ಜಗಳೂರು, ಜು.21- ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಸ್ಥಾಪಿಸಲಾಗಿರುವ ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ಸ್ಥಗಿತವಾಗಿದ್ದು, ಕೆಲವು ಘಟಕಗಳು ಪಾಳುಬಿದ್ದಿವೆ.
ಪಟ್ಟಣದ ವ್ಯಾಪ್ತಿಯ 4 ಕ್ಕೂ ಹೆಚ್ಚು ಶುದ್ಧ ನೀರಿನ ಘಟಕಗಳನ್ನು ಸರ್ಕಾರದ ವಿವಿಧ ಯೋಜನೆಯ ಅಡಿಯಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಸ್ಥಾಪಿಸಲಾಗಿತ್ತು. ಆರಂಭವಾದ ಕೆಲವೇ ತಿಂಗಳು ಅಥವಾ ಕೆಲವೇ ದಿನಗಳಲ್ಲಿ ವಿವಿಧ ಕಾರಣಗಳಿಂದ ಸ್ಥಗಿತಗೊಂಡಿರುವ ಶುದ್ಧ ನೀರಿನ ಘಟಕಗಳಿಂದ ಜನರಿಗೆ ಯಾವುದೇ ಉಪಯೋಗವಾಗದೆ ಸರ್ಕಾರದ ಹಣ ಅಂದರೆ ಜನರ ತೆರಿಗೆಯ ಹಣ ಅಧಿಕಾ ರಿಗಳ ನಿರ್ಲಕ್ಷ್ಯದಿಂದಾಗಿ ವ್ಯರ್ಥವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಆಶಯದೊಂದಿಗೆ ಸ್ಥಾಪಿಸಲಾಗಿರುವ ಈ ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ಸ್ಥಗಿತಗೊಂಡಿ ರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಅನಿವಾರ್ಯವಾಗಿ ಖಾಸಗಿ ಶುದ್ಧ ನೀರಿನ ಘಟಕಗಳಿಂದ ನೀರನ್ನು ಕೊಂಡುಕೊಳ್ಳುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಜನರಿಗೆ ಶುದ್ಧ ನೀರು ಪೂರೈಸುವ ಆಶಯದೊಂದಿಗೆ ಹಲವು ಯೋಜನೆ ಗಳನ್ನು ಕಾರ್ಯರೂಪಕ್ಕೆ ತಂದಿದೆ. ಯಾವುದೇ ಯೋಜನೆ ಜನರಿಗೆ ತಲುಪಲು ಅನುಷ್ಠಾನಗೊಳಿಸುವ ಅಧಿಕಾರಿಗಳ ಜವಾಬ್ದಾರಿ ಮಹತ್ವದ್ದಾಗಿರುತ್ತದೆ. ಆದರೆ ಪಟ್ಟಣ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಒಂದು ಮಹತ್ವಪೂರ್ಣ ಯೋಜನೆಯು ಸಾಮಾನ್ಯ ಜನರಿಗೆ ತಲುಪದೆ ತೆರಿಗೆ ಹಣ ಪೋಲು ಆಗಿದೆ ಎಂದು ಸಾರ್ವಜನಿಕವಾಗಿ ಟೀಕೆ ವ್ಯಕ್ತವಾಗಿದೆ.
ಪಟ್ಟಣದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಖಾಸಗಿ ಶುದ್ಧನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸುಮಾರು 2500 ಲೀಟರ್ ಸಾಮರ್ಥ್ಯದ ಟ್ಯಾಂಕ್ ಳೊಂದಿಗೆ ಸಾರ್ವಜನಿಕರ ಮನೆ ಬಾಗಿಲಿಗೆ ಹೆಚ್ಚಿನ ಹಣ ಪಡೆದು ಶುದ್ಧ ನೀರು ಸರಬರಾಜು ಮಾಡು ತ್ತಿದ್ದಾರೆ. ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎಲ್ಲೂ ಇಲ್ಲ .ಆದರೂ ಸಹ ಕುಡಿಯಲು ಯೋಗ್ಯವಾದ ಶುದ್ಧ ನೀರನ್ನು ಜನರು ಖಾಸಗಿಯವರ ಘಟಕ ದಿಂದಲೇ ಹಣ ಪಾವತಿಸಿ ಪಡೆಯುತ್ತಿದ್ದಾರೆ.
ಆದರೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಬಡತನ ರೇಖೆಯ ಕೆಳಗಿರುವಂತಹ ಬಡ ಕುಟುಂಬಗಳ ಜನರು ಹಣ ಪಾವತಿಸಿ ಶುದ್ಧ ನೀರು ಪಡೆಯುವ ಬದಲಾಗಿ ಪಟ್ಟಣ ಪಂಚಾಯ್ತಿಯಿಂದ ಬೋರ್‌ವೆಲ್ ಗಳಿಂದ ಪೂರೈಸಲಾಗುವ ನಲ್ಲಿಯ ನೀರು ಹಾಗೂ ಶಾಂತಿ ಸಾಗರ್‌ದಿಂದ ಸರಬರಾಜು ಆಗುವ ನೀರನ್ನು ಕುಡಿಯುತ್ತಿದ್ದಾರೆ.
ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಸರ್ಕಾರದ ಆಶಯದೊಂದಿಗೆ ಆರಂಭವಾದ ಶುದ್ಧ ನೀರಿನ ಘಟಕಗಳು ಸಂಪೂರ್ಣವಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸದೇ ಸ್ಥಗಿತಗೊಂಡಿರುವುದು ಬಡ-ಮಧ್ಯಮ ಜನರಿಗೆ ತೊಂದರೆ ಆದಂತಾಗಿದೆ. ಪಟ್ಟಣದಲ್ಲಿ ಪ.ಪಂ. ನಿಂದ ಸ್ಥಾಪಿಸಲಾಗಿರುವ ಎಲ್ಲ ಶುದ್ಧ ನೀರಿನ ಘಟಕಗಳು ಸ್ಥಗಿತಗೊಂಡಿರುವ ಕಾರಣ ಖಾಸಗಿಯವರು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಹೆಚ್ಚು ಪ್ರೋತ್ಸಾಹ ಸಿಕ್ಕಂತಾಗಿವೆ. ಸುಮಾರು ಹತ್ತಕ್ಕೂ ಹೆಚ್ಚು ಘಟಕಗಳು ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಸ್ಥಗಿತಗೊಂಡಿರುವ ಘಟಕಗಳು: ವಿದ್ಯಾ ನಗರ ಪಾರ್ಕ್‌ನಲ್ಲಿರುವ ಘಟಕ, ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿರುವ ಘಟಕ, ಚಳ್ಳಕೆರೆ ಗೇಟ್‌ನಲ್ಲಿ ಸ್ಥಾಪಿಸಲಾಗಿರುವ ನೀರಿನ ಘಟಕ ಹಾಗೂ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಸ್ಥಾಪಿಸಲಾಗಿರುವ ಘಟಕ.
ಈಗಾಗಲೇ ಸ್ಥಾಪಿಸಲಾಗಿರುವ ಘಟಕಗಳು ಪಾಳು ಬಿದ್ದಿದ್ದರೂ ಕೂಡ ಮತ್ತೆ 18 ಮತ್ತು 9 ನೇ ವಾರ್ಡ್‌ಗಳಲ್ಲಿ ಶುದ್ಧ ನೀರಿನ ಘಟಕಗಳ ಸ್ಥಾಪನೆಗೆ ಸಿದ್ಧತೆ ನಡೆಯುತ್ತಿದೆ. ಶೆಡ್ ನಿರ್ಮಿಸಿ ಮೂರು ತಿಂಗಳಾಗಿದ್ದು ಮಿಷನ್ ಅಳವಡಿಸಬೇಕಾಗಿದೆ.
– ಬಿ.ಪಿ. ಸುಭಾನ್,
[email protected]