ಸಮಾಜ ಬಾಂಧವರು ಈ ಬಗ್ಗೆ ಚಿಂತನೆ ನಡೆಸಲಿ: ಉಜ್ಜಯಿನಿ ಶ್ರೀ
ದಾವಣಗೆರೆ, ಮಾ. 4- ಶಿಕ್ಷಣ ಪ್ರೇಮಿಗಳೂ, ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣ ಆಗಿದ್ದ ಲಿಂಗೈಕ್ಯ ಶ್ರೀ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರ ಹೆಸರಿನಲ್ಲಿ ವೀರಶೈವ ಬಡ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್ ನಿರ್ಮಿಸುವ ಬಗ್ಗೆ ಸಮಾಜ ಬಾಂಧವರು ಚಿಂತನೆ ನಡೆಸಬೇಕು ಎಂದು ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ ನುಡಿದರು.
ನಗರದ ಸದ್ಯೋಜಾತ ಮಠದಲ್ಲಿ ಗುರು ವಾರ ಹಮ್ಮಿಕೊಳ್ಳಲಾಗಿದ್ದ ಡಾ. ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರ 13ನೇ ಸಂಸ್ಮರಣೋತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಲಿಂಗೈಕ್ಯ ಸದ್ಯೋಜಾತ ಶಿವಾಚಾರ್ಯ ಮಹಾಸ್ವಾಮೀಜಿ ಅವರು ಸದಾ ಕಾಲ ಭಕ್ತರ ಶ್ರೇಯಸ್ಸು ಬಯಸುತ್ತಿದ್ದರು. ಅವರು ಕೇವಲ ವೀರಶೈವ ಸಮಾಜಕ್ಕಷ್ಟೇ ಅಲ್ಲದೇ ಸರ್ವ ಜನಾಂಗದ ಪ್ರೀತಿ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅವರ ಚಿಂತನೆಗಳ ಕುರಿತು ಹೆಚ್ಚಾಗಿ ಚರ್ಚೆಗಳು ನಡೆಯಬೇಕಿದೆ ಎಂದು ಆಶಿಸಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಸಾಧ ಕರಿಗೆ ಸದಾ ಪ್ರೋತ್ಸಾಹ ದಾಯಕರಾಗಿದ್ದ ಲಿಂ. ಸದ್ಯೋಜಾತ ಶ್ರೀಗಳು, ಬಡ ಪ್ರತಿಭಾನ್ವಿತರಿಗೆ ಭಕ್ತರಿಂದ ಧನ ಸಹಾಯ ಸಿಗುವಂತೆ ಮಾಡುತ್ತಿ ದ್ದರು. ಅಂಥವರಲ್ಲಿ ನಾನು, ಸಹ ಒಬ್ಬನಾಗಿದ್ದೇನೆ. ತಾವು ಉಪನ್ಯಾಸಕ ವೃತ್ತಿಯನ್ನು ಬಿಡಬಾರದು ಎಂದು ಶ್ರೀಗಳು ಆಗಾಗ ನನಗೆ ಸಲಹೆ ಕೊಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.
ದಾವಣಗೆರೆಗೆ ಶಿವಾಚಾರ್ಯರು ಆಗಮಿಸಿದರೆ, ಅವರನ್ನು ಮಠಕ್ಕೆ ಕರೆದುಕೊಂಡು ಬಂದು ಸ್ವತಃ ಅಡುಗೆ ಮಾಡಿ ಸತ್ಕರಿಸುತ್ತಿದ್ದರು. ಅವರ ವಿಶಾಲ ಮನೋಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕು. ಅವರ ಹಾಗೂ ಅವರ ಚಿಂತನೆಗಳ ಚರ್ಚೆ ಆಗಬೇಕಿದೆ ಎಂದರು.
ಉದ್ಯಮಿ ಬಿ.ಸಿ. ಉಮಾಪತಿ ಮಾತನಾಡುತ್ತಾ, ಲಿಂಗೈಕ್ಯ ಸದ್ಯೋಜಾತ ಶ್ರೀಗಳು ಇಂದು ನಮ್ಮೊಡನೆ ಇಲ್ಲ. ಆದರೆ, ಅವರು ನಮ್ಮೆಲ್ಲರ ಆತ್ಮದಲ್ಲಿದ್ದಾರೆ. ಅವರ ಕೆಲಸ ನಮೆಲ್ಲರಿಗೂ ಆದರ್ಶ ಎಂದರು.
ಪ್ರಾಂಶುಪಾಲರಾಗಿ ಕಾಯಕ ಮಾಡುತ್ತಿದ್ದ ಸ್ವಾಮೀಜಿಯವರಿಗೆ ಹಣದ ಬಗ್ಗೆ ಆಸಕ್ತಿ ಇರಲಿಲ್ಲ. ಆದರೆ, ವ್ಯವಹಾರ ಮಾತ್ರ ಪಾರದರ್ಶಕವಾಗಿತ್ತು ಎಂದು ಹೇಳಿ, ಅವರ ಒಡನಾಟ ಹಂಚಿಕೊಂಡರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿ ಸ್ವಾಮಿ ಮಾತನಾಡಿ, ಶ್ರೀಗಳು ವಿಶ್ವ ಹಿಂದೂ ಪರಿಷತ್‍ನ ಗೌರವಾಧ್ಯ ಕ್ಷರಾಗಿ ಕೆಲಸ ಮಾಡುವ ಮೂಲಕ ಹಿಂದೂ ಸಮಾಜದ ಪ್ರಗತಿಗೆ ಶ್ರಮಿಸಿದ್ದಾರೆ ಎಂದರು.
ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಬೇಕು ಎಂಬ ಹಿನ್ನೆಲೆಯಲ್ಲಿ ಅವರು ಮಾಡುತ್ತಿದ್ದ ಕೆಲಸ ಕಾರ್ಯಗಳು ನಾವುಗಳು ಮರೆಯುವಂತಿಲ್ಲ ಎಂದು ಹೇಳಿದರು. ವಿಜಯ ಹಿರೇಮಠ ಪ್ರಾರ್ಥಿಸಿದರು. ತ್ರಿಭುವಾನಂದ ಸ್ವಾಮಿ ಸ್ವಾಗತಿಸಿದರು.