಪೈಕಿ 2600 ಗರ್ಭಪಾತ ಸಂಭವಿಸಿದ್ದು, ಹೆಣ್ಣು ಮಕ್ಕಳ ಲಿಂಗಾನುಪಾತ ವಿಷಯಕ್ಕೆ ಸಂಬಂಧಿಸಿದಂತೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು.  ಹೆಚ್ಚು ಗರ್ಭಪಾತ ನಡೆಯುತ್ತಿರುವ ಆಸ್ಪತ್ರೆ, ನರ್ಸಿಂಗ್ ಹೋಂಗಳನ್ನು ಪರಿಶೀಲನೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು. 

ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲು ಹರಿಹರದ ಲಕ್ಷ್ಮಿ ಗ್ಯಾಸ್ ಏಜೆನ್ಸಿ ಅವರು ಫಲಾನುಭವಿಗಳಿಂದ ಹಣ ಕೇಳುತ್ತಿರುವ ಬಗ್ಗೆ ಬಹಳಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ, ಈ ಏಜೆನ್ಸಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು, ಲೈಸೆನ್ಸ್ ರದ್ದುಪಡಿಸುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಸಭೆಗೆ ಮಾಹಿತಿ ನೀಡಿದರು.  

ಜಗಳೂರು ಶಾಸಕ ರಾಮಚಂದ್ರ ಮಾತನಾಡಿ, ಎಲ್ಲ ತಾಂಡಾ, ಹಾಡಿಗಳಿಗೆ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ, ಆದರೆ ಜಿಲ್ಲೆಯಲ್ಲಿ ಈ ಕಾರ್ಯ ಆಗಿಲ್ಲ ಎಂದರು.  ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೆಸ್ವಾಮಿ, ಕನಿಷ್ಟ 100 ಕಾರ್ಡ್ ಇದ್ದರೂ, ನ್ಯಾಯಬೆಲೆ ಅಂಗಡಿ ನೀಡುವಂತೆ ಇಲಾಖೆ ಸೂಚನೆ ನೀಡಿದ್ದು, ಈಗಾಗಲೆ ಜಿಲ್ಲೆಯಲ್ಲಿ ಸರ್ವೇ ಮಾಡಿಸಲಾಗುತ್ತಿದ್ದು, ಶೀಘ್ರ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದರು.  ಸಂಸದರು ಮಾತನಾಡಿ ರಾಜ್ಯದಲ್ಲಿ ಬರುವ ಜ. 26 ರಿಂದ ಮನೆ ಮನೆಗೆ ಪಡಿತರ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೊಳಿಸುತ್ತಿದ್ದು, ಇದಕ್ಕೆ ಬೇಕಾದ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದರು.

ಸಭೆಯಲ್ಲಿ ಮಾಯಕೊಂಡ ಶಾಸಕ ಪ್ರೊ.ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸಿಇಒ ಮಹಾಂತೇಶ ದಾನಮ್ಮನವರ್, ದಿಶಾ ಸಮಿತಿ ಸದಸ್ಯರಾದ ಜಿ.ಎ. ಮುಪ್ಪಣ್ಣ, ಹೆಚ್.ಕೆ. ಬಸವರಾಜು, ಎನ್.ಟಿ. ತಿಪ್ಪೇಸ್ವಾಮಿ, ವೆಂಕಟಗಿರಿನಾಯ್ಕ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!