ಹರಿಹರದ ದಿ ಸದರನ್ ಗ್ಯಾಸ್ ಏಜೆನ್ಸಿಯಿಂದ ಹಲವು ಜಿಲ್ಲೆಗಳಿಗೆ ಆಕ್ಸಿಜನ್
ಹರಿಹರ, ಏ.30- ಕೊರೊನಾ ರೋಗಿಗಳಿಗೆ ಅಗತ್ಯವಿರುವ ಆಕ್ಸಿಜನ್ ಪೂರೈಕೆಗಾಗಿ ಹರಪನಹಳ್ಳಿ ರಸ್ತೆಯಲ್ಲಿ ಇರುವ ದಿ. ಸದರನ್ ಗ್ಯಾಸ್ ಏಜೆನ್ಸಿಯಲ್ಲಿ ಆಕ್ಸಿಜನ್ ಅನ್ನು ದಾವಣಗೆರೆ, ಚಿತ್ರದುರ್ಗ ಸೇರಿದಂತೆ ಇತರೆ ನಗರಗಳಿಗೆ ಪೂರೈಸಲು ವ್ಯವಸ್ಥೆ ಆಗುತ್ತಿದೆ.
ನಗರದಲ್ಲಿನ ದಿ ಸದರನ್ ಗ್ಯಾಸ್ ಏಜೆನ್ಸಿ ಕಂಪನಿಯ ಮುಖ್ಯ ಕಚೇರಿ ಗೋವಾ ನಗರದಲ್ಲಿ, ಇದ್ದು ಈ ಏಜೆನ್ಸಿ ಷೇರುದಾರರ ಸಹಭಾಗಿತ್ವದಲ್ಲಿ ತನ್ನ ಸೇವೆಯನ್ನು ಒದಗಿಸುತ್ತಿದೆ.
ಇಲ್ಲಿಯ ದಿ. ಸದರನ್ ಗ್ಯಾಸ್ ಏಜೆನ್ಸಿಯಿಂದ ದಾವಣಗೆರೆ ನಗರದ ಸಿಜೆ ಆಸ್ಪತ್ರೆ, ಬಾಪೂಜಿ ಆಸ್ಪತ್ರೆ, ಹೈಟೆಕ್ ಆಸ್ಪತ್ರೆ, ಚಿತ್ರದುರ್ಗ ಸರ್ಕಾರಿ ಆಸ್ಪತ್ರೆ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳು, ಬಸವೇಶ್ವರ ಆಸ್ಪತ್ರೆ ಮತ್ತು ದಾವಣಗೆರೆ ಎಂಎಸ್‌ಪಿಎಲ್ ಏಜೆನ್ಸಿ ಮೂಲಕ ಹಲವಾರು ಸಣ್ಣ ಹಾಗೂ ದೊಡ್ಡ ಆಸ್ಪತ್ರೆಗಳಿಗೆ, ಹರಪನಹಳ್ಳಿ, ಹೂವಿನಹಡಗಲಿ, ಮಲೇಬೆನ್ನೂರು, ಹೊನ್ನಾಳಿ, ರಾಣೇಬೆನ್ನೂರು ನಗರದ ಸಾರ್ವಜನಿಕ ಆಸ್ಪತ್ರೆಗಳಿಗೆ ಇಲ್ಲಿಂದ ಮೆಡಿಕಲ್ ಆಕ್ಸಿಜನ್ ಸರಬರಾಜು ಆಗುತ್ತಿದೆ. ಬಳ್ಳಾರಿ, ಶಿವಮೊಗ್ಗ, ಹಾವೇರಿಯಿಂದಲೂ ಬೇಡಿಕೆ ಬರುತ್ತಿದೆ.
ಕೊರೊನಾ ರೋಗದ ಸಮಸ್ಯೆ ಇಲ್ಲದ ಸಮಯದಲ್ಲಿ ಇಲ್ಲಿನ ಗ್ಯಾಸ್ ಏಜೆನ್ಸಿಗೆ ಅಷ್ಟೊಂದು ಬೇಡಿಕೆ ಇರಲಿಲ್ಲ. ಸಹಜವಾದ ಸ್ಥಿತಿಯಲ್ಲಿಯೇ ಪೂರೈಕೆ ಮಾಡುತ್ತ ಸಾಗಿತ್ತು. ಆದರೆ ಕೊರೊನಾ ಹೆಚ್ಚಾದಂತೆ ಬೇಡಿಕೆಯ ಪ್ರಮಾಣವು ಸಹ ಹೆಚ್ಚಾಗಿದ. ಇಲ್ಲಿನ ಗ್ಯಾಸ್ ಏಜೆನ್ಸಿಯಿಂದ ನಗರದ ಬಹುತೇಕ ಸಣ್ಣ ಕೈಗಾರಿಕೆಗಳಿಗೆ ಹಾಗೂ ಗ್ರಾಸಿಂ , ಕಾರ್ಗಿಲ್, ಸೇರಿದಂತೆ ಇತರೆ ದೊಡ್ಡ ಕಂಪನಿಗಳಿಗೆ ಕೂಡ ಆಕ್ಸಿಜನ್ ಸರಬರಾಜು ಆಗುತ್ತದೆ. ಆದರೆ ಈಗ ಮೆಡಿಕಲ್ ಆಕ್ಸಿಜನ್ ಪೂರೈಕೆ ಬಿಟ್ಟರೆ ಉಳಿದ ಯಾವುದೇ ರೀತಿಯ ಆಕ್ಸಿಜನ್ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ.
ದಿ ಸದರನ್ ಗ್ಯಾಸ್ ಏಜೆನ್ಸಿಯು ಸಾರ್ವಜನಿಕರ ಹಿತದೃಷ್ಟಿಯಿಂದ ಮೆಡಿಕಲ್ ಆಕ್ಸಿಜನ್ ಪೂರೈಸಲು ಮಾತ್ರ ಆದ್ಯತೆ ನೀಡುತ್ತಿದೆ. ಸರ್ಕಾರ ಲಾಕ್ಡೌನ್ ಮಾಡಿರುವುದರಿಂದ ಕೈಗಾರಿಕೆಗಳಿಂದ ಮತ್ತು ವೆಲ್ಡಿಂಗ್ ವರ್ಕ್ಶಾಪ್ಗಳಿಂದ ಬೇಡಿಕೆಯೂ ಕಡಿಮೆ ಇದೆ.
– ವಿ. ನಾಗರಾಜ್, ಮ್ಯಾನೇಜರ್, ದಿ. ಸದರನ್ ಗ್ಯಾಸ್ ಏಜೆನ್ಸಿ ಹರಿಹರ
ಇಲ್ಲಿ ಬೇರೆ ಬೇರೆ ಇರುವ ಹೈಪ್ಲೊರ್ ಆಕ್ಸಿಜನ್, ಆರ್ಗನ್, ಡಿಎ, ಕಾರ್ಬನ್ ಡೈಆಕ್ಸೈಡ್, ನೈಟ್ರೋಜನ್, ಸೇರಿದಂತೆ ಹಲವು ರೀತಿಯ ಆಕ್ಸಿಜನ್‌ಗಳ ತಯಾರಿಕೆ ಇದ್ದರೂ, ಸದ್ಯಕ್ಕೆ ಅವುಗಳ ಸರಬರಾಜು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಮೆಡಿಕಲ್ ಆಕ್ಸಿಜನ್ ಮಾತ್ರ ಪೂರೈಸಲಾಗುತ್ತಿದೆ. ದಿನಕ್ಕೆ 10 ಟನ್‌ನಷ್ಟು ಆಕ್ಸಿಜನ್ ಅನ್ನು ಟ್ಯಾಂಕರ್ ಹಾಗೂ ಸಿಲಿಂಡರ್ ಮೂಲಕ ಸರಬರಾಜು ಮಾಡಲಾಗುತ್ತಿದೆ.
ಏಜೆನ್ಸಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಮೆಡಿಕಲ್ ಆಕ್ಸಿಜನ್ ಪೂರೈಸಲು ಬೇಡಿಕೆ ಬರುತ್ತಿರುವುದರಿಂದ ಅದನ್ನು ಸರಬರಾಜು ಮಾಡುವಂತೆ ತೋರಣಗಲ್ ಜಿಂದಾಲ್ ಕಂಪನಿಗೆ ಇಂಡೆಟ್ ಹಾಕಲಾಗಿದೆ. ಅವರು ಹೆಚ್ಚಿನ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಸಲು ಮುಂದಾದರೆ ಶೇಖರಣೆ ಮಾಡುವುದಕ್ಕೆ ಬೇಕಾದ ಎಲ್ಲಾ ಸಿದ್ಧತೆ ಸಹ ಮಾಡಲಾಗಿದೆ.
ಗ್ಯಾಸ್ ಏಜೆನ್ಸಿಯಲ್ಲಿ ಆಕ್ಸಿಜನ್ ಪೂರೈಕೆ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಪ್ರತಿದಿನ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹಾಗೂ ಸಿಪಿಐ ಸತೀಶ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ. ಇಲ್ಲಿನ ಸಿಬ್ಬಂದಿಗಳಾದ ಮ್ಯಾನೇಜರ್ ವಿ. ನಾಗರಾಜ್, ಇಂಜಿನಿಯರ್ ಮಧುಕೇಶವ್, ದೀಕ್ಷಿತ್ ಆಕ್ಸಿಜನ್ ಪೂರೈಸಲು ಬೆಳಗ್ಗೆಯಿಂದ ತಡರಾತ್ರಿವರೆಗೆ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ.
ಎಂ. ಚಿದಾನಂದ ಕಂಚಿಕೇರಿ,
[email protected]