ಕೋವಿಡ್ ಲಸಿಕಾ ಕೇಂದ್ರದಲ್ಲಿನ ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ

ದಾವಣಗೆರೆ, ಏ.30- ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿನ ಕೋವಿಡ್ ಲಸಿಕಾ ಕೇಂದ್ರದಲ್ಲಿನ ಅವ್ಯವಸ್ಥೆಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಲಸಿಕೆ ಸಿಗುತ್ತದೆಂದು ಸಾರ್ವಜನಿಕರು ಮೋತಿ ವೀರಪ್ಪ ಕಾಲೇಜು ಲಸಿಕಾ ಕೇಂದ್ರಕ್ಕೆ ಅಲೆದಾಡುತ್ತಿದ್ದರು. ಗುರುವಾರ ರಾತ್ರಿ ನಗರಕ್ಕೆ ಲಸಿಕೆ ಬಂದಿದ್ದರಿಂದ ಶುಕ್ರವಾರ ಬೆಳಿಗ್ಗೆ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿತ್ತು.

ಆದರೆ ಸರದಿ ಸಾಲಿನಲ್ಲಿ ನಿಂತಿದ್ದವರನ್ನು ಬಿಟ್ಟು `ಫ್ರಂಟ್ ಲೈನ್ ವರ್ಕರ್ಸ್ ‘ ನೆಪ ಹೇಳುತ್ತಾ ಅಲ್ಲಿನ ಸಿಬ್ಬಂದಿ ತಮಗೆ ಬೇಕಾದವರಿಗೆ ಲಸಿಕೆ ನೀಡುತ್ತಿದ್ದಾರೆ ಎಂದು ಸರದಿಯಲ್ಲಿ ನಿಂತಿದ್ದವರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ಸಾರ್ವಜನಿಕರ ಮನವೊಲಿಸಬೇಕಾಯಿತು. 

ಕಳೆದ ಎರಡು ದಿನಗಳಿಂದ ಲಸಿಕೆಗಾಗಿ ಬಂದು ಹೋಗುತ್ತಿದ್ದೆವು. ಇಂದು ಲಸಿಕೆ ನೀಡುವುದಾಗಿ ತಿಳಿದು ಬೆಳಿಗ್ಗೆಯಿಂದ ಸರದಿ ಸಾಲಿನಲ್ಲಿ ನಿಂತಿದ್ದೇವೆ. ನಮ್ಮನ್ನು ಕಡೆಗಣಿಸಿ ವೈದ್ಯರು, ಮೆಡಿಕಲ್ ವಿದ್ಯಾರ್ಥಿಗಳು, ಸರ್ಕಾರಿ ಅಧಿಕಾರಿಗಳಿಗೆ ಲಸಿಕೆ ನೀಡಲಾಗುತ್ತಿದೆ ಎಂದು ಹಿರಿಯ ನಾಗರಿಕರೊಬ್ಬರು ಕಿಡಿಕಾರಿದರು.

ಬೆಳಿಗ್ಗೆ 9.30 ರಿಂದ ಮಧ್ಯಾಹ್ನದವರೆಗೆ ಸುಮಾರು 500 ಜನರಿಗೆ ಲಸಿಕೆ ನೀಡಲಾಯಿತು. ಲಸಿಕೆಗಾಗಿ ಬಂದಿದ್ದವರು ಲಸಿಕೆ ಸಿಗದೆ ವಾಪಾಸ್ ತೆರಳಿದರು. ಪೋಷಕರ ಬದಲಾಗಿ ಮಕ್ಕಳು, ಯುವಕರು ನಿಂತು ಸರದಿಯಲ್ಲಿ ನಿಂತು ನಂತರ ಪೋಷಕರಿಗೆ ಜಾಗ ಮಾಡಿಕೊಡುತ್ತಿದ್ದುದು ಕಂಡು ಬಂತು.

ಎಂ.ಸಿ.ಸಿ. ಎ ಹಾಗೂ ಬಿ ಬ್ಲಾಕ್, ನಿಜಲಿಂಗಪ್ಪ ಬಡಾವಣೆ, ವಿದ್ಯಾನಗರ, ಶಾಮನೂರು, ಪಿ.ಜೆ. ಬಡಾವಣೆ ಮುಂತಾದ ಕಡೆಯಿಂದ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಲು ಆಗಮಿಸಿದ್ದರು. ವಿಕಲಚೇತನರು ಹಾಗೂ 80 ರಿಂದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರೂ ಸಹ ಆಗಮಿಸಿದ್ದರು.

ಲಸಿಕಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆಗಮಿಸಿದ್ದಾಗ, ಹಿರಿಯರೊಬ್ಬರು ಶಾಮಿಯಾನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ಕೂಡಲೇ ಜಿಲ್ಲಾಧಿಕಾರಿಗಳು ಶಾಮಿಯಾನ ಹಾಗೂ ಕುರ್ಚಿಗಳ ವ್ಯವಸ್ಥೆ ಮಾಡಿದರು.

ಸಮರ್ಪಕ ಮಾಹಿತಿ ನೀಡದ ಜಿಲ್ಲಾಡಳಿತ: ಲಸಿಕೆ ನೀಡುವ ಸ್ಥಳ, ದಿನಾಂಕ ಹಾಗೂ ಸಮಯವನ್ನು ಜಿಲ್ಲಾಡಳಿತ ಸಾರ್ವಜನಿಕರಿಗೆ ತಿಳಿಸಿದರೆ ಅನುಕೂಲವಾಗುತ್ತದೆ. ಹೀಗೆ ಎರಡು ಮೂರು ದಿನ ಬಿಟ್ಟು ಒಂದು ದಿನ ದಿಢೀರನೆ ಲಸಿಕೆ ಹಾಕಲು ಆರಂಭಿಸಿದರೆ ಹೇಗೆ?. ಜಿಲ್ಲಾಡಳಿತ ಲಸಿಕೆ ನೀಡುವ ಕುರಿತು ಮಾಹಿತಿ ನೀಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಭಾಷಾನಗರ, ಎಸ್.ಎಂ. ಕೃಷ್ಣ ನಗರ, ಭಾರತ್ ಕಾಲೋನಿ, ನಿಟುವಳ್ಳಿ, ಆಜಾದ್ ನಗರ, ಹೆಚ್.ಕೆ.ಆರ್. ನಗರ ಸೇರಿದಂತೆ  ನಗರದ ವಿವಿಧ ಭಾಗಗಳಲ್ಲಿ ಲಸಿಕೆ ನೀಡಲಾಗುತ್ತದೆ. ಆದರೆ ಎಲ್ಲಿ, ಯಾವಾಗ, ಯಾವ ಲಸಿಕೆ ನೀಡುತ್ತಾರೆ ಎಂಬ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ.  ಅಲ್ಲದೆ ಈ ಎಲ್ಲಾ ಲಸಿಕೆ ಕೇಂದ್ರಗಳಲ್ಲಿ ಸಾರ್ವಜನಿಕರನ್ನು ಕಡೆಗಣಿಸಿ ತಮಗೆ ಬೇಕಾದವರನ್ನು ಕರೆಯಿಸಿಕೊಂಡು ಲಸಿಕೆ ನೀಡುತ್ತಿದ್ದಾರೆ ಎಂಬ ಬಲವಾದ ಆರೋಪವೂ ಕೇಳಿ ಬರುತ್ತಿದೆ.

error: Content is protected !!